ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲ್ಲದ ಮನಸ್ಸಿನಿಂದ ಮತಗಟ್ಟೆಗಳಿಗೆ ಬಂದ ಮತದಾರರು

Last Updated 5 ಡಿಸೆಂಬರ್ 2019, 19:46 IST
ಅಕ್ಷರ ಗಾತ್ರ

ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಉಪಚುನಾವಣೆಗೆ ಮತದಾರರು ಹೆಚ್ಚಿನ ಆಸಕ್ತಿ ತೋರಿಸಲಿಲ್ಲ.

ಅನೇಕರು ಒಲ್ಲದ ಮನಸ್ಸಿನಿಂದ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು. ಮಧ್ಯಾಹ್ನದ ವರೆಗೆ ಮತದಾನದ ಪ್ರಮಾಣ ಹೇಳಿಕೊಳ್ಳುವಂತಹ ರೀತಿಯಲ್ಲಿ ಇರಲಿಲ್ಲ. ಶೇ 50ಕ್ಕಿಂತ ಹೆಚ್ಚಿನ ಮತದಾನವಾಗುವುದು ಅನುಮಾನ ಎಂದು ಜನ ಮಾತಾಡಿಕೊಳ್ಳುತ್ತಿದ್ದರು.

ಅದರಿಂದ ಕಂಗೆಟ್ಟ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಆಯಾ ಬಡಾವಣೆಗಳಲ್ಲಿ ಮನೆ ಮನೆಗಳಿಗೆ ಸುತ್ತಾಡಿ, ‘ದಯವಿಟ್ಟು ಮತಗಟ್ಟೆಗೆ ಹೋಗಿ ಮತದಾನ ಮಾಡಿ’ ಎಂದು ಮನವಿ ಮಾಡಿದರು. ಆಗಷ್ಟೇ ಕೆಲವರು ಮನಸ್ಸಿಲ್ಲದಿದ್ದರೂ ಮತದಾನ ಕೇಂದ್ರಕ್ಕೆ ಬಂದು ಮತ ಹಾಕಿದರು.

ಬೆಳಿಗ್ಗೆ ಏಳು ಗಂಟೆಗೆ ಮತದಾನ ಆರಂಭಗೊಂಡಿತು. ಆದರೆ, ಒಂಬತ್ತು ಗಂಟೆಯ ವರೆಗೆ ಹೆಚ್ಚಿನ ಮತಗಟ್ಟೆಗಳಲ್ಲಿ ಮತದಾರರೇ ಇರಲಿಲ್ಲ. ಚುನಾವಣಾ ಸಿಬ್ಬಂದಿ ಕೆಲಸವಿಲ್ಲದೆ ಸುಮ್ಮನೆ ಕುಳಿತಿದ್ದರು.
ಇಲ್ಲಿನ ಪಟೇಲ್‌ ನಗರ, ಚಿತ್ತವಾಡ್ಗಿ, ಏಳುಕೇರಿ, ಅಮರಾವತಿ, ಎಂ.ಪಿ. ಪ್ರಕಾಶ್‌ ನಗರ ಸೇರಿದಂತೆ ಹಲವೆಡೆ ಮತಗಟ್ಟೆಗಳು ಜನರಿಲ್ಲದೆ ಬಿಕೊ ಎನ್ನುತ್ತಿದ್ದವು. ಮಧ್ಯಾಹ್ನವಾಗುತ್ತಿದ್ದಂತೆ ಜನ ಮನೆಯಿಂದ ಹೊರಗೆ ಬಂದು ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು.

ಒಟ್ಟು 247 ಮತಗಟ್ಟೆಗಳಲ್ಲಿ ಬೆಳಿಗ್ಗೆ ಒಂಬತ್ತರ ವರೆಗೆ ಶೇ 6.5ರಷ್ಟು ಮತದಾನವಾಗಿತ್ತು. ಹನ್ನೊಂದು ಗಂಟೆಗೆ ಶೇ. 20ರ ಗಡಿ ದಾಡಿತ್ತು. ಮಧ್ಯಾಹ್ನ ಚುರುಕು ಪಡೆದ ಮತದಾನ ಪ್ರಕ್ರಿಯೆ, ಮೂರು ಗಂಟೆಗೆ ಶೇ 47.38, ಸಂಜೆ 5ಗಂಟೆಗೆ ಶೇ 58.93ಕ್ಕೆ ಏರಿತು.

ಉಪಚುನಾವಣೆ ಕುರಿತು ಮುದ್ಲಾಪುರದಲ್ಲಿ ಗ್ರಾಮಸ್ಥರನ್ನು ಪ್ರಶ್ನಿಸಿದಾಗ, ‘ನಮ್ಮೂರಿನಲ್ಲಿ ಯಾವುದೇ ಮೂಲಸೌಕರ್ಯ ಇಲ್ಲ. ನಿವೇಶನ ಹಕ್ಕುಪತ್ರಗಳಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ವರ್ಷಗಳಿಂದ ಮನವಿ ಮೇಲೆ ಮನವಿಗಳನ್ನು ಕೊಟ್ಟರೂ ಯಾರೂ ತಲೆಗೆ ಹಾಕಿಕೊಂಡಿಲ್ಲ. ನಾವೇಕೇ ಮತ ಹಾಕಬೇಕು’ ಎಂದು ಪ್ರಶ್ನಿಸಿದರು.

‘ಚುನಾವಣೆ ಬಂದಾಗಲಷ್ಟೇ ನಾವು ನೆನಪಾಗುತ್ತೇವೆ. ನಂತರ ಯಾರೊಬ್ಬರೂ ನಮ್ಮ ಗ್ರಾಮದ ಕಡೆ ತಿರುಗಿಯೂ ನೋಡುವುದಿಲ್ಲ’ ಎಂದು ಗ್ರಾಮದ ಹುಲುಗಪ್ಪ ಹೇಳಿದರು.

ಚಿತ್ತವಾಡ್ಗಿಯ ಬಸವರಾಜ ಮಾತನಾಡಿ, ‘ಈ ಚುನಾವಣೆ ಯಾರಿಗೂ ಬೇಡವಾಗಿದೆ. ಒಂದುವರೆ ವರ್ಷದಲ್ಲಿ ನಾಲ್ಕನೇ ಬಾರಿಗೆ ಮತದಾನ ಮಾಡುತ್ತಿದ್ದೇವೆ. ಪದೇ ಪದೇ ನಡೆಯುತ್ತಿರುವ ಚುನಾವಣೆಗಳಿಂದ ಜನರ ಯಾವ ಕೆಲಸಗಳು ಆಗುತ್ತಿಲ್ಲ. ರಾಜಕಾರಣಿಗಳ ಸ್ವಾರ್ಥಕ್ಕಾಗಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ಈ ವ್ಯವಸ್ಥೆ ಹೋಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT