ಸೋಮವಾರ, ಮೇ 23, 2022
30 °C
ಸಮಗ್ರ ಮರಳು ನೀತಿ ರೂಪಿಸಲು ಒತ್ತಾಯ

ಲಾರಿ ಮಾಲೀಕರ ಮುಷ್ಕರ ಮೂರನೇ ದಿನಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾರಿ ಮಾಲೀಕರ ಮುಷ್ಕರ ಮೂರನೇ ದಿನಕ್ಕೆ

ಬೆಂಗಳೂರು: ಕಾನೂನುಬದ್ಧವಾಗಿ ಮರಳು ಸಾಗಿಸಲು ಅನುಕೂಲವಾಗುವಂತೆ ಸಮಗ್ರ ಮರಳು ನೀತಿ ರೂಪಿಸಬೇಕೆಂದು ಒತ್ತಾಯಿಸಿ ಲಾರಿ ಮಾಲೀಕರು ಜುಲೈ 7ರಿಂದ ರಾಜ್ಯದಾದ್ಯಂತ ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ.ಮುಷ್ಕರದಿಂದಾಗಿ ಈಗಾಗಲೇ ಶೇ 75 ರಷ್ಟು ಮರಳು ಸಾಗಣೆ ಲಾರಿಗಳು ಸೇವೆ ಸ್ಥಗಿತಗೊಳಿಸಿದ್ದು, ಮರಳು ಪೂರೈಕೆ ಇಲ್ಲದೆ ಕಾಮಗಾರಿಗಳು ಸ್ಥಗಿತಗೊಳ್ಳುವಂತಾಗಿದೆ.`ರಾಜ್ಯದಲ್ಲಿ ಒಟ್ಟು 25 ಸಾವಿರ ಮರಳು ಸಾಗಣೆ ಲಾರಿಗಳಿದ್ದು, ನಿತ್ಯ 12,500 ಲೋಡ್ ಮರಳು ಸಾಗಣೆ ಮಾಡಲಾಗುತ್ತಿದೆ. ಅಂತೆಯೇ, ಬೆಂಗಳೂರು ನಗರದಲ್ಲಿ ಸುಮಾರು 5,000 ಮರಳು ಸಾಗಣೆ ಲಾರಿಗಳಿದ್ದು, ಪ್ರತಿನಿತ್ಯ 2,500 ಲೋಡ್ ಮರಳನ್ನು ಪೂರೈಕೆ ಮಾಡುತ್ತಿವೆ.

ಮುಷ್ಕರದ ಹಿನ್ನೆಲೆಯಲ್ಲಿ ಈಗಾಗಲೇ ಶೇ 75ರಷ್ಟು ಲಾರಿಗಳ ಮಾಲೀಕರು ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ' ಎಂದು ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ `ಪ್ರಜಾವಾಣಿ'ಗೆ ತಿಳಿಸಿದರು.ಮರಳಿನ ಅಭಾವ: ಮುಷ್ಕರದ ಪರಿಣಾಮ ಮರಳಿನ ಅಭಾವ ಸೃಷ್ಟಿಯಾಗಿದ್ದು, ಮರಳಿನ ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಮುಷ್ಕರಕ್ಕೂ ಮುನ್ನ 30 ರಿಂದ 35 ಸಾವಿರ ರೂಪಾಯಿ ಇದ್ದ ಒಂದು ಲಾರಿ ಲೋಡ್ ಮರಳಿನ ಬೆಲೆ ಇದೀಗ ಸುಮಾರು ರೂ 45 ಸಾವಿರಕ್ಕೆ ಏರಿಕೆಯಾಗಿದೆ. ಅಲ್ಲದೇ ಅಷ್ಟು ಹಣ ಕೊಟ್ಟರೂ ಸಹ ಗುಣಮಟ್ಟದ ಮರಳು ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.ಮುಷ್ಕರಕ್ಕೂ ಮುನ್ನ ನಗರಕ್ಕೆ ಪ್ರತಿನಿತ್ಯ ಸುಮಾರು 2,500 ಸಾವಿರ ಲಾರಿ ಲೋಡ್ ಮರಳು ಬರುತ್ತಿತ್ತು. ಇದೀಗ 300 ರಿಂದ 400 ಲಾರಿ ಲೋಡ್ ಮರಳು ಬರುತ್ತಿದೆ. ಹಲವೆಡೆ ಈ ಹಿಂದೆಯೇ ದಾಸ್ತಾನು ಮಾಡಿದ್ದ ಮರಳನ್ನೇ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಮತ್ತೊಂದೆಡೆ ಫಿಲ್ಟರ್ ಮರಳನ್ನೇ ಮಾರಾಟ ಮಾಡಲಾಗುತ್ತಿದೆ.

ಮತ್ತೆ ಕೆಲ ವ್ಯಾಪಾರಿಗಳು ನೆರೆಯ ತಮಿಳುನಾಡಿನಿಂದ ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಿಸಿ ತಂದು ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ಮರಳಿನ ಕೊರತೆಯಿಂದ ಹಲವೆಡೆ ಕಟ್ಟಡ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ.ದಿನ ಕಳೆದಂತೆ ಲಾರಿ ಚಾಲಕರು, ಕೂಲಿ ಕಾರ್ಮಿಕರು ಮತ್ತು ಕಟ್ಟಡ ಕಾರ್ಮಿಕರಿಗೂ ಮುಷ್ಕರದ ಬಿಸಿ ತಟ್ಟಲಾರಂಭಿಸಿದೆ. ಮರಳು ಸಾಗಣೆ ಸೇವೆ ಸ್ಥಗಿತಗೊಂಡಿರುವುದರಿಂದ ಚಾಲಕರಿಗೆ ಹಾಗೂ ಕಾರ್ಮಿಕರಿಗೆ ದುಡಿಮೆ ಇಲ್ಲದಂತಾಗಿದ್ದು, ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಪರಿಣಾಮ ಅವರು ಕುಟುಂಬ ಸದಸ್ಯರೊಂದಿಗೆ ಸ್ವಂತ ಊರುಗಳಿಗೆ ಮರಳುತ್ತಿದ್ದಾರೆ.`ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡಿ ಲಾರಿ ಖರೀದಿಸಿದ್ದೇನೆ. ಮುಷ್ಕರದ ಹಿನ್ನೆಲೆಯಲ್ಲಿ ಲಾರಿ ಸೇವೆ ಸ್ಥಗಿತಗೊಂಡಿರುವುದರಿಂದ ಸಂಪಾದನೆಯೂ ಆಗುತ್ತಿಲ್ಲ. ಇದರಿಂದ ಸಾಲ ಮತ್ತು ಬಡ್ಡಿ ಹಣ ಕಟ್ಟಲು ಕಷ್ಟವಾಗುತ್ತಿದೆ' ಎಂದು ಲಾರಿ ಮಾಲೀಕ ದಿನೇಶ್ ತಿಳಿಸಿದರು.ಈ ಕಾರಣಕ್ಕಾಗಿ ಮುಷ್ಕರದಿಂದ ಹಿಂದೆ ಸರಿದು ಲಾರಿ ಸೇವೆ ಆರಂಭಿಸಿದರೆ ಸಾರಿಗೆ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಲಂಚಕ್ಕಾಗಿ ಕಿರುಕುಳ ನೀಡುತ್ತಾರೆ. ಲಂಚ ಕೊಡದಿದ್ದರೆ ಲಾರಿಯನ್ನು ಜಪ್ತಿ ಮಾಡುತ್ತಾರೆ ಮತ್ತು ಚಾಲಕನನ್ನು ಸಹ ಬಂಧಿಸುತ್ತಾರೆ. ಅಲ್ಲದೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸುತ್ತಾರೆ. ಇಂತಹ ದ್ವಂದ್ವ ನೀತಿಯಿಂದ ಅತಂತ್ರರಾಗಿದ್ದೇವೆ ಎಂದು ಅವರು ಅಳಲು ತೋಡಿಕೊಂಡರು.`ಜಿಲ್ಲಾಧಿಕಾರಿಗಳು, ಪೊಲೀಸರು, ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೇ ಲಂಚ ಪಡೆದು ಮರಳಿನ ಅಕ್ರಮ ಸಾಗಣೆಗೆ ಅವಕಾಶ ನೀಡುತ್ತಿದ್ದಾರೆ. ಲಂಚ ಕೊಡದಿದ್ದರೆ ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸುತ್ತಾರೆ. ಅದರ ಬದಲು ಪ್ರತಿ ಲೋಡ್‌ಗೆ ರಾಜಧನ ನಿಗದಿಪಡಿಸಿ ಕಾನೂನು ಪ್ರಕಾರವೇ ಮರಳು ಸಾಗಿಸಲು ಅವಕಾಶ ನೀಡಬೇಕು' ಎಂದು ಲಾರಿ ಚಾಲಕ ಗೋವಿಂದಪ್ಪ ಮನವಿ ಮಾಡಿದರು.`ತಿಂಗಳಲ್ಲಿ ಸುಮಾರು 20 ಲೋಡ್ ಮರಳು ಸಾಗಿಸಿ 10 ರಿಂದ 15 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದೆ. ಮುಷ್ಕರದಿಂದಾಗಿ ಕೆಲಸ ಇಲ್ಲದಂತಾಗಿದೆ ಮತ್ತು ಸಂಪಾದನೆಯೂ ಶೂನ್ಯವಾಗಿದೆ. ಪರಿಣಾಮ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಪತ್ನಿ ಮಕ್ಕಳನ್ನು ತವರಿಗೆ ಕಳುಹಿಸುವಂತಾಗುತ್ತದೆ' ಎಂದು ಲಾರಿ ಚಾಲಕ ರಮೇಶ್ ಅಳಲು ತೋಡಿಕೊಂಡರು.

ಸರ್ಕಾರದ ಕಾಮಗಾರಿಗಳಿಗೆ ಪೂರೈಕೆ ಸ್ಥಗಿತ

ಮುಷ್ಕರ ಆರಂಭವಾಗಿ ಎರಡು ದಿನ ಕಳೆದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಹೀಗಾಗಿ, ಸರ್ಕಾರದ ಯಾವುದೇ ಕಾಮಗಾರಿಗೂ ಮಂಗಳವಾರ ಮರಳು ಪೂರೈಕೆ ಮಾಡಿಲ್ಲ. ಜತೆಗೆ ಮೆಟ್ರೊ ಕಾಮಗಾರಿಗೂ ಮರಳು ಪೂರೈಕೆ ಮಾಡುವುದನ್ನು ಸ್ಥಗಿತಗೊಳಿಸಿದ್ದೇವೆ. ಸರ್ಕಾರಕ್ಕೆ ಒಂದು ವಾರ ಗಡುವು ನೀಡಲಾಗಿದೆ.

ಈ ಅವಧಿಯಲ್ಲಿ ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ, ಇಟ್ಟಿಗೆ, ಜಲ್ಲಿ ಕಲ್ಲು, ಸಿಮೆಂಟ್ ಮತ್ತಿತರ ಕಟ್ಟಡ ನಿರ್ಮಾಣ ಸಾಮಗ್ರಿಗಳ ಸಾಗಣೆ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಮುಷ್ಕರವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು.

- ಜಿ.ಆರ್.ಷಣ್ಮುಗಪ್ಪ.

ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಅಧ್ಯಕ್ಷ .ಜುಲೈ 10ರಿಂದ ಸೇವೆ ಸಂಪೂರ್ಣ ಸ್ಥಗಿತ


ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮರಳು ಸಾಗಾಣಿಕೆ ಮಾಡುವ ಲಾರಿ ಮಾಲೀಕರಿಗೆ ಆಗುತ್ತಿರುವ ಕಿರುಕುಳವನ್ನು ಖಂಡಿಸಿ ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟವು ಬುಧವಾರದಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಾಗಿ ಹೇಳಿದೆ. ಇದರಿಂದಾಗಿ ಮರಳು ಲಾರಿಗಳ ಸೇವೆ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.ಈ ಬಗ್ಗೆ ಪ್ರಜಾವಾಣಿಯೊಂದಿಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಬಿ.ಚನ್ನಾರೆಡ್ಡಿ, `ಸರ್ಕಾರ ಚಾಲಕರ ಮೇಲೆ ವಿನಾ ಕಾರಣ ದಂಡ ವಿಧಿಸುವ ಬದಲು ಕಾನೂನುಬದ್ಧವಾಗಿಯೇ ಮರಳು ಸಾಗಿಸಲು ಪರವಾನಗಿ ನೀಡಲಿ.

ಅದು ಸಾಧ್ಯವಾಗದಿದ್ದರೆ ದಂಡದ ಮೊತ್ತವನ್ನು ಕಡಿಮೆ ಮಾಡಬೇಕು. ಜತೆಗೆ, ಲಾರಿಗಳ ಮಾಲೀಕರು ಮತ್ತು ಚಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದನ್ನು ನಿಲ್ಲಿಸಬೇಕು. ಅಲ್ಲಿಯವರೆಗೆ ಮುಷ್ಕರವನ್ನು ಹಿಂಪಡೆಯುವುದಿಲ್ಲ' ಎಂದು ಎಚ್ಚರಿಕೆ ನೀಡಿದರು.

ಕಟ್ಟಡ ನಿರ್ಮಾಣದ ಮೇಲೆ ಪರಿಣಾಮ

`ಲಾರಿ ಮುಷ್ಕರ ಕಟ್ಟಡ ನಿರ್ಮಾಣ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹಲವೆಡೆ ನಿರ್ಮಾಣ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಷ್ಕರ ಮುಂದುವರೆದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ತೋರದೆ ಸಾಧ್ಯವಾದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು'

- ಕೆ.ವೀರಮಣಿ, ಅಧ್ಯಕ್ಷರು

ಸಿಐಟಿಯು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟ .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.