ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವವನ್ನು ಹಬ್ಬದಂತೆ ಆಚರಿಸುವ ಕನ್ನಡಪ್ರೇಮಿ

ಅತಿಥಿಗಳಿಗೆ ಕನ್ನಡ ಪುಸ್ತಕ ಕೊಡುಗೆ; ನಾಡು, ನುಡಿಯ ಅಭಿಮಾನ ಬೆಳೆಸುವ ಚನ್ನವೀರಪ್ಪ
Last Updated 31 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಹೂವಿನಹಡಗಲಿ: ಯುಗಾದಿ, ದಸರಾ, ದೀಪಾವಳಿ ಹಬ್ಬ ಆಚರಿಸುವ ಮಾದರಿಯಲ್ಲಿ ಕರ್ನಾಟಕ ಏಕೀಕರಣದ ಸವಿನೆನಪಿಗಾಗಿ ಆಚರಿಸುವ ಕನ್ನಡ ರಾಜ್ಯೋತ್ಸವವು ಎಲ್ಲರ ಮನ, ಮನೆಯ ಹಬ್ಬವಾಗಬೇಕು ...

ಇದು, ತಾಲ್ಲೂಕಿನ ಹಿರೇಹಡಗಲಿ ಗ್ರಾಮದ ನಿವೃತ್ತ ಪಂಚಾಯಿತಿಅಭಿವೃದ್ಧಿ ಅಧಿಕಾರಿ ಬಿದರಹಳ್ಳಿ ಚನ್ನವೀರಪ್ಪನವರ ಆಶಯ.

ಈ ರೀತಿಯ ಕನ್ನಡ ಪ್ರೇಮವನ್ನು ಅವರು ಬರೀ ಬಾಯಿ ಮಾತಲ್ಲಿ ವ್ಯಕ್ತಪಡಿಸುತ್ತಿಲ್ಲ. ಕಳೆದ ಎರಡು ವರ್ಷದಿಂದ ತಮ್ಮ ಮನೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ನಾಡು, ನುಡಿಯ ಅಭಿಮಾನವನ್ನು ಬೆಳೆಸುತ್ತಿದ್ದಾರೆ.

ಈ ವರ್ಷದ ರಾಜ್ಯೋತ್ಸವ ಆಚರಣೆಗೂ ಅವರ ಮನೆ ಸಿಂಗಾರಗೊಂಡಿದೆ. ಆಳೆತ್ತರದ ಭುವನೇಶ್ವರಿಯ ಭಾವಚಿತ್ರ, ಡಿ.ವಿ.ಜಿ., ದ.ರಾ. ಬೇಂದ್ರೆ, ಕುವೆಂಪು ಅವರ ಕವಿತೆಗಳು, ಕನ್ನಡದ ನುಡಿಗಟ್ಟುಗಳಿಂದ ಮನೆಯ ಗೋಡೆಗಳನ್ನು ಅಲಂಕರಿಸಿದ್ದಾರೆ.

ರಾಜ್ಯೋತ್ಸವ ಪ್ರಯುಕ್ತ ಮನೆಯಲ್ಲಿ ಭುವನೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ನೆರೆಹೊರೆಯವರು, ಸ್ನೇಹಿತರನ್ನು ಆಹ್ವಾನಿಸುತ್ತಾರೆ. ಕಾರ್ಯಕ್ರಮಕ್ಕೆ ಬರುವ ಎಲ್ಲ ಅತಿಥಿಗಳಿಗೆ ಸಿಹಿ ನೀಡಿ, ಕನ್ನಡ ಪುಸ್ತಕವನ್ನು ಕೊಡುಗೆಯಾಗಿ ನೀಡುತ್ತಾರೆ.

ಈ ಎಲ್ಲ ಆಚರಣೆಗೆ ಚನ್ನವೀರಪ್ಪನವರ ಪತ್ನಿ ವಿಜಯಾ ಸಾಥ್ ನೀಡುತ್ತಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಮಹಿಳೆಯರಿಗೆ ಅವರು ಉಡಿ ತುಂಬಿ ಕನ್ನಡ ಪುಸ್ತಕವನ್ನು ಕೈಗಿಡುತ್ತಾರೆ. ಇಡೀ ದಿನ ಅವರ ಮನೆಯಲ್ಲಿ ಕನ್ನಡ ಡಿಂಡಿಮ ಮೊಳಗುತ್ತದೆ. ಈ ರೀತಿಯ ಆಚರಣೆ ಮೂಲಕ ಈ ಕುಟುಂಬ ನಾಡು, ನುಡಿಯ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡಿದೆ.

ಕಾರ್ಯಕ್ರಮಕ್ಕೆ ಮುಂಚಿತವಾಗಿ ಅವರು ಆಸಕ್ತ ಗೆಳೆಯರಿಗೆ ಕರಪತ್ರವನ್ನು ಹಂಚಿ, ನೀವೂ ಮನೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ ಎಂದು ಪ್ರೇರೇಪಿಸುತ್ತಾರೆ. ‘ಇತರೆ ಸಾಂಪ್ರದಾಯಿಕ ಹಬ್ಬಗಳಂತೆ ರಾಜ್ಯೋತ್ಸವವು ಮನೆಮನೆಯ ಹಬ್ಬವಾಗಬೇಕು. ನೀವು ಆಚರಿಸಲು ಪ್ರಯತ್ನಿಸಿ, ಸಾಧ್ಯವಾಗದಿದ್ದರೆ ನಮ್ಮ ಮನೆಯ ಆಚರಣೆಗೆ ಬನ್ನಿ’ ಎಂದು ಆಹ್ವಾನ ನೀಡುತ್ತಾರೆ.

ಅವರ ಕನ್ನಡಾಭಿಮಾನ ಬರೀ ನವೆಂಬರ್ ಒಂದಕ್ಕೆ ಮಾತ್ರ ಸೀಮಿತವಾಗಿಲ್ಲ. ಕನ್ನಡ ಭಾಷೆ ಬೆಳವಣಿಗೆಗೆ ನಿರಂತರ ಪ್ರಯತ್ನಿಸುತ್ತಾರೆ. ಮನೆಗೆ ಆಗಮಿಸುವ ಅತಿಥಿಗಳು, ಸ್ನೇಹಿತರಿಗೆ ಪುಸ್ತಕಗಳನ್ನು ನೀಡಿ ಕನ್ನಡ ಪ್ರೀತಿಯನ್ನು ಹಂಚುತ್ತಾರೆ. ಕೀಳು ಅಭಿರುಚಿ ಬೆಳೆಸುವ ಧಾರವಾಹಿಗಳನ್ನು ನೋಡುವ ಬದಲು ಕನ್ನಡ ಪುಸ್ತಕಗಳನ್ನು ಓದುವಂತೆ ಅವರು ಪ್ರೇರೇಪಿಸುತ್ತಾರೆ.

‘ಕನ್ನಡ ತಾಯಿಗೆ ದೇವರ ಜಗುಲಿಯಲ್ಲಿ ಸ್ಥಾನ ನೀಡಬೇಕೆಂಬ ಯೋಚನೆ ಮನದಲ್ಲಿ ಮೂಡಿತು. ಎರಡು ವರ್ಷದಿಂದ ರಾಜ್ಯೋತ್ಸವವನ್ನು ಮನೆಯಲ್ಲೇ ವಿಶೇಷವಾಗಿ ಆಚರಿಸುತ್ತಿದ್ದೇವೆ. ಈ ವರ್ಷದ ಆಚರಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗೆ ಈ ಬಾರಿ ‘ಸುಧಾ’ ವಾರ ಪತ್ರಿಕೆ ನೀಡಲು ಯೋಜಿಸಿದ್ದೇನೆ’ ಎಂದು ಚನ್ನವೀರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT