ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಂಡರೆಲ್ಲ ಸುಡುಗಾಡಿಗೆ ಹೋಗಿ: ಕಾರ್ಯಕರ್ತರ ಅಸಮಾಧಾನ

Last Updated 15 ಡಿಸೆಂಬರ್ 2019, 13:28 IST
ಅಕ್ಷರ ಗಾತ್ರ

ಹೊಸಪೇಟೆ: ಭಾನುವಾರ ನಗರದಲ್ಲಿ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಕೆಲ ಕಾರ್ಯಕರ್ತರು ಪಕ್ಷದ ಮುಖಂಡರ ವಿರುದ್ಧ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದರು.

ಪಕ್ಷದ ಹಿರಿಯ ಮುಖಂಡ ಸೂರ್ಯನಾರಾಯಣ ರೆಡ್ಡಿ ಮಾತನಾಡಲು ಮುಂದಾದಾಗ, ಅದಕ್ಕೆ ಸತ್ಯನಾರಾಯಣ ಸೇರಿದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ‘ಎಲ್ಲಾ ಮುಖಂಡರೇ ಮಾತನಾಡಿ ಸುಡುಗಾಡಿಗೆ ಹೋಗಿ. ಕಾರ್ಯಕರ್ತರಿಗೆ ಬೆಲೆ ಇಲ್ಲ. ಹೀಗಾಗಿಯೇ ಪಕ್ಷ ಹಾಳಾಗಿದೆ. ಉಪಚುನಾವಣೆಯಲ್ಲಿ ಸೋಲಾಗಿದೆ. ಇದೇ ರೀತಿ ನಡೆದುಕೊಂಡರೆ ನಾವು ಬಿಜೆಪಿಗೆ ಹೋಗುತ್ತೇವೆ’ ಎಂದರು.

‘ರೆಡ್ಡಿಯವರೇ ನೀವು ಇಲ್ಲಿ ಮನೆ ಮಾಡಿದರೆ ನಿಮಗೆ ಎಲ್ಲಾ ರೀತಿಯ ಬೆಂಬಲ ಕೊಡುತ್ತೇವೆ. ಆಕಾಶದಲ್ಲಿ ಬಂದು, ಆಕಾಶದಲ್ಲಿ ಹೋಗ್ಬೇಡಿ. ಪಕ್ಷದ ಕಾರ್ಯಕರ್ತರೇ ಮುಖ್ಯ ಎಂದು ಎಲ್ಲಾ ಮುಖಂಡರು ಹೇಳುತ್ತಾರೆ. ಆದರೆ, ಕಾರ್ಯಕರ್ತರು ಏನು ಮಾಡಬೇಕು. ಹೇಗೆ ಪಕ್ಷ ಸಂಘಟಿಸಬೇಕು ಎನ್ನುವುದರ ಕುರಿತು ತರಬೇತಿ ಕೊಡಬೇಕು. ಚುನಾವಣೆ ಬಂದಾಗಲಷ್ಟೇ ನಾಯಕರು ಬರುತ್ತಾರೆ. ನಿರಂತರವಾಗಿ ಬಂದು, ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿ ಇರಬೇಕು. ಕಾರ್ಯಕರ್ತರ ಕಷ್ಟ ಅರಿತು ಅವರಿಗೆ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

‘ಕಾಂಗ್ರೆಸ್‌ ಪಕ್ಷದಲ್ಲಿ ಕೋಟಿ ಕೋಟಿ ಹಣ ಇದೆ. ಆದರೆ, ಅದು ಎಲ್ಲಿಗೆ ಹೋಗಿದೆ. ಕುತಂತ್ರಿಗಳಿಂದ ಪಕ್ಷಕ್ಕೆ ಸೋಲಾಗಿದೆ. ಮೊದಲು ಅವರನ್ನು ಹೊರಹಾಕಬೇಕು. ಆಗ ಪಕ್ಷ ಕಟ್ಟಲು ಸಾಧ್ಯ’ ಎಂದು ಸತ್ಯನಾರಾಯಣ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸೂರ್ಯನಾರಾಯಣ ರೆಡ್ಡಿ, ‘ನಾನು ಇಲ್ಲಿಗೆ ಬಂದು ಮನೆ ಮಾಡಿ, ಚುನಾವಣೆ ಗೆಲ್ಲುವುದು ಮುಖ್ಯವಲ್ಲ. ಇಲ್ಲಿ ಸ್ಥಳೀಯವಾಗಿ ಅನೇಕ ನಾಯಕರು ಇದ್ದಾರೆ. ಅವರನ್ನು ಬೆಳೆಸೋಣ. ನಾನು ಒಬ್ಬ ಕೆಲಸಗಾರ. ಪಕ್ಷ ಎಲ್ಲಿ ಕೆಲಸ ಮಾಡುವಂತೆ ಸೂಚಿಸುತ್ತದೆಯೋ ಅಲ್ಲಿ ಕೆಲಸ ಮಾಡುತ್ತೇನೆ. ಸೋಲಿನಿಂದ ಕಾರ್ಯಕರ್ತರಿಗೆ ನೋವಾಗಿರುವುದು ಗೊತ್ತಿದೆ. ಹಾಗಂತ ಸಿಟ್ಟಿನಲ್ಲಿ ಬಿಜೆಪಿ ಹೋಗುತ್ತೇನೆ ಎಂದು ಹೇಳಬೇಕಿಲ್ಲ’ ಎಂದರು.

‘ಕಾಂಗ್ರೆಸ್‌ ಪಕ್ಷ ಸತ್ತಿಲ್ಲ. ಯಾರು ಬರಲಿ, ಹೋಗಲಿ ಅದು ಸದಾ ಜೀವಂತವಾಗಿ ಇರುತ್ತದೆ. ಆದರೆ, ಬಿಜೆಪಿ ಹಾಗಲ್ಲ. ಇಂದು ಇದ್ದ ಹಾಗೆ ನಾಳೆ ಇರುವುದಿಲ್ಲ. ನರೇಂದ್ರ ಮೋದಿ, ಬಿ.ಎಸ್‌. ಯಡಿಯೂರಪ್ಪ ನಂತರ ಬಿಜೆಪಿಯಲ್ಲಿ ಯಾರಿದ್ದಾರೆ? ಒಂದು ನಯಾ ಪೈಸೆ ಖರ್ಚು ಮಾಡದೇ ವಿಜಯನಗರ ಕ್ಷೇತ್ರದ ಚುನಾವಣೆಯಲ್ಲಿ 55,000 ಮತಗಳನ್ನು ಪಡೆದಿದ್ದೇವೆ. ಅಸಮಾಧಾನ, ಭಿನ್ನಾಭಿಪ್ರಾಯ ಸಹಜ. ವಿಜಯನಗರದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಆದರೆ, ಬಳ್ಳಾರಿಯಲ್ಲಿ 108 ಗುಂಪುಗಳಿವೆ’ ಎಂದು ಹೇಳಿದರು.

ಶಾಸಕ ಜೆ.ಎನ್‌. ಗಣೇಶ್‌ ಮಾತನಾಡಿ, ‘ಪಕ್ಷದ ಎಲ್ಲಾ ಮುಖಂಡರು ಉತ್ತಮ ರೀತಿಯಲ್ಲಿ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಬಿಜೆಪಿಯವರು ಹಣದ ಹೊಳೆ ಹರಿಸಿ ಚುನಾವಣೆ ಗೆದ್ದಿದ್ದಾರೆ’ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಸೋಮಪ್ಪ, ಮುಖಂಡರಾದ ಗುಜ್ಜಲ್‌ ನಾಗರಾಜ್‌, ಗುಜ್ಜಲ್‌ ರಘು, ಭಾಗ್ಯಲಕ್ಷ್ಮಿ ಭರಾಡೆ, ತಾರಿಹಳ್ಳಿ ವೆಂಕಟೇಶ್‌, ನಿಂಬಗಲ್‌ ರಾಮಕೃಷ್ಣ, ಎಂ.ಸಿ. ವೀರಸ್ವಾಮಿ, ಭಾಗ್ಯಲಕ್ಷ್ಮಿ ಭರಾಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT