ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಗೆ ಬೆಳೆದು ಯಶ ಕಂಡ ಬಳ್ಳಾರಿಯ ರೈತ

Last Updated 1 ಜುಲೈ 2019, 19:30 IST
ಅಕ್ಷರ ಗಾತ್ರ

ತೋರಣಗಲ್ಲು: ಅತಿವೃಷ್ಟಿ, ಅನಾವೃಷ್ಟಿಯ ಹೊಡೆತಕ್ಕೆ ಕೃಷಿಯಿಂದ ರೈತರು ವಿಮುಖರಾಗುತ್ತಿದ್ದಾರೆ. ಆದರೆ, ಅದನ್ನೇ ಸವಾಲಾಗಿ ಸ್ವೀಕರಿಸಿ, ಮಲ್ಲಿಗೆ ಹೂ ಬೆಳೆದು ಯಶಸ್ಸಿನ ದಾರಿಯಲ್ಲಿ ಮುನ್ನಡೆದಿದ್ದಾರೆ ಕುಡಿತಿನಿಯ ರೈತ ಹೂಗಾರ ಚಂದ್ರಪ್ಪ.

ಚಂದ್ರಪ್ಪ ಅವರ ಮನೆತನದವರು ಇತರೆ ರೈತರಂತೆ ಮೆಕ್ಕೆಜೋಳ, ಶೇಂಗಾ, ಹತ್ತಿ, ಬೆಳೆಯುತ್ತಿದ್ದರು. ಚಂದ್ರಪ್ಪ ಕೂಡ ಅದನ್ನು ಮುಂದುವರೆಸಿಕೊಂಡು ಹೋದರು. ಆದರೆ, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಕೈಸುಟ್ಟುಕೊಂಡರು. ನಂತರ ಮಲ್ಲಿಗೆಯತ್ತ ಮುಖ ಮಾಡಿದರು. ಅದರಲ್ಲಿ ಯಶಸ್ಸು ಸಿಕ್ಕಿರುವುದರಿಂದ ಈಗ ಹೂಗಳಷ್ಟೇ ಬೆಳೆಯುತ್ತಿದ್ದಾರೆ.

ದುಂಡುಮಲ್ಲಿಗೆ, ದೊಡ್ಡಮಲ್ಲಿಗೆ, ಮಲ್ಲಿಗೆ ಹೂ ಬೆಳೆಸುತ್ತಿದ್ದಾರೆ.ಒಂದು ಎಕರೆ ಜಮೀನಿನಲ್ಲಿ ಕೊಳವೆ ಬಾವಿಯನ್ನು ಕೊರೆಸಿ, ನೀರಿಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಉತ್ತಮ ಗುಣಮಟ್ಟದ ವಿವಿಧ ತಳಿಗಳ ಮಲ್ಲಿಗೆ ಸಸಿಗಳನ್ನು ನಾಟಿ ಮಾಡಿ ಅಧಿಕ ಇಳುವರಿ ಪಡೆಯುತ್ತಿದ್ದಾರೆ. ಚಂದ್ರಪ್ಪನವರ ಕುಟುಂಬ ಸದಸ್ಯರು ಮನೆಯಲ್ಲೇ ಮಲ್ಲಿಗೆ ಹೂಗಳನ್ನು ಹೆಣೆದು, ಮಾರಾಟ ಮಾಡುತ್ತಾರೆ. ಪಟ್ಟಣದ ಮಾರುಕಟ್ಟೆಯಲ್ಲಿ ಅವರ ಮಕ್ಕಳಾದ ಸಂತೋಷ ಮತ್ತು ಮಂಜುನಾಥ ಮಲ್ಲಿಗೆ ಹೂವಿನ ಮಳಿಗೆ ನಡೆಸುತ್ತಾರೆ. ಮದುವೆ, ಸಭೆ–ಸಮಾರಂಭಗಳಿಗೆ ಹೂವಿನ ಹಾರ, ಹೂ ಪೂರೈಸುತ್ತಾರೆ.

ಕುಟುಂಬ ಸದಸ್ಯರ ಜತೆ ಹೊರಗಿನವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಹಾಕಿರುವ ಎಲ್ಲ ಬಂಡವಾಳ ಹೋಗಿ ತಿಂಗಳಿಗೆ ಕನಿಷ್ಠ ₹15 ಸಾವಿರ ಆದಾಯ ಗಳಿಸುತ್ತಿದ್ದಾರೆ. ಒಮ್ಮೆಯೂ ಮಾರುಕಟ್ಟೆಯ ಸಮಸ್ಯೆಯಾಗಿಲ್ಲ. ಜನರೇ ಅವರ ಬಳಿ ಬಂದು ಖರೀದಿಸುತ್ತಾರೆ.

‘ಮಲ್ಲಿಗೆ ಹೂವಿನ ಗಿಡಗಳು ಬಹಳ ಕಡಿಮೆ ನೀರಿನಲ್ಲಿ ಬೆಳೆಯುತ್ತವೆ. ಸ್ವಂತ ಕೊಳವೆಬಾವಿ ಇದೆ. ಬೇರೆಯವರನ್ನು ಅವಲಂಬಿಸಿಲ್ಲ. ಕೃಷಿ ಇಲಾಖೆಯ ಸಹಾಯ ಪಡೆದು ಹನಿ ನೀರಾವರಿ ವ್ಯವಸ್ಥೆ ಮಾಡುವ ಯೋಜನೆ ಇದೆ. ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವುದರ ಬದಲು ಹೂ ಬೆಳೆದು ಅಧಿಕ ಲಾಭ ಗಳಿಸಬಹುದು’ ಎಂದು ಚಂದ್ರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT