ಭಾನುವಾರ, ನವೆಂಬರ್ 29, 2020
ನಾಡಹಬ್ಬ ದಸರಾ ಮೊದಲು ಆರಂಭಗೊಂಡಿದ್ದೇ ವಿಜಯನಗರದ ಹಂಪಿಯಲ್ಲಿ

PV Web Exclusive| ‘ದಸರಾ ದಿಬ್ಬ’ ಈಗ ಸ್ಮಾರಕವಷ್ಟೇ!

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಹಂಪಿಯ ‘ಮಹಾನವಮಿ ದಿಬ್ಬ’ ಈಗ ಹೆಸರಿಗಷ್ಟೇ ಸೀಮಿತವಾಗಿದೆ. ಅದೀಗ ಸ್ಮಾರಕವಾಗಿ ಗುರುತಿಸಿಕೊಂಡಿದೆ.

ಮಹಾನವಮಿ ಎಂಬ ಹೆಸರಿನಿಂದ ಗುರುತಿಸಿಕೊಂಡರೂ ಪ್ರತಿವರ್ಷ ಮಹಾನವಮಿಯ ದಿನ ಯಾವ ಸಂಭ್ರಮವೂ ಅಲ್ಲಿರುವುದಿಲ್ಲ. ಈ ಸಂಭ್ರಮ ಮರೆಯಾಗಿ ಶತಮಾನಗಳೇ ಕಳೆದಿವೆ. ಅಂದಹಾಗೆ, ಪ್ರತಿ ವರ್ಷ ಮೈಸೂರಿನಲ್ಲಿ ವಿಜೃಂಭಣೆಯಿಂದ ಜರುಗುವ ನಾಡಹಬ್ಬ ದಸರಾ ಮೊದಲು ಆರಂಭಗೊಂಡದ್ದೆ ವಿಜಯನಗರದ ಹಂಪಿಯಲ್ಲಿ ಎನ್ನುವುದು ವಿಶೇಷ.

ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣೀಭೂತರಾದ ಹಕ್ಕ–ಬುಕ್ಕರು ಹಂಪಿಯ ತುಂಗಭದ್ರಾ ನದಿ ತಟದ ಆನೆಗೊಂದಿಯಲ್ಲಿ ದಸರಾ ಉತ್ಸವ ಆರಂಭಿಸಿದ್ದರು. ನಂತರದ ವರ್ಷಗಳಲ್ಲಿ ವಿಜಯನಗರ ಸಾಮ್ರಾಜ್ಯ ಉತ್ತುಂಗ ಸ್ಥಿತಿಗೆ ತಲುಪಿದಾಗ ಅದು ದೊಡ್ಡ ಉತ್ಸವದ ಸ್ವರೂಪ ಪಡೆದುಕೊಳ್ಳುತ್ತದೆ.


ಮಹಾನವಮಿ ದಿಬ್ಬ

‘ವಿಜಯನಗರ ಸಾಮ್ರಾಜ್ಯದ ಅರಸ ಶ್ರೀ ಕೃಷ್ಣದೇವರಾಯ ಒಡಿಶಾದ ಉದಯಗಿರಿಯಲ್ಲಿ ನಡೆದ ಯುದ್ಧದಲ್ಲಿ ಜಯಭೇರಿ ಗಳಿಸಿ, ಹಿಂತಿರುಗಿದ ನಂತರ ಮಹಾನವಮಿ ದಿಬ್ಬ ನಿರ್ಮಿಸಿದ ಎನ್ನುವುದು ಇತಿಹಾಸದಲ್ಲಿ ದಾಖಲಾಗಿದೆ. 12 ಮೀಟರ್‌ ಎತ್ತರದ ಚೌಕಾಕೃತಿಯಲ್ಲಿರುವ ದಿಬ್ಬ ಉತ್ತರ ದಿಕ್ಕಿಗೆ ಮುಖ ಮಾಡಿದೆ. ದಿಬ್ಬದ ಎದುರು ಹಾಗೂ ಹಿಂಬದಿಯಲ್ಲಿ ಮೆಟ್ಟಿಲುಗಳಿವೆ. ಅರಸರು ಆನೆಯ ಮೇಲೆ ಕುಳಿತುಕೊಂಡು ನೇರವಾಗಿ ದಿಬ್ಬದ ಮೇಲೆ ಬಂದು ಇಳಿಯುತ್ತಿದ್ದರು’ ಎಂದು ವಿವರಿಸುತ್ತಾರೆ ಸಾಹಿತಿ ಮೃತ್ಯುಂಜಯ ರುಮಾಲೆ.

‘ದಿಬ್ಬದ ಮುಂಭಾಗದಿಂದ ಅಂಬಾರಿ ಮೆರವಣಿಗೆ ಹಾದು ಹೋಗುತ್ತಿತ್ತು. ಕೋಲಾಟ, ಸಮಾಳ, ನಂದಿಧ್ವಜ ಮೆರವಣಿಗೆ ನಡೆಯುತ್ತಿತ್ತು. ಕವಾಯತು, ಬೆಂಕಿ ಉಗುಳುವುದು ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಅವರ ವಾರಸುದಾರರಾಗಿದ್ದ ಕೆಳದಿಯವರು ಆ ಪರಂಪರೆಯನ್ನು ಕೆಲಕಾಲ ಮುಂದುವರಿಸಿಕೊಂಡು ಹೋಗಿದ್ದರು. ನಂತರ ಈ ಉತ್ಸವವನ್ನು ಮೈಸೂರಿನ ಅರಸರು ಆರಂಭಿಸಿದರು. ಅದು ಈಗಲೂ ನಡೆಯುತ್ತಿದೆ. ಈಗ ‘ಮೈಸೂರು ದಸರಾ’ ಎಂಬ ಹೆಸರು ಪಡೆದಿದೆ’ ಎಂದು ಮಾಹಿತಿ ಹಂಚಿಕೊಂಡರು.

‘ವಿಜಯನಗರ ಸಾಮ್ರಾಜ್ಯದಲ್ಲಿ ದಸರಾ ಆಚರಣೆಗೆ ವಿಶೇಷ ಮಹತ್ವವಿತ್ತು. ಈ ಕಾರಣಕ್ಕಾಗಿಯೇ ಮಹಾನವಮಿ ದಿಬ್ಬವನ್ನು ರಾಜರ ಖಾಸಾ ಜಾಗದಲ್ಲಿ (ರಾಯಲ್‌ ಎನ್‌ಕ್ಲೋಸರ್‌) ನಿರ್ಮಿಸಲಾಗಿತ್ತು. ಇಡೀ ರಾಜಮನೆತನ ಆ ಉತ್ಸವದಲ್ಲಿ ಭಾಗಿಯಾಗುತ್ತಿತ್ತು. ಒಂಬತ್ತು ದಿನಗಳ ಕಾಲ ಅಲ್ಲಿ ಉತ್ಸವ ನಡೆಯುತ್ತಿತ್ತು. ದಿಬ್ಬದ ಮೇಲೆ ಅರಸರು, ಗಣ್ಯರು ಕುಳಿತುಕೊಂಡರೆ, ಅದರ ಸುತ್ತಲೂ ಜನಸಾಮಾನ್ಯರು ಸೇರುತ್ತಿದ್ದರು’ ಎಂದು ತಿಳಿಸಿದರು.

ದಿಬ್ಬದ ವಿಶೇಷ

ದಿಬ್ಬದ ಸುತ್ತಲೂ ಸುಂದರವಾದ ಕೆತ್ತನೆಗಳಿವೆ. ರಾಜರ ಮೆರವಣಿಗೆ, ಸಂಗೀತ ಕಾರ್ಯಕ್ರಮ, ನೃತ್ಯ, ಜಂಬೂಸವಾರಿ, ಬೇಟೆ, ಜೀವನ ವಿಧಾನ ಸೇರಿದಂತೆ ಹಲವು ಕೆತ್ತನೆಗಳನ್ನು ಅದರ ಮೇಲೆ ನೋಡಬಹುದು. ಅದರ ಮೇಲ್ಭಾಗದಲ್ಲಿ ನಿಂತರೆ ಇಡೀ ಹಂಪಿಯ ಪರಿಸರ ಗೋಚರಿಸುತ್ತದೆ.

ಹಂಪಿ ಉತ್ಸವದಲ್ಲಿ ಬೆಳಕು

‘ಹಂಪಿ ಉತ್ಸವ’ ಹೊರತುಪಡಿಸಿದರೆ ಮಹಾನವಮಿ ದಿಬ್ಬದ ಸುತ್ತಮುತ್ತ ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ. ಉತ್ಸವದ ಸಂದರ್ಭದಲ್ಲಿ ದಿಬ್ಬದ ಪ್ರಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಲೇಸರ್‌ ಶೋ ಮೂಲಕ ಅದರ ಗತವೈಭವ ಪರಿಚಯಿಸಲಾಗುತ್ತದೆ. 

***

ಮಹಾನವಮಿ ದಿಬ್ಬಕ್ಕೆ ದಸರಾ ದಿಬ್ಬ ಎಂಬ ಹೆಸರೂ ಇದೆ. ಜನಮಾನಸದಲ್ಲಿ ಇವೆರಡೂ ಹೆಸರು ಪ್ರಚಲಿತದಲ್ಲಿವೆ. ಚರಿತ್ರೆಯಲ್ಲಿ ಈ ಎರಡೂ ಹೆಸರು ದಾಖಲಾಗಿವೆ.
ಮೃತ್ಯುಂಜಯ ರುಮಾಲೆ, ಸಾಹಿತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು