ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಚಲನಚಿತ್ರೋತ್ಸವ| ಜೋರ್ಡನ್‌ನ ‘ಇನ್ಶಲ್ಲಾಹ್‌ ಎ ಬಾಯ್’ ಅತ್ಯುತ್ತಮ ಚಿತ್ರ

15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತೆರೆ
Published 7 ಮಾರ್ಚ್ 2024, 16:06 IST
Last Updated 7 ಮಾರ್ಚ್ 2024, 16:06 IST
ಅಕ್ಷರ ಗಾತ್ರ

ಬೆಂಗಳೂರು: 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಗುರುವಾರ ಮುಕ್ತಾಯಗೊಂಡಿದ್ದು, ಆಸ್ಕರ್‌ಗೆ ಪ್ರವೇಶ ಪಡೆದಿದ್ದ ಅಮ್ಜದ್‌ ರಶೀದ್‌ ನಿರ್ದೇಶನದ ಜೋರ್ಡನ್‌ನ ‘ಇನ್‌ಶಾ ಅಲ್ಲಾಹ್ ಎ ಬಾಯ್’ ಏಷ್ಯನ್ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿತು.

ಚಲನಚಿತ್ರೋತ್ಸವದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ನಡೆಯಿತು. ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಚಿತ್ರವಾಗಿ ಅಮರ್‌ ಎಲ್‌ ನಿರ್ದೇಶನದ ‘ನಿರ್ವಾಣ’ ಪ್ರಶಸ್ತಿ ಗಳಿಸಿದರೆ, ‘ಕಂದೀಲು’ ದ್ವಿತೀಯ ಹಾಗೂ ‘ಆಲಿಂಡಿಯಾ ರೇಡಿಯೋ’ ತೃತೀಯ ಸ್ಥಾನವನ್ನು ಪಡೆದುಕೊಂಡಿವೆ.

ಏಷ್ಯನ್ ವಿಭಾಗದಲ್ಲಿ ರಕ್ಷಿತ್‌ ಶೆಟ್ಟಿ ಅವರ ಪರಂವಃ ಫಿಲ್ಮ್ಸ್ ನಿರ್ಮಿಸಿ, ಸುಮಂತ್‌ ಭಟ್‌ ನಿರ್ದೇಶಿಸಿರುವ ಕನ್ನಡದ ‘ಮಿಥ್ಯ’ ಸಿನಿಮಾ ತೀರ್ಪುಗಾರರ ವಿಶೇಷ ಉಲ್ಲೇಖ ಪ್ರಶಸ್ತಿ ಪಡೆದುಕೊಂಡಿದ್ದು, ಸುಜಯ್‌ ದಹಕೆ ನಿರ್ದೇಶನದ ಮರಾಠಿ ಚಿತ್ರ ‘ಶ್ಯಾಮ್ಜಿ ಆಯಿ’ ಅತ್ಯುತ್ತಮ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ಎಂ.ಎಸ್.ಸತ್ಯು ಅವರಿಗೆ  ‘ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಪ್ರಶಸ್ತಿ  ಸ್ವೀಕರಿಸಿ ಮಾತನಾಡಿದ ಸತ್ಯು, ‘ಸಿನಿಮಾ ಮುಗಿದ ಮೇಲೆ ಸಬ್ಸಿಡಿ ನೀಡುವುದರ ಬದಲು ಸಿನಿಮಾ ನಿರ್ಮಾಣ ಹಂತದಲ್ಲಿಯೇ ಸಬ್ಸಿಡಿ ನೀಡುವತ್ತ ಸರ್ಕಾರ ಗಮನಹರಿಸಬೇಕು’ ಎಂದು ಮನವಿ ಮಾಡಿದರು.

ಚಿತ್ರೋತ್ಸವ ಸಮಿತಿ ಅಧ್ಯಕ್ಷ ತ್ರಿಲೋಕ್ ಚಂದ್ರ, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಚಿತ್ರೋತ್ಸವದ ರಾಯಭಾರಿ ನಟ ಡಾಲಿ ಧನಂಜಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್, ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಸಮಾರಂಭದಲ್ಲಿ ಹಾಜರಿದ್ದರು.

ವ್ಯವಸ್ಥಿತ ಆಯೋಜನೆ: ಚಿತ್ರೋತ್ಸವದ ಆಯೋಜನೆ ಕುರಿತು ಈ ವರ್ಷ ಅಸಮಾಧಾನದ ಮಾತುಗಳು ಕೇಳಿಬಂದಿದ್ದು ಕಡಿಮೆ. ಪಾಸ್‌ ವಿತರಣೆಯಲ್ಲಿ ಯಾವುದೇ ಗೊಂದಲವಿರಲಿಲ್ಲ. ಚಿತ್ರೋತ್ಸವದ ಕೈಪಿಡಿ ಮಾತ್ರ ಹಿಂದಿನ ವರ್ಷಗಳಂತೆ ಈಸಲವೂ ಕೊನೆ ಗಳಿಗೆಯಲ್ಲಿ ಪ್ರೇಕ್ಷಕರ ಕೈಸೇರಿತು. ಚಿತ್ರ ಪ್ರದರ್ಶನಗಳು ಕೂಡ ವೇಳಾಪಟ್ಟಿಯಂತಿಯೇ ನಡೆದವು. ಒಂದೆರಡು ಚಿತ್ರಗಳ ಪ್ರದರ್ಶನದ ವೇಳೆ ತಾಂತ್ರಿಕ ದೋಷಗಳು ಎದುರಾದರೂ ತಕ್ಷಣ ಪರಿಹರಿಸಿ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ಉತ್ತಮ ಪ್ರತಿಕ್ರಿಯೆ ‘ಮೊದಲ ದಿನವೇ ಮೂರೂವರೆ ಸಾವಿರ ಜನ ಭೇಟಿ ನೀಡಿದ್ದಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ ನಾಲ್ಕು ಸಾವಿರ ದಾಟಿತ್ತು. ಸರಾಸರಿ ಮೂರು ಸಾವಿರ ಜನದಂತೆ 20 ಸಾವಿರ ಸಿನಿಮಾಸಕ್ತರು ಈ ಸಲ ಭೇಟಿ ನೀಡಿದ್ದಾರೆ. ಪ್ರತಿನಿತ್ಯ 11 ಪರದೆಗಳಲ್ಲಿ 65 ಚಿತ್ರಗಳು ಪ್ರದರ್ಶನ ಕಂಡಿವೆ. ‘ದಿ ಮಾಂಕ್‌ ಆಂಡ್‌ ದಿ ಗನ್‌‘ ‘ಅನಾಟಮಿ ಆಫ್‌ ಫಾಲ್‌’ ‘ಜೋನ್‌ ಆಫ್‌ ಇಂಟರೆಸ್ಟ್‌’ ಕನ್ನಡದ ‘ಶಿವಮ್ಮ’ ಚಿತ್ರಗಳ ಎಲ್ಲ ಪ್ರದರ್ಶನಗಳಿಗೂ ಪ್ರೇಕ್ಷಕರು ಕಿಕ್ಕಿರಿದಿದ್ದರು. ತೀರ್ಪುಗಾರರು ಸೇರಿ 15 ವಿದೇಶಿ ತಜ್ಞರು ಈ ಸಲ ಭಾಗಿಯಾಗಿದ್ದರು. ಬೇರೆ ರಾಜ್ಯಗಳಿಂದ 90 ಜನ ಅತಿಥಿಗಳು ಆಗಮಿಸಿದ್ದಾರೆ. ಮಾಸ್ಟರ್‌ ಕ್ಲಾಸ್‌ ಸಂವಾದಗಳಿಗೆ ಹಿಂದೆಂದಿಗಿಂತ ಉತ್ತಮ ಪ್ರತಿಕ್ರಿಯೆಯಿತ್ತು’ ಎಂದು ಚಿತ್ರೋತ್ಸವದ ಆಯೋಜಕ ಸಮಿತಿ ಸದಸ್ಯರಾದ ಪಿ.ಶೇಷಾದ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT