ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 1,980 ಶುದ್ಧ ನೀರಿನ ಘಟಕ ಬಂದ್

Published 19 ಮಾರ್ಚ್ 2024, 23:26 IST
Last Updated 19 ಮಾರ್ಚ್ 2024, 23:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತೀವ್ರ ಬರದಿಂದ ಒಂದೆಡೆ ಕುಡಿಯುವ ನೀರಿನ ಕೊರತೆಯಾದರೆ, ಮತ್ತೊಂದೆಡೆ ಪೂರೈಕೆಯಾಗುತ್ತಿರುವ ನೀರು ಶುದ್ಧವಾಗಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಇದರ ಮಧ್ಯೆ ವಿವಿಧ ಜಿಲ್ಲೆಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ 1,980 ಘಟಕಗಳು ಬಂದ್‌ ಆಗಿವೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು 18,893 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿತ್ತು, ಈ ಪೈಕಿ 16,913 ಘಟಕಗಳು ಸಕ್ರಿಯವಾಗಿವೆ. ಫೆಬ್ರುವರಿ 29ವರೆಗೆ 1,980 ಘಟಕಗಳು ಬಂದ್‌ ಆಗಿವೆ.  

‘ಘಟಕಗಳಲ್ಲಿ ಸಣ್ಣ ಪುಟ್ಟ ಸಮಸ್ಯೆ ಇದ್ದರೆ, ನಿರ್ವಹಣೆ ಗುತ್ತಿಗೆ ಪಡೆದವರು ದುರಸ್ತಿ ಮಾಡುತ್ತಾರೆ. ಹಲವು ಬಾರಿ ದೂರು ಬಂದರೂ ದುರಸ್ತಿ ಮಾಡದ ಗುತ್ತಿಗೆದಾರರ ಗುತ್ತಿಗೆ ಒಪ್ಪಂದ ರದ್ದು ಮಾಡಲಾಗುತ್ತದೆ. ಶಾಶ್ವತ ದುರಸ್ತಿ ಅವಶ್ಯವಿರುವ ಘಟಕಗಳು ಬಂದ್‌ ಆಗಿವೆ. ಕಳೆದ ಮೂರು ವರ್ಷಗಳಿಂದ ಹೊಸ ಘಟಕ ಸ್ಥಾಪನೆಗೆ ಇಲಾಖೆಯಿಂದ ಅನುಮತಿ ನೀಡಿಲ್ಲ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. 

‘ಖಾಸಗಿ ಘಟಕಗಳು ಬಂದ್‌ ಆದರೂ ಜನರು ಸ್ಥಳೀಯ ಸಂಸ್ಥೆಯ ಅಧಿಕಾರಿಗಳನ್ನು ಪ್ರಶ್ನಿಸುತ್ತಾರೆ. ಇವು ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಇಲಾಖೆ ಅನುಮತಿ ನೀಡಿದ, ಸ್ಥಳೀಯ ಸಂಸ್ಥೆಗಳು ನಿರ್ವಹಿಸುತ್ತಿರುವ ಘಟಕಗಳಲ್ಲಿ ಸಮಸ್ಯೆ ಕಂಡು ಬಂದರೆ, ದೂರು ಸಲ್ಲಿಸಬಹುದು. ಪಿಡಿಒ ಮಟ್ಟದಿಂದ ಜಿಲ್ಲಾ ಪಂಚಾಯಿತಿ ಮಟ್ಟದವರೆಗೆ ಸಮಸ್ಯೆ ಪರಿಹರಿಸಲು ಶ್ರಮಿಸಲಾಗುತ್ತದೆ. ಅಲ್ಲಿ ಪರಿಹಾರ ವಾಗದಿದ್ದರೆ ಇಲಾಖೆ ಪರಿಹರಿಸಲಿದೆ’ ಎಂದು ಮಾಹಿತಿ ನೀಡಿದರು.

‘ಘಟಕಗಳು ಸ್ಥಾಪನೆಯಾದ ಕಡೆಯಿಂದ ಸ್ಥಳಾಂತರ ಮಾಡಲು ಒತ್ತಾಯ ಮಾಡಿದಾಗ, ಬಳಕೆ ಇಲ್ಲದಾಗ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿವೆ. ಕೆಲವೆಡೆ ಮಕ್ಕಳು ಹಾಳು ಮಾಡಿದ್ದಾರೆ. ಇನ್ನೂ ಕೆಲವೆಡೆ ಘಟಕಗಳಲ್ಲಿನ ಯಂತ್ರೋಪಕರಣ ಗಳನ್ನು ಕಳವು ಮಾಡಲಾಗಿದೆ. ಜನರು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು’ ಎಂದು ಧಾರವಾಡ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT