ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಬಳಿಯ ಬಿಳಿಕಲ್ ಸಂರಕ್ಷಿತ ಅರಣ್ಯದಲ್ಲಿನ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಹುಲಿ ಮತ್ತು ಸಿಂಹ ಸಫಾರಿಗೆ ಮುಹೂರ್ತ ನಿಗದಿಯಾಗಿದೆ.
‘ಜೂ. 21ರಂದು ಮಧ್ಯಾಹ್ನ 3.30ಕ್ಕೆ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರು ಅಧಿಕೃತವಾಗಿ ಚಾಲನೆ ಕೊಡುವರು’ಎಂದು ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಸದಸ್ಯ ಬಿ.ಪಿ. ರವಿ ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
’ಈಗಾಗಲೇ ಉದ್ಯಾನಕ್ಕೆ ನಾಲ್ಕು ಹುಲಿ, ಎರಡು ಸಿಂಹಗಳನ್ನು ತರಲಾಗಿದೆ. ಅವುಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿವೆ. ಹಾಗಾಗಿ ಸಫಾರಿಗೆ ಚಾಲನೆ ಕೊಡಲು ತೀರ್ಮಾನಿಸಲಾಗಿದೆ. ವರ್ಷದ ಹಿಂದೆಯೇ ಇಂದಿರಾ ಪ್ರಿಯದರ್ಶಿನಿ ಜಿಂಕೆ ಉದ್ಯಾನ ಆರಂಭಗೊಂಡಿದೆ‘ ಎಂದು ವಿವರಿಸಿದರು.
’ಹುಲಿ, ಸಿಂಹ ಮತ್ತು ಜಿಂಕೆ ಸಫಾರಿ ನೋಡಲು ವಯಸ್ಕರಿಗೆ ₹100, ಐದು ವರ್ಷದೊಳಗಿನ ಮೇಲಿನ ಮಕ್ಕಳಿಗೆ ₹50 ನಿಗದಿಪಡಿಸಲಾಗಿದೆ. ಉದ್ಯಾನಕ್ಕೆ ಸೇರಿದ ವಾಹನದಲ್ಲಿ ಎಂಟು ಕಿ.ಮೀ. ಕ್ರಮಿಸಿ ಸಫಾರಿ ನೋಡಬಹುದು. ಎರಡ್ಮೂರು ತಿಂಗಳಲ್ಲಿ ಪ್ರಾಣಿಗಳ ಪುನರ್ವಸತಿ ಕೇಂದ್ರ ಸಹ ಆರಂಭಿಸಲಾಗುವುದು.ಶೀಘ್ರದಲ್ಲೇ ಉದ್ಯಾನಕ್ಕೆ ಇನ್ನೆರಡು ಸಿಂಹ, ಒಂದು ಹುಲಿ ತರಲಾಗುವುದು. ಉದ್ಯಾನದಲ್ಲಿ ಮಕ್ಕಳ ಪರಿಸರ, ಪ್ರಾಣಿ–ಪಕ್ಷಿಗಳ ಸಂರಕ್ಷಣೆ ಕುರಿತು ತಿಳಿವಳಿಕೆ ಮೂಡಿಸಲಾಗುವುದು‘ ಎಂದು ಮಾಹಿತಿ ಹಂಚಿಕೊಂಡರು.
’ರಾಜ್ಯದಲ್ಲಿ ಬನ್ನೇರುಘಟ್ಟ, ಶಿವಮೊಗ್ಗ ನಂತರ ಸಫಾರಿ ಇರುವುದು ವಾಜಪೇಯಿ ಜೈವಿಕ ಉದ್ಯಾನದಲ್ಲಿ. ಉತ್ತರ ಕರ್ನಾಟಕದ ಮೊದಲ ಸಫಾರಿ ಎಂಬ ಕೀರ್ತಿಗೆ ಇದು ಪಾತ್ರವಾಗಲಿದೆ. ಉತ್ತರ ಕರ್ನಾಟಕದ ಕೊಂಡಿಯಂತಿರುವ ಹೊಸಪೇಟೆ ಸಮೀಪ ಉದ್ಯಾನ ನಿರ್ಮಾಣಗೊಂಡಿರುವುದರಿಂದ ಸಾಕಷ್ಟು ಜನ ಇಲ್ಲಿಗೆ ಭೇಟಿ ಕೊಡಬಹುದು‘ ಎಂದು ಭರವಸೆ ವ್ಯಕ್ತಪಡಿಸಿದರು.
’ವಿಶ್ವವಿಖ್ಯಾತ ಹಂಪಿ, ಕನ್ನಡ ವಿಶ್ವವಿದ್ಯಾಲಯ, ದರೋಜಿ ಕರಡಿಧಾಮಕ್ಕೆ ಹೊಂದಿಕೊಂಡಂತೆ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ ಇರುವುದರಿಂದ ಸ್ಥಳೀಯರು ಸೇರಿದಂತೆ ದೇಶ–ವಿದೇಶದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡಬಹುದು. ಉದ್ಯಾನ ಆರಂಭದಿಂದ ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗಲಿದೆ. ಜತೆಗೆ ಸ್ಥಳೀಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳು ಸಿಗಲಿವೆ‘ ಎಂದು ತಿಳಿಸಿದರು.
’ತುಂಗಭದ್ರಾ ಜಲಾಶಯದ ಮೇಲ್ಮಟ್ಟದ ಕಾಲುವೆಯ ನೀರು ಬಳಸಿಕೊಳ್ಳುವುದಕ್ಕೆ ಅನುಮತಿ ಸಿಕ್ಕಿದೆ. ಆ ನೀರನ್ನು ತಂದು ಉದ್ಯಾನದಲ್ಲಿರುವ ಕೆರೆಗಳನ್ನು ತುಂಬಿಸಲಾಗುವುದು. ಜೈವಿಕ ಉದ್ಯಾನದ ಸುತ್ತಮುತ್ತ 80ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ನೆಲೆಸಿವೆ. ಪಕ್ಷಿ ಪ್ರಿಯರು ಅವುಗಳನ್ನು ವೀಕ್ಷಿಸಬಹುದು. ಪ್ರವಾಸಿಗರು ತಂಗಲು ಸಾಕಷ್ಟು ಐಷಾರಾಮಿ ಹೋಟೆಲ್‌ಗಳಿವೆ‘ ಎಂದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ ಕುಮಾರ, ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಯಶಪಾಲ್ ಕ್ಷೀರಸಾಗರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.