ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಗೇರಿ ಗ್ರಾಮ: ಪೇಟ, ಮುತ್ತಿನ ಹಾರ ಹಾಕಿ ಗೌರವ

ಬಯಲು ಬಹಿರ್ದೆಸೆ ಮುಕ್ತ ಗ್ರಾಮಕ್ಕೆ ನೂತನ ಪ್ರಯೋಗ
Last Updated 15 ಸೆಪ್ಟೆಂಬರ್ 2021, 4:14 IST
ಅಕ್ಷರ ಗಾತ್ರ

ಕುರುಗೋಡು: ಬೆಳ್ಳಂಬೆಳಿಗ್ಗೆ ನೀರು ತುಂಬಿದ ತಂಬಿಗೆಯೊಂದಿಗೆ ಬಹಿರ್ದೆಸೆಗೆ ತೆರಳುತ್ತಿದ್ದ ಜನರಿಗೆ ಅಚ್ಚರಿ ಕಾದಿತ್ತು. ಐದಾರು ಜನರಿದ್ದ ಗುಂಪೊಂದು ಅವರನ್ನು ತಡೆದು ಕೈಮುಗಿದು ಗುಲಾಬಿ ಹೂ ನೀಡಿ, ಮೈಸೂರು ಪೇಟ, ಮುತ್ತಿನ ಹಾರ ಹಾಕಿ ಗೌರವಿಸಿದರು. ಯಾವುದೇ ಕಾರಣಕ್ಕೂ ಬಯಲು ಬಹಿರ್ದೆಸೆಗೆ ತೆರಳಬೇಡಿ ಎಂದು ಮನವಿ ಮಾಡಿದರು. ಈ ದೃಶ್ಯ ಕಂಡು ಬಂದದ್ದು ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಸುಜಾತಾ ಕುಮಾರಸ್ವಾಮಿ, ಪಿಡಿಒ ರಾಜೇಶ್ವರಿ ಮತ್ತು ಸಿಬ್ಬಂದಿ ತಂಡ ಮಂಗಳವಾರ ಬೆಳಿಗ್ಗೆ ಸಿರಿಗೇರಿ ಗ್ರಾಮದ ಬಸವನಪೇಟೆ, ಶಂಭುಲಿಂಗೇಶ್ವರ ದೇವಸ್ಥಾನ ಮತ್ತು ಮುದ್ದಟನೂರು ರಸ್ತೆಗಳಲ್ಲಿ ಸಂಚರಿಸಿತು.

ಕೈಯಲ್ಲಿ ನೀರಿನ ತಂಬಿಗೆ ಹಿಡಿದು ಬಹಿರ್ದೆಸೆಗೆ ತೆರಳುತ್ತಿದ್ದವರನ್ನು ತಡೆದು ಗುಲಾಬಿ ಹೂ ನೀಡಿ,
ಮೈಸೂರು ಪೇಟ ತೊಡಿಸಿ, ಮುತ್ತಿನಹಾರ ಹಾಕಿ ಗೌರವಿಸಿ ಮನೆಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳವಂತೆ ಮನವಿ ಮಾಡಿ ಜಾಗೃತಿ ಮೂಡಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ಮಾತನಾಡಿ, ಗ್ರಾಮದಲ್ಲಿ ಒಟ್ಟು3,574 ಮನೆಗಳಿಗೆ. ಅವರಲ್ಲಿ 3,218 ಜನರು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. 356 ಮನೆಗಳಲ್ಲಿ ನಿರ್ಮಿಸಿಕೊಂಡಿದ್ದ ಈ ಬಗ್ಗೆ ಅನೇಕ ಬಾರಿ ಗ್ರಾಮದಲ್ಲಿ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅರ್ಜಿಸಲ್ಲಿಸಿಲ್ಲ. ಅವರ ಮನವೊಲಿಸಲು ಸನ್ಮಾನದ ಮಾರ್ಗ ಅನುಸರಿಸಬೇಕಾಯಿತು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಸುಜಾತಕುಮಾರಸ್ವಾಮಿ ಮಾತನಾಡಿ, ಮನೆಯಲ್ಲಿ ಶೌಚಾಲಯವಿದ್ದರೂ ಕೆಲವರು ಬಯಲು ಬಹಿರ್ದೆಸೆ ಅವಲಂಬಿಸಿರುವುದು ಕಂಡುಬಂದಿದೆ. ಎಚ್ಚರಿಕೆಯ ನಂತರವೂ ಮುಂದುವರೆಸಿದರೆ ದಂಡ ವಿಧಿಸಲಾಗುವುದು. ಸರ್ಕಾರದ ಯೋಜನೆಯ ಸದುಪಯೋಗ ಪಡಿಸಿಕೊಂಡು ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಗ್ರಾಮದಲ್ಲಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಎಲ್ಲರೂ ಗ್ರಾಮ ಪಂಚಾಯಿತಿ ಜತೆಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಬಯಲು ಮುಕ್ತ ಶೌಚಾಲಯ ಅಭಿಯಾನಕ್ಕೆ ಕೆಲವು ಜನರು ಸ್ವಯಂಪ್ರೇರಣೆಯಿಂದ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ಕಾರ್ಯದರ್ಶಿ ವೀರೇಶ್ ಗೌಡ, ಬಿ.ರುದ್ರೇಶ್, ಫಯಾಜ್, ಲಿಂಗಪ್ಪ, ಬಸರೆಡ್ಡಿ, ನಾಗರಾಜ್, ಸಂತೋಷ್, ಹೊನ್ನೂರಪ್ಪ, ಮುಖಂಡ ಎಸ್.ಕುಮಾರಸ್ವಾಮಿ, ಅಂಗನವಾಡಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT