ಬುಧವಾರ, ಏಪ್ರಿಲ್ 14, 2021
30 °C
, ವಿದ್ಯಾರ್ಥಿಗಳಿಗೆ

ನಿರಂತರ ಓದು, ಪರಿಶ್ರಮದಿಂದ ಯಶಸ್ಸು: ಯುಪಿಎಸ್‌ಸಿ ಟಾಪರ್‌ ಅಶ್ವಿಜ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ನಿರಂತರವಾದ ಓದು, ಕಠಿಣ ಪರಿಶ್ರಮ ಪಟ್ಟರೆ ಐ.ಎ.ಎಸ್. ಪರೀಕ್ಷೆಯನ್ನು ಸುಲಭವಾಗಿ ಎದುರಿಸಿ, ಯಶಸ್ಸು ಗಳಿಸಬಹುದು’ ಎಂದು ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ 423ನೇ ರ್‍ಯಾಂಕ್‌ ಗಳಿಸಿ, ಸದ್ಯ ಚಂಡೀಗಡದಲ್ಲಿ ಐ.ಎ.ಎಸ್‌. ತರಬೇತಿ ಪಡೆಯುತ್ತಿರುವ ಬಿ.ವಿ. ಅಶ್ವಿಜ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸೋಮವಾರ ನಗರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ದೃಢವಾದ ಆತ್ಮವಿಶ್ವಾಸ ಹೊಂದಿರಬೇಕು. ನಮ್ಮ ದೈನಂದಿನ ಜೀವನದಲ್ಲಿ ನಿತ್ಯ ನಡೆಯುತ್ತಿರುವ ಘಟನೆಗಳು ಸೂಕ್ಷ್ಮವಾಗಿ ಅವಲೋಕಿಸಬೇಕು. ಮನಸ್ಸಿನ ಮೇಲೆ ಏಕಾಗ್ರತೆ ಕಾಯ್ದುಕೊಳ್ಳಬೇಕು. ನಿತ್ಯ ಕನಿಷ್ಠ ಒಂದು ಕನ್ನಡ, ಇಂಗ್ಲಿಷ್‌ ಪತ್ರಿಕೆ ಓದಬೇಕು. ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು. ಆರಂಭದಿಂದ ಎನ್‌.ಸಿ.ಇ.ಆರ್‌.ಟಿ. ಪುಸ್ತಕಗಳನ್ನು ಓದುವುದನ್ನು ರೂಢಿ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

'ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಜ್ಞಾನ, ಪ್ರತಿಭೆ ಇರುತ್ತದೆ. ಯಾರಿಗೆ ಯಾವುದರಲ್ಲಿ ಆಸಕ್ತಿ ಇರುತ್ತದೆಯೋ ಅದರಲ್ಲಿ ಮುಂದುವರಿಯಬೇಕು. ಒಬ್ಬರಂತೆ ಮತ್ತೊಬ್ಬರು ಆಗಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಉತ್ತಮವಾದ ಕನಸು ಕಾಣಬೇಕು. ಅದನ್ನು ಸಾಕಾರಗೊಳಿಸಲು ಶ್ರಮಿಸಬೇಕು. ಅಬ್ದುಲ್‌ ಕಲಾಂ ಅವರು ತಮಿಳುನಾಡಿನ ಒಂದು ಸಣ್ಣ ಗ್ರಾಮದಲ್ಲಿ ಜನಿಸಿ, ನಂತರ ದೊಡ್ಡ ವಿಜ್ಞಾನಿ, ರಾಷ್ಟ್ರಪತಿಯಾದರು. ಅವರು ಚಿಕ್ಕಂದಿನಲ್ಲೇ ವಿಜ್ಞಾನಿಯಾಗಬೇಕೆಂಬ ಕನಸು ಕಂಡಿದ್ದರು. ಅಂತಹ ಕನಸುಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ಕಾಣಬೇಕು’ ಎಂದು ಹೇಳಿದರು.

‘ಐ.ಎ.ಎಸ್‌. ಪರೀಕ್ಷೆಯನ್ನು ಕೆಲವರು ಕಬ್ಬಿಣದ ಕಡಲೆಯೆಂದು ಭಾವಿಸಿದ್ದಾರೆ. ಆದರೆ, ವಾಸ್ತವದಲ್ಲಿ ಅದು ಹಾಗಿಲ್ಲ. ಯಾರು ಕಷ್ಟಪಡುತ್ತಾರೆ ಅವರು ಯಶಸ್ವಿಯಾಗುತ್ತಾರೆ. ಅದಕ್ಕೆ ವಿಶೇಷ ಪ್ರತಿಭೆ ಬೇಕಿಲ್ಲ. ಈ ವರ್ಷ ರಾಜಸ್ತಾನದಲ್ಲಿ 99 ಜನ ಐ.ಎ.ಎಸ್‌. ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಆ ರಾಜ್ಯದಲ್ಲಿ ಹೇಳಿಕೊಳ್ಳುವಂತಹ ಸೌಕರ್ಯಗಳು ಇಲ್ಲದಿದ್ದರೂ ಅಷ್ಟೊಂದು ಜನ ಸಾಧನೆ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಎಲ್ಲ ಸೌಲಭ್ಯಗಳಿದ್ದರೂ ಹೆಚ್ಚಿನವರು ಐ.ಎ.ಎಸ್‌.ಗೆ ಒಲವು ತೋರಿಸುತ್ತಿಲ್ಲ’ ಎಂದರು.

‘ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ಸಿಗಬೇಕು. ಶಿಕ್ಷಿತರಾದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಬೇಕು. ಹೀಗೆ ಮಾಡುವುದರಿಂದ ಮಕ್ಕಳು ಸ್ವಾವಲಂಬಿಯಾಗಿ ಬೆಳೆಯುತ್ತಾರೆ. ಅವರಿಂದ ದೇಶದ ಪ್ರಗತಿಗೂ ಸಹಕಾರವಾಗುತ್ತದೆ’ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ. ಜೋಷಿ ಮಾತನಾಡಿ, ‘ಅಶ್ವಿಜ ಅವರು ಉತ್ತಮ ಸಾಧನೆ ಮಾಡಿ ನಮ್ಮ ಜಿಲ್ಲೆ, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅವರಿಂದ ಪ್ರೇರಣೆ ಪಡೆದು ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಆಸಕ್ತಿ ತೋರಬೇಕು. ಪೋಷಕರು ಮಕ್ಕಳಿಗೆ ಎಲ್ಲ ರೀತಿಯ ನೆರವು ಕೊಡಬೇಕು’ ಎಂದು ತಿಳಿಸಿದರು. 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ರಾಜ್ಯ ಪರಿಷತ್ತಿನ ಸದಸ್ಯ ಎಸ್‌. ಬಸವರಾಜ, ಖಜಾಂಚಿ ಯರ್ರಿಸ್ವಾಮಿ ಹಾಗೂ 35 ಇಲಾಖೆಗಳ ಪ್ರತಿನಿಧಿಗಳು ಪ್ರಮಾಣ ಸ್ವೀಕರಿಸಿದರು. ನಂತರ ಎಲ್ಲರನ್ನೂ ಸನ್ಮಾನಿಸಲಾಯಿತು.

ಖಜಾನೆ ಅಧಿಕಾರಿ ಶಶಿಧರ್‌ ಲಾಯದಗುಲ್ದಿ, ಎನ್‌.ಎಸ್‌. ರೇವಣಸಿದ್ದಪ್ಪ, ರಾಜಶೇಖರ, ಕೆ. ಬಸವರಾಜ, ಕೆ.ಸಿ. ಭೀಮಣ್ಣ, ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಜತ್ತಿ, ಅಶ್ವಿಜ ಅವರ ತಂದೆ ವೆಂಕಟರಮಣ ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು