ಶನಿವಾರ, ಡಿಸೆಂಬರ್ 5, 2020
25 °C
ಪ್ರತಿ ಹುಣ್ಣಿಮೆಯಂದು ಆರತಿ ಮಹೋತ್ಸವ; ಸಚಿವ ಆನಂದ್‌ ಸಿಂಗ್‌

ಕಣ್ಮನ ಸೆಳೆದ ತುಂಗಾ ಆರತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಂಪಿ (ಹೊಸಪೇಟೆ ತಾಲ್ಲೂಕು): ಇಲ್ಲಿನ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಹರಿಯುವ ತುಂಗಭದ್ರಾ ನದಿ ದಂಡೆಯಲ್ಲಿ ಶುಕ್ರವಾರ ಸಂಜೆ ನಡೆದ ತುಂಗಾ ಆರತಿ ಮಹೋತ್ಸವ ನೆರೆದಿದ್ದವರ ಕಣ್ಮನ ಸೆಳೆಯಿತು.

ಇಡೀ ನದಿ ದಂಡೆಗೆ ವಿಶೇಷ ರೀತಿಯಲ್ಲಿ ಅಲಂಕರಿಸಿದ್ದರು. ನದಿ ಮಧ್ಯ ಇರುವ ಬಂಡೆಗಲ್ಲುಗಳಿಗೆ ವಿಭೂತಿ ಬಳಿದಿದ್ದರು. ಅಲ್ಲಿರುವ ನಂದಿ ವಿಗ್ರಹಗಳಿಗೆ ಹೂವಿನಿಂದ ಸಿಂಗರಿಸಿದ್ದರು. ಕಲ್ಲುಗಳ ಮೇಲೆ ತುಂಗಭದ್ರಾ ಆರತಿ ಬರಹ, ವರಹ, ನಂದಿ ಚಿತ್ರ ಕಂಗೊಳಿಸಿತು. ದೀಪಗಳಿಂದ ಇಡೀ ನದಿಗೆ ಅಲಂಕರಿಸಿದ್ದರಿಂದ ಇಡೀ ಪರಿಸರಕ್ಕೆ ವಿಶೇಷ ಕಳೆ ಬಂದಿತ್ತು. ತುಂಗಾ ಆರತಿಗೆ ಸಾಕ್ಷಿಯಾಗಲು ನದಿ ತಟದಲ್ಲಿ ಕಿಕ್ಕಿರಿದು ಜನ ಸೇರಿದ್ದರು. ತಾಯಿ ಭುವನೇಶ್ವರಿ, ವಿರೂಪಾಕ್ಷೇಶ್ವರನ ಜಯಘೋಷದ ನಡುವೆ ಸಚಿವ ಆನಂದ್ ಸಿಂಗ್ ಅವರು ನದಿಗೆ ಬಾಗಿನ ಸಮರ್ಪಿಸಿ, ತುಂಗೆಗೆ ಆರತಿ ಬೆಳಗಿದರು. ಪಟಾಕಿ ಸುಡುವುದು ನಿಷೇಧಿಸಿದ್ದರಿಂದ ಈ ಸಲ ಆಕಾಶದಲ್ಲಿ ಚಿತ್ತಾರ ಕಾಣಲಿಲ್ಲ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್‌ ಸಿಂಗ್‌, ‘ಇನ್ನೂ ಮುಂದೆ ಪ್ರತಿ ಹುಣ್ಣಿಮೆಯಂದು ತುಂಗಾ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅರ್ಧ ಗಂಟೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ತಿಳಿಸಿದರು.

‘ಹುಣ್ಣಿಮೆ ದಿನ ತುಂಗಾಭದ್ರಾ ಆರತಿಗೆ‌ ಆಗಮಿಸುವ ಜನರಿಗಾಗಿ ಬೆಳಕಿನ ವ್ಯವಸ್ಥೆ, ಕುಳಿತುಕೊಳ್ಳುವುದಕ್ಕೆ ಆಸನ ಸೇರಿದಂತೆ ಇತರೆ ಸೌಕರ್ಯ ಕಲ್ಪಿಸಲಾಗುವುದು. ಎಲ್ಲಿಯವರೆಗೆ ಸೂರ್ಯಚಂದ್ರರು ಇರುತ್ತಾರೋ ಅಲ್ಲಿಯವರೆಗೆ ಹಂಪಿ ಉತ್ಸವ ನಡೆಯುತ್ತದೆ. ತುಂಗಾಭದ್ರಾ ಆರತಿಯೂ ನಡೆಯುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು