ಗುರುವಾರ , ಅಕ್ಟೋಬರ್ 29, 2020
19 °C
ಹೊಸಪೇಟೆ: ಕೃಷಿ ಹೊಂಡಕ್ಕೆ ಬಿದ್ದು ಮೂರು ಮಕ್ಕಳು ಸಾವು

'ಅತ್ತಿಂದಿತ್ತ ಓಡಾಡ್ತ ಇದ್ದ ಮಕ್ಳು ಕಣ್‍ಮುಚ್ಚಿ ತೆಗೆಯೊದೊರಳಗೆ ನೀರ್‍ಪಾಲಾದ್ವು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳ ಮೃತದೇಹಗಳ ಎದುರಿಗೆ ಸಂಬಂಧಿಕರ ರೋಧನ

ಮರಿಯಮ್ಮನಹಳ್ಳಿ(ಹೊಸಪೇಟೆ ತಾಲ್ಲೂಕು): ‘ಕಣ್ಣಮುಂದೆ ಅತ್ತಿಂದಿತ್ತ ಆಡಾಡ್ತ, ಓಡಾಡ್ತ ಇದ್ದ ಮಕ್ಳು ಕಣ್‍ಮುಚ್ಚಿ ತೆಗೆಯೊದೊರಳಗೆ ನೀರ್‍ಪಾಲಾದ್ವು. ಮದುವೆಯಾಗಿ ಮೂರು ವರ್ಸದ ನಂತ್ರ ಕಂಡ ಕಂಡ ದೇವರಿಗೆ ಹರಕೆ ಹೊತ್ತು ಹುಟ್ಟಿದ ಮಗ ಕಣ್ ಮುಂದೆಯೇ ಕಣ್ ಮುಚ್ಚಿಬಿಟ್ನಲ್ಲೊ, ಅದರಾಗ ಮೂವರಿಗೆ ಇರುವ ಒಂದೊಂದು ಕಂದನ್ನು ಕರೆದುಕೊಂಡುಬಿಟ್ಟೆಲ್ಲೊ...’

ಸಮೀಪದ ಜಿ.ನಾಗಲಾಪುರ ತಾಂಡಾಕ್ಕೆ ಮೂವರು ಮಕ್ಕಳ ಶವ ಬರುತ್ತಿದ್ದಂತೆ ಅವರ ಕುಟುಂಬಸ್ಥರು ಮೇಲಿನಂತೆ ನೆನೆದು ಕಣ್ಣೀರಾದರು.

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಅಂಕನಹಳ್ಳಿ ಗ್ರಾಮಕ್ಕೆ ಕಬ್ಬು ಕಡಿಯುವ ಕೆಲಸಕ್ಕೆ ಗ್ರಾಮಸ್ಥರು ತೆರಳಿದ್ದರು. ಮಂಗಳವಾರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾಗ ಮಕ್ಕಳು ಕಣ್ತಪ್ಪಿಸಿ ಆಟವಾಡುತ್ತ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದರು. 

ಮೃತ ಮೂವರು ಮಕ್ಕಳು ಒಂದೇ ಕುಟುಂಬಕ್ಕೆ ಸೇರಿದವರು. ತಾಂಡಾದ ರವಿನಾಯ್ಕ ಅವರ ಪುತ್ರ ರೋಹಿತ್ (2), ಸಹೋದರ ಅಮರೇಶ್‍ನಾಯ್ಕ ಅವರ ಮಗಳು ಕಾವೇರಿ (2) ಹಾಗೂ ಸಹೋದರಿ ಗಂಗೀಬಾಯಿ (ಸಂಡೂರಿನ ಬಾವಳ್ಳಿತಾಂಡಾ) ಅವರ ಮಗ ಸಂಜೀವ್‍ನಾಯ್ಕ(4) ಮೃತರು.

ಬುಧವಾರ ಮಕ್ಕಳ ಮೃತದೇಹ ಗ್ರಾಮಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು. ಗ್ರಾಮದಲ್ಲಿ ಮೌನ, ದುಃಖ ಆವರಿಸಿಕೊಂಡಿತ್ತು.

1,200 ಜನಸಂಖ್ಯೆ ಇರುವ ಗ್ರಾಮದಲ್ಲಿ 230 ಮನೆಗಳಿವೆ. ಈ ಬಾರಿ ಕೋವಿಡ್‌ ಕಾರಣಕ್ಕಾಗಿ ಹೋದ ತಿಂಗಳು ಮನೆಯಲ್ಲಿ ಹಿರಿಯರನ್ನು ಬಿಟ್ಟು 100 ಕುಟುಂಬಗಳ 350ಕ್ಕೂ ಜನ ಕಬ್ಬು ಕಡೆಯಲು ಮೈಸೂರು, ಮಂಡ್ಯ, ಟಿ.ನರಸೀಪುರಕ್ಕೆ ತೆರಳಿದ್ದರು. 

ಹೋಬಳಿ ವ್ಯಾಪ್ತಿಯಲ್ಲಿ ಬರುವ ತಾಳೇಬಸಾಪುರ ತಾಂಡಾದಲ್ಲಿ ಸುಮಾರು 650 ಜನ, ಗುಂಡಾ ತಾಂಡಾದಲ್ಲಿ 300, ಮರಿಯಮ್ಮನಹಳ್ಳಿ ತಾಂಡಾದಲ್ಲಿ 200ಕ್ಕೂ ಹೆಚ್ಚು ಜನ ಈಗಾಗಲೇ ಕಬ್ಬು ಕಡೆಯಲು ವಲಸೆ ಹೋಗಿದ್ದಾರೆ.

‘ನೋಡ್ರಿ ತಾಂಡಾಗಳಲ್ಲಿ ಬಹುತೇಕ ಕುಟುಂಬಗಳಿಗೆ ಕಬ್ಬು ಕಡೆಯುವ ವೃತ್ತಿ ಜೀವನಾಧಾರ. ಇಲ್ಲಿ ಸಿಗುವ ಕೂಲಿ ಗಿಟ್ಟುವುದಿಲ್ಲ ಎಂದು ಏಳೆಂಟು ತಿಂಗಳು ವಲಸೆ ಹೋಗುತ್ತಾರೆ. ಈ ಬಾರಿ ಮೈಸೂರು, ಮಂಡ್ಯ ಜಿಲ್ಲೆಗಳಿಗೆ ತೆರಳಿದ್ದಾರೆ. ಆದರೆ ಹಿಂದೆ ಎಂದೂ ಇಂತಹ ದುರ್ಘಟನೆಗಳು ಜರುಗಿರಲಿಲ್ಲ. ಏನೂ ಗೊತ್ತಾಗದ ಕೂಸುಗಳು ಸತ್ತಿವೆ’ ಎಂದು ತಾಂಡಾದ ಯುವಕ ಲೋಕ್ಯಾನಾಯ್ಕ ಕಣ್ಣೀರಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು