ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ₹150 ಕೋಟಿ ರಹಸ್ಯ ವಹಿವಾಟು ಪತ್ತೆ

Published 8 ಜನವರಿ 2024, 16:03 IST
Last Updated 8 ಜನವರಿ 2024, 16:03 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಸ್‌ಮಸ್‌ ಹಾಗೂ ವರ್ಷಾಂತ್ಯದ ದಿನಗಳಲ್ಲಿ ರಾಜ್ಯದ ವಿವಿಧೆಡೆ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳು, ರೆಸಾರ್ಟ್‌ಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚಿಸಲು ₹ 150 ಕೋಟಿ ಮೌಲ್ಯದ ಗೋಪ್ಯ ವಹಿವಾಟು ನಡೆಸಿರುವುದನ್ನು ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗ ಪತ್ತೆಮಾಡಿದೆ.

‘ರಾಜ್ಯದ ವಿವಿಧೆಡೆ 242 ಹೋಟೆಲ್‌, ರೆಸ್ಟೋರೆಂಟ್‌, ಬೇಕರಿ ಮತ್ತು ರೆಸಾರ್ಟ್‌ಗಳಲ್ಲಿ ತಪಾಸಣೆ ನಡೆಸಲಾಗಿದೆ. ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್‌ ಸೇವೆ ಒದಗಿಸುವ ಉದ್ಯಮಗಳಲ್ಲೂ ತಪಾಸಣೆ ನಡೆಸಲಾಗಿದೆ. ಈ ಅವಧಿಯಲ್ಲಿ ತೆರಿಗೆ ವಂಚನೆಯ ಹಲವು ಪ್ರಕರಣಗಳನ್ನು ಪತ್ತೆಮಾಡಲಾಗಿದೆ’ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ. ಶಿಖಾ ತಿಳಿಸಿದ್ದಾರೆ.

ತೆರಿಗೆ ವಂಚಿಸಿ ವಹಿವಾಟು ನಡೆಸಿರುವುದು, ಗ್ರಾಹಕರಿಂದ ಸಂಗ್ರಹಿಸಿದ ತೆರಿಗೆ ಮೊತ್ತವನ್ನು ಇಲಾಖೆಗೆ ಸಂದಾಯ ಮಾಡದಿರುವುದು, ಅಕ್ರಮವಾಗಿ ಹೂಡುವಳಿ ತೆರಿಗೆ ಪಡೆದಿರುವುದು, ತೆರಿಗೆ ದರದ ತಪ್ಪು ವರ್ಗೀಕರಣ, ಕ್ಲೌಡ್‌ ಸಂಗ್ರಹದಲ್ಲಿ ವಹಿವಾಟಿನ ಮಾಹಿತಿ ಮುಚ್ಚಿಟ್ಟಿರುವುದು, ನಿಗದಿತ ಮಿತಿಗಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸುತ್ತಿದ್ದರೂ ಜಿಎಸ್‌ಟಿ ನೋಂದಣಿ ಮಾಡಿಸದೇ ಇರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೆಲವು ವರ್ತಕರು ತೆರಿಗೆ ವಂಚಿಸಲು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡಿರುವುದು ಕಂಡುಬಂದಿದೆ. ಕೆಲವು ವರ್ತಕರು ಹಲವು ಕ್ಯೂಆರ್‌ ಕೋಡ್‌ಗಳನ್ನು ಬಳಸಿಕೊಂಡು ಗ್ರಾಹಕರಿಂದ ಹಣ ಪಡೆಯುತ್ತಿದ್ದು, ಕೆಲವು ಕ್ಯೂಆರ್‌ ಕೋಡ್‌ಗಳ ಮೂಲಕ ಸಂಗ್ರಹವಾದ ಹಣದ ಮಾಹಿತಿಯನ್ನು ಮಾತ್ರ ಇಲಾಖೆಗೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಲ್ಯಾಪ್‌ಟಾಪ್‌, ಮೊಬೈಲ್‌, ದತ್ತಾಂಶ ಸಂಗ್ರಹ ಸಾಧನಗಳು ಹಾಗೂ ಡಿಜಿಟಲ್‌ ಸಾಕ್ಷ್ಯಗಳನ್ನು ಕಾರ್ಯಾಚರಣೆ ವೇಳೆ ವಶಪಡಿಸಿಕೊಳ್ಳಲಾಗಿದೆ. ತೆರಿಗೆ ವಂಚಿಸಿರುವ ಹೋಟೆಲ್‌, ರೆಸಾರ್ಟ್‌, ರೆಸ್ಟೋರೆಂಟ್‌ ಮತ್ತು ಬೇಕರಿ ಮಾಲೀಕರ ವಿರುದ್ಧ ಕಾನೂನು ಕ್ರಮದ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ. ಕೆಲವರು ಸ್ವಯಂಪ್ರೇರಣೆಯಿಂದ ತೆರಿಗೆ ಬಾಕಿಯನ್ನು ಪಾವತಿಸಲು ಆರಂಭಿಸಿದ್ದಾರೆ ಎಂದು ಶಿಖಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT