ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

123 ಕಡೆ ಹಳಿಗಳಿಗೆ ಬೇಕಿದೆ ಕಾವಲು

ಸಾಕ್ಷ್ಯ ನಾಶ: ಪೊಲೀಸರ ಚಾಣಾಕ್ಷ್ಯತೆಯಿಂದ ಕೆಲ ಪ್ರಕರಣಗಳಷ್ಟೇ ಬಯಲು l ಅಪರಿಚಿತ ಮೃತದೇಹಗಳೇ ಹೆಚ್ಚು
Last Updated 14 ಆಗಸ್ಟ್ 2021, 19:43 IST
ಅಕ್ಷರ ಗಾತ್ರ

ಬೆಂಗಳೂರು: ಕೊಲೆಯಂಥ ಅಪರಾಧ ಕೃತ್ಯ ಎಸಗಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆಲ ಆರೋಪಿಗಳು, ಮೃತದೇಹಗಳ ಸಾಕ್ಷ್ಯ ನಾಶಕ್ಕಾಗಿ ರೈಲು ಹಳಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇಂಥ ರೈಲು ಹಳಿಗಳು ಹಾದು ಹೋಗಿರುವ 123 ಸ್ಥಳಗಳನ್ನು ಗುರುತಿಸಿರುವ ಪೊಲೀಸರು, ಅಲ್ಲೆಲ್ಲ ಕ್ಯಾಮೆರಾ ಅಳವಡಿಸುವಂತೆ ಕೋರಿ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದಾರೆ.

ಬೆಂಗಳೂರು ಹಾಗೂ ಹೊರ ಜಿಲ್ಲೆಗಳಲ್ಲಿ ಕೆಲ ಆರೋಪಿಗಳು, ಮೃತದೇಹಗಳನ್ನು ಹಳಿ ಮೇಲೆ ಮಲಗಿಸಿ ‘ಆತ್ಮಹತ್ಯೆ’ ಕಥೆ ಸೃಷ್ಟಿಸುತ್ತಿದ್ದಾರೆ. ಪೊಲೀಸರ ಚಾಣಾಕ್ಷ್ಯತೆಯಿಂದ ಕೆಲ ಪ್ರಕರಣಗಳಷ್ಟೇ ಬಯಲಾಗುತ್ತಿದ್ದು, ಉಳಿದವುಅಪರಿಚಿತ ಮೃತದೇಹ ಪ್ರಕರಣಗಳಾಗಿ ಅಂತ್ಯವಾಗುತ್ತಿವೆ. ರೈಲು ಹರಿದು ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗುವ ಮೃತದೇಹಗಳತನಿಖೆ ರೈಲ್ವೆ ಪೊಲೀಸರಿಗೆ ಸವಾಲಾಗಿ ಪರಿಣಮಿಸುತ್ತಿದೆ.

ಕೆಲವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು, ಕೊಲೆ ಮಾಡಿದ ಮೃತದೇಹಗಳನ್ನು ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಹಳಿ ಮೇಲೆ ಹಾಕುತ್ತಿರುವ ಪ್ರಕರಣಗಳೂ ಇವೆ. ಇಂಥ ಮೃತದೇಹಗಳ ಮೇಲೆ ರೈಲು ಹರಿದು ಹೋಗುತ್ತಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದನ್ನು ಪತ್ತೆ ಮಾಡಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

‘ರೈಲು ಹಳಿ ಮೇಲೆ ಸಿಕ್ಕ ಮೃತದೇಹಗಳು ಛಿದ್ರವಾಗಿರುತ್ತವೆ. ಬಹುತೇಕ ಮೃತದೇಹಗಳ ಗುರುತು ಸಿಗುವುದಿಲ್ಲ. ರಾಜ್ಯದ ಠಾಣೆಗಳಲ್ಲಿ ದಾಖಲಾದ ವ್ಯಕ್ತಿ ನಾಪತ್ತೆ ಪ್ರಕರಣಗಳಿಗೆ ಹೋಲಿಕೆ ಮಾಡಿದಾಗಲೂ ಸುಳಿವು ಲಭ್ಯವಾಗುವುದಿಲ್ಲ. ಇಂಥ ಸಂದರ್ಭದಲ್ಲಿ ಅಪರಿಚಿತ ಮೃತದೇಹವೆಂದು ಘೋಷಿಸಲಾಗುತ್ತದೆ. ಪ್ರತಿ ವರ್ಷ ದಾಖಲಾಗುವ ಪ್ರಕರಣಗಳ ಪೈಕಿ ಶೇ 60ರಷ್ಟು ಪ್ರಕರಣಗಳಲ್ಲಿ ಮೃತದೇಹಗಳ ಪತ್ತೆಯೇ ಆಗುವುದಿಲ್ಲ’ ಎಂದು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಕೆಲ ಪ್ರಕರಣಗಳಲ್ಲಿ ಮೃತದೇಹದ ಮೇಲಿನ ಮಚ್ಚೆ ಹಾಗೂ ಇತರೆ ಯಾವುದಾದರೂ ಗುರುತಿನಿಂದ ವ್ಯಕ್ತಿಯನ್ನು ಪತ್ತೆ ಮಾಡಲಾಗುತ್ತದೆ. ಅಂಥವರ ಕೊಲೆ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಗುರುತು ಸಿಗದ ಪ್ರಕರಣಗಳು ನಮ್ಮ ನಿದ್ದೆಗೆಡಿಸುತ್ತವೆ’ ಎಂದೂ ತಿಳಿಸಿದರು.

ನಿಗಾ ವಹಿಸಲು ಸಿಬ್ಬಂದಿ ಕೊರತೆ; ‘ರಾಜ್ಯದ 123 ಹಳಿ ಸ್ಥಳಗಳಲ್ಲಿ ನಿಗಾ ವಹಿಸಲು ಸಿಬ್ಬಂದಿ ಕೊರತೆ ಇದೆ. ಹೀಗಾಗಿ, ಅಲ್ಲೆಲ್ಲ ಕ್ಯಾಮೆರಾ ಅಳವಡಿಸಲು ರೈಲ್ವೆ ಇಲಾಖೆಯನ್ನ ಕೋರಲಾಗಿದೆ. ಹಳಿಗಳು ರೈಲ್ವೆ ಇಲಾಖೆ ಆಸ್ತಿಯಾಗಿದ್ದು, ಕ್ಯಾಮೆರಾ ಅಳವಡಿಕೆ ಬಗ್ಗೆ ಅವರೇ ಕ್ರಮ ಕೈಗೊಳ್ಳಬೇಕು’ ಎಂದು ರೈಲ್ವೆ ಪೊಲೀಸ್ ಎಸ್ಪಿ ಸಿರಿ ಗೌರಿ ಹೇಳಿದರು.

‘ನಿರ್ಜನ ಸ್ಥಳದಲ್ಲಿರುವ ರೈಲು ಹಳಿ ಬಳಿ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಪರಾಧ ಕೃತ್ಯ ಎಸಗಿದವರು ಮೃತದೇಹ ತಂದು ಎಸೆದು ಸಾಕ್ಷ್ಯ ನಾಶಕ್ಕೂ ಪ್ರಯತ್ನಿಸುತ್ತಿದ್ದಾರೆ. ನಮ್ಮ ಪೊಲೀಸರು, ಚುರುಕಿನ ತನಿಖೆ ಕೈಗೊಂಡು ಸಾಧ್ಯವಾದಷ್ಟು ಪ್ರಕರಣಗಳನ್ನು ಭೇದಿಸುತ್ತಿ
ದ್ದಾರೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT