ಭಾನುವಾರ, ಮೇ 9, 2021
25 °C
ಅವಧಿ ಮುಗಿದರೂ ನಗರಸಭೆಗೆ ಚುನಾವಣೆಯಿಲ್ಲ; ಶಾಸಕರೂ ಇಲ್ಲ

ಅನಾಥವಾದ ವಿಜಯನಗರ ಕ್ಷೇತ್ರ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಜನರ ಸಮಸ್ಯೆ ಆಲಿಸುವ ಚುನಾಯಿತ ಜನಪ್ರತಿನಿಧಿಗಳಿಲ್ಲದೇ ವಿಜಯನಗರ ಕ್ಷೇತ್ರದ ಮತದಾರರು ಅನಾಥ ಭಾವ ಅನುಭವಿಸುತ್ತಿದ್ದಾರೆ.

ಮಾರ್ಚ್‌ನಲ್ಲಿ ನಗರಸಭೆ ಅವಧಿ ಪೂರ್ಣಗೊಂಡಿದೆ. ಹೊಸದಾಗಿ ಚುನಾವಣೆ ನಡೆಯಬೇಕಿದೆ. ಆದರೆ, ವಾರ್ಡ್‌ವಾರು ಮೀಸಲಾತಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಸದಸ್ಯರಿಬ್ಬರೂ ಹೈಕೋರ್ಟ್‌ ಮೆಟ್ಟಿಲೇರಿರುವ ಕಾರಣ ಚುನಾವಣೆ ನನೆಗುದಿಗೆ ಬಿದ್ದಿದೆ. ಅರ್ಜಿ ವಿಲೇವಾರಿ ಆಗುವವರೆಗೆ ಅನಿವಾರ್ಯವಾಗಿ ಕಾಯಬೇಕಾದ ಪರಿಸ್ಥಿತಿ ಇದೆ.

ಜಿಂದಾಲ್‌ಗೆ ಜಮೀನು ಪರಭಾರೆ ಮಾಡಬಾರದು, ವಿಜಯನಗರ ಜಿಲ್ಲೆ ಮಾಡಬೇಕೆಂಬ ಬೇಡಿಕೆಗಳೊಂದಿಗೆ ಆನಂದ್‌ ಸಿಂಗ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೂರು ತಿಂಗಳಾಗುತ್ತ ಬರುತ್ತಿದೆ. ಅವರ ರಾಜೀನಾಮೆ ಅಂಗೀಕರಿಸದೆ ಶಾಸಕ ಸ್ಥಾನದಿಂದ ಸ್ಪೀಕರ್‌ ಅನರ್ಹಗೊಳಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಶಾಸಕರು ಹೋರಾಟ ಮುಂದುವರೆಸಿದ್ದಾರೆ.

2018ರ ಮೇ ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಆನಂದ್‌ ಸಿಂಗ್‌ ಒಂದು ವರ್ಷ ಕ್ಷೇತ್ರದ ಜನರಿಂದ ದೂರ ಉಳಿದಿದ್ದರು. ಈ ವರ್ಷದ ಜುಲೈನಲ್ಲಿ ಏಕಾಏಕಿ ಜಿಂದಾಲ್‌ ವಿಷಯವಾಗಿ ಸಿಡಿದೆದ್ದು ರಾಜೀನಾಮೆ ನೀಡಿದ್ದರು. ಬಿಜೆಪಿ ಸೇರುವ ಕಾರಣದಿಂದ ಈ ರೀತಿ ಮಾಡಿದ್ದಾರೆ ಎಂಬ ಆರೋಪ, ಮಾತುಗಳು ಕ್ಷೇತ್ರದಾದ್ಯಂತ ಕೇಳಿ ಬಂದಿವೆ. ಒಟ್ಟಿನಲ್ಲಿ ಏನೇ ಇರಲಿ, ಜನರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಬೇಕಾದ ಜನಪ್ರತಿನಿಧಿಗಳೇ ಇಲ್ಲದ ಕಾರಣ ಅಭಿವೃದ್ಧಿ ಕುಂಠಿತಗೊಂಡಿದೆ. ಜನರ ಕೆಲಸಗಳು ಆಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

‘ಚುನಾಯಿತ ಜನಪ್ರತಿನಿಧಿಗಳನ್ನು ಒಳಗೊಂಡ ನಗರಸಭೆಯೇ ಅಸ್ತಿತ್ವದಲ್ಲಿಲ್ಲ. ಶಾಸಕರು ಅನರ್ಹಗೊಂಡಿದ್ದಾರೆ. ಜನ ಯಾರನ್ನು ಭೇಟಿ ಮಾಡಿ ಅವರ ಗೋಳು ಹೇಳಿಕೊಳ್ಳಬೇಕು. ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಆದರೆ, ಸರ್ಕಾರದ ನೂರೆಂಟು ಯೋಜನೆಗಳನ್ನು ಜಾರಿಗೊಳಿಸಬೇಕಾದ ಹೊಣೆಗಾರಿಕೆ ಅವರ ಮೇಲಿದೆ’ ಎಂದು ಸಾಮಾಜಿಕ ಹೋರಾಟಗಾರ ಸೋಮಶೇಖರ್‌ ಬಣ್ಣದಮನೆ ಅಭಿಪ್ರಾಯಪಟ್ಟರು.

‘ಮಳೆಯಿಂದ ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಕೊಳೆಗೇರಿಯಲ್ಲಿ ಜನ ಕನಿಷ್ಠ ಮೌಲ ಸೌಕರ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಯಾರು ಕೂಡ ಸ್ಪಂದಿಸುವವರೇ ಇಲ್ಲ’ ಎಂದರು.

‘ಅಧಿಕಾರಿಗಳ ಕಿವಿ ಹಿಂಡಿ ಕೆಲಸ ಮಾಡುವಂತಹ ಜನಪ್ರತಿನಿಧಿಗಳೇ ಕ್ಷೇತ್ರದಲ್ಲಿ ಇಲ್ಲ. ಹೀಗಿರುವಾಗ ಯಾವ ಕೆಲಸಗಳು ತಾನೇ ಆಗುತ್ತವೆ’ ಎಂದು ಸಾಮಾಜಿಕ ಕಾರ್ಯಕರ್ತ ದುರುಗಪ್ಪ ಪೂಜಾರ ಪ್ರಶ್ನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು