ಬುಧವಾರ, ಜುಲೈ 28, 2021
28 °C
ಎಸ್ಸೆಸ್ಸೆಲ್ಸಿ ಪರೀಕ್ಷೆ ಅನುಷ್ಠಾನ ಪೂರ್ವಭಾವಿ ಸಭೆ

ಮತದಾನ ಕೇಂದ್ರದಂತೆ ಪರೀಕ್ಷಾ ಕೇಂದ್ರ: ಉಪವಿಭಾಗಾಧಿಕಾರಿ ಶೇಕ್‌ ತನ್ವೀರ್‌ ಆಸಿಫ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹೊಸಪೇಟೆ: ‘ಕೋವಿಡ್‌–19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಸಲ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳು ಮತದಾನ ಕೇಂದ್ರಗಳ ಮಾದರಿಯಲ್ಲಿ ಸಜ್ಜುಗೊಳಿಸಿ, ಪರೀಕ್ಷೆ ನಡೆಸಲಾಗುವುದು’ ಎಂದು ಉಪವಿಭಾಗಾಧಿಕಾರಿ ಶೇಕ್‌ ತನ್ವೀರ್‌ ಆಸಿಫ್‌ ತಿಳಿಸಿದರು.

ಶುಕ್ರವಾರ ನಗರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಅನುಷ್ಠಾನ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಪ್ರತಿ ಪರೀಕ್ಷಾ ಕೇಂದ್ರದ 200 ಮೀಟರ್‌ ದೂರದಲ್ಲಿ ಗೆರೆ ಹಾಕಲಾಗುವುದು. ಪೋಷಕರು ಅಲ್ಲಿಯೇ ಅವರ ಮಕ್ಕಳನ್ನು ಬಿಟ್ಟು ಹೋಗಬೇಕು. ವಿದ್ಯಾರ್ಥಿಗಳನ್ನು ಹೊರತುಪಡಿಸಿ ಯಾರೊಬ್ಬರೂ ಅನಗತ್ಯವಾಗಿ ಪರೀಕ್ಷಾ ಕೇಂದ್ರ ಪ್ರವೇಶಿಸುವಂತಿಲ್ಲ. ಅಂತವರನ್ನು ತಡೆಯುವ ಜವಾಬ್ದಾರಿ ಪೊಲೀಸರಿಗೆ ವಹಿಸಲಾಗಿದ್ದು, ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂದು ಸೂಚಿಸಿದರು.

‘ಎಲ್ಲ ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರದಲ್ಲಿ ಅಂತರದಿಂದ ವಿದ್ಯಾರ್ಥಿಗಳನ್ನು ನಿಲ್ಲಿಸಿ, ಒಬ್ಬೊಬ್ಬರಿಗೆ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿ ಒಳಗೆ ಕಳುಹಿಸಬೇಕು. ಆವರಣದಲ್ಲಿ ಹೆಚ್ಚುವರಿಯಾಗಿ ಫಲಕಗಳನ್ನು ಅಳವಡಿಸಬೇಕು. ಅದರ ಬಳಿ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಬೇಕು. ಪ್ರವೇಶ ಪತ್ರ ನೋಡಿ ವಿದ್ಯಾರ್ಥಿಗೆ ನಿಗದಿಪಡಿಸಿರುವ ಕೊಠಡಿ ಸಂಖ್ಯೆ ತಿಳಿಸಬೇಕು. ಯಾವುದೇ ಕಾರಣಕ್ಕೂ ದಟ್ಟಣೆ ಉಂಟಾಗಬಾರದು’ ಎಂದು ತಿಳಿಸಿದರು.

‘ಈ ಹಿಂದೆ ಒಂದು ಕೊಠಡಿಯಲ್ಲಿ 24 ಮಕ್ಕಳನ್ನು ಕೂರಿಸಲಾಗುತ್ತಿತ್ತು. ಈ ವರ್ಷ 20 ವಿದ್ಯಾರ್ಥಿಗಳನ್ನು ಕೂರಿಸಿ ಪರೀಕ್ಷೆ ಬರೆಸಲಾಗುವುದು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರು ಸೂಪರಿಟೆಂಡೆಂಟ್‌, ಎರಡು ಸ್ಕ್ವಾಡ್‌ ನಿಯೋಜಿಸಲಾಗುವುದು. ಉಪ ಪರೀಕ್ಷಾ ಕೇಂದ್ರಗಳಿಗೆ ಒಬ್ಬೊಬ್ಬರು ಇರುವರು’ ಎಂದರು.

‘ಪಿಯುಸಿ ಪರೀಕ್ಷೆಯನ್ನು ಬಹಳ ಯಶಸ್ವಿಯಾಗಿ ನಡೆಸಿದ್ದೇವೆ. ಅದೇ ರೀತಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೂಡ ನಡೆಯಬೇಕು. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ಗೊಂದಲ, ಮಾರ್ಗಸೂಚಿ ಉಲ್ಲಂಘನೆಯಾದರೆ ಅದಕ್ಕೆ ಆಯಾ ಕೇಂದ್ರದ ಸೂಪರಿಟೆಂಡೆಂಟ್‌ ಅವರನ್ನು ಹೊಣೆ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು. ಬಹಳ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು’ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಭಾಸ್ಕರ್‌ ಮಾತನಾಡಿ, ‘ಎರಡು ಪರೀಕ್ಷಾ ಕೇಂದ್ರಗಳಿಗೆ ಒಬ್ಬ ವೈದ್ಯ, 200 ಮಕ್ಕಳಿಗೆ ತಲಾ ಒಬ್ಬ ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು ಇರುತ್ತಾರೆ. ಕೊರೊನಾ ರೋಗ ಲಕ್ಷಣಗಳು ಕಂಡು ಬಂದಲ್ಲಿ ಅವರನ್ನು ಪ್ರತ್ಯೇಕಿಸುವ ಕೆಲಸ ಮಾಡುವರು. ಪರೀಕ್ಷಾ ಮುಗಿಯುವ ತನಕ ಆರೋಗ್ಯ ಕಾರ್ಯಕರ್ತರು ಅಲ್ಲಿಯೇ ಇರುವರು’ ಎಂದು ಮಾಹಿತಿ ನೀಡಿದರು.
ತಹಶೀಲ್ದಾರ್‌ಗಳಾದ ಎಚ್‌. ವಿಶ್ವನಾಥ್‌, ರೇಣುಕಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್‌.ಕೆ. ಶ್ರೀಕುಮಾರ, ನಗರಸಭೆ ಪೌರಾಯುಕ್ತೆ ಪಿ. ಜಯಲಕ್ಷ್ಮಿ, ಡಿವೈಎಸ್ಪಿ ವಿ. ರಘುಕುಮಾರ, ಸಿಪಿಐಗಳಾದ ಪ್ರಸಾದ್‌ ಗೋಖಲೆ, ಮೇಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌.ಡಿ. ಜೋಶಿ ಇದ್ದರು.

ಪರೀಕ್ಷಾ ಕೇಂದ್ರಗಳು

24 - ಒಟ್ಟು ಪರೀಕ್ಷಾ ಕೇಂದ್ರಗಳು

17 - ಮುಖ್ಯ ಪರೀಕ್ಷಾ ಕೇಂದ್ರಗಳು

07 - ಉಪ ಪರೀಕ್ಷಾ ಕೇಂದ್ರಗಳು

12 - ಹೊಸಪೇಟೆಯಲ್ಲಿ

04 - ಮರಿಯಮ್ಮನಹಳ್ಳಿ

03 - ಕಮಲಾಪುರ

03 - ಕಂಪ್ಲಿ

2 - ಗಾದಿಗನೂರು

‘ಸೋಂಕು ಇದ್ದವರಿಗೆ ಪೂರಕ ಪರೀಕ್ಷೆ’

‘ಕೊರೊನಾ ಸೋಂಕು ದೃಢಪಟ್ಟವರಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದಿಲ್ಲ. ಅವರು ಪೂರಕ ಪರೀಕ್ಷೆ ಬರೆಯಬಹುದು. ಆದರೆ, ಅದನ್ನು ಮೊದಲ ಸಲದ ಪರೀಕ್ಷೆಯೆಂದೇ ಪರಿಗಣಿಸಲಾಗುವುದು. ಸೋಂಕಿತ ವಿದ್ಯಾರ್ಥಿಗಳು ಆತಂಕ ಪಡಬೇಕಿಲ್ಲ’ ಎಂದು ಉಪವಿಭಾಗಾಧಿಕಾರಿ ಶೇಕ್‌ ತನ್ವೀರ್‌ ಆಸಿಫ್‌ ಹೇಳಿದರು.

‘ತಾಲ್ಲೂಕಿನಲ್ಲಿ ಸದ್ಯ 33 ಕಂಟೈನ್ಮೆಂಟ್‌ ವಲಯಗಳಿವೆ. ಒಟ್ಟು 63 ಮಕ್ಕಳು ಆ ವಲಯದ ವ್ಯಾಪ್ತಿಗೆ ಬರುತ್ತಾರೆ. ಕಂಟೈನ್ಮೆಂಟ್‌ ವಲಯ, ಬಫರ್‌ ಜೋನ್‌ ಹಾಗೂ ಕ್ವಾರಂಟೈನ್‌ನಲ್ಲಿದ್ದವರಿಗೆ ಪರೀಕ್ಷೆಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.
‘ತಾಲ್ಲೂಕಿನಲ್ಲಿ ಒಟ್ಟು 6,983 ಮಕ್ಕಳು ಪರೀಕ್ಷೆಗೆ ಹೆಸರು ನೋಂದಣಿ ಮಾಡಿಸಿದ್ದು, 200 ಮಕ್ಕಳಿಗೆ ಒಬ್ಬರು ಥರ್ಮಲ್‌ ಸ್ಕ್ರೀನಿಂಗ್‌ ನಡೆಸುವರು. ಪ್ರತಿಯೊಬ್ಬರ ಹೆಸರು, ವಿಳಾಸ ದಾಖಲಿಸಲಾಗುವುದು. ಎಲ್ಲರಿಗೂ ಮಾಸ್ಕ್‌, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. 10.30ಕ್ಕೆ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು 9ಕ್ಕೆ ಕೇಂದ್ರಕ್ಕೆ ಬರಬೇಕು. ಗ್ರಾಮೀಣ ಪ್ರದೇಶದವರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಸಾರಿಗೆ ಸಂಸ್ಥೆಯವರು ನಿಗದಿತ ಸಮಯಕ್ಕೆ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಬೇಕು’ ಎಂದು ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು