ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಲ್ಕ್‌ ಬಳಕೆದಾರರಿಗೆ ಶೇ 20ರಷ್ಟು ಕಾವೇರಿ ನೀರು ಕಡಿತ

ರೈಲ್ವೆ, ಎಚ್ಎಎಲ್, ಡಿಫೆನ್ಸ್, ನಿಮ್ಹಾನ್ಸ್, ವಿಕ್ಟೋರಿಯಾ ಆಸ್ಪತ್ರೆಗೆ ಸಂಸ್ಕರಿಸಿದ ನೀರು ಬಳಸಲು ಸೂಚನೆ
Published 13 ಮಾರ್ಚ್ 2024, 0:29 IST
Last Updated 13 ಮಾರ್ಚ್ 2024, 0:29 IST
ಅಕ್ಷರ ಗಾತ್ರ

ಬೆಂಗಳೂರು: ಜಲಮಂಡಳಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಪರ್ಕ ಪಡೆದಿರುವವರಿಗೆ (ಬಲ್ಕ್‌ ಬಳಕೆದಾರರು) ಕಾವೇರಿ ನೀರಿನ ಸರಬರಾಜಿನಲ್ಲಿ ಶೇ 20ರಷ್ಟು ಕಡಿತ ಮಾಡಲು ನಿರ್ಧರಿಸಲಾಗಿದೆ.

ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್‌ ಪ್ರಸಾತ್‌ ಮನೋಹರ್‌ ಅವರು ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಸುವಂತಹ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮಂಗಳವಾರ ಚರ್ಚೆ ನಡೆಸಿದ ಬಳಿಕ ಈ ತೀರ್ಮಾನವನ್ನು ತಿಳಿಸಿದರು.

ರೈಲ್ವೆ, ಎಚ್ಎಎಲ್, ವಾಯುಪಡೆ, ಡಿಫೆನ್ಸ್, ಸಿಆರ್‌ಪಿಎಫ್, ಬಯೋಕಾನ್, ನಿಮ್ಹಾನ್ಸ್, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಹೆಚ್ಚು ನೀರು ಬಳಸುವಂತಹ ಸಂಸ್ಥೆಗಳು ತಮ್ಮ ಕ್ಯಾಂಪಸ್‌ನಲ್ಲಿ ನೀರಿನ ಪ್ರಾಮುಖ್ಯ, ನೀರಿನ ಉಳಿತಾಯ ಕುರಿತು ಅರಿವು ಮೂಡಿಸಬೇಕು ಎಂದು ಸೂಚಿಸಿದರು.

‘ನಗರದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, 1.40 ಕೋಟಿ ಜನಸಂಖ್ಯೆಗೆ ಕುಡಿಯುವ ನೀರು ಒದಗಿಸುವುದು ಸವಾಲಾಗಿದೆ. ಹೀಗಾಗಿ ಈ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ನಗರದಲ್ಲಿ ಮೂರು ಲಕ್ಷ ಬಲ್ಕ್‌ ಬಳಕೆದಾರರಿದ್ದು, ಶೇ 95ರಿಂದ 100ರಷ್ಟು ಕಾವೇರಿ ನೀರನ್ನು ಜಲಮಂಡಳಿ ವತಿಯಿಂದ ಪೂರೈಸಲಾಗುತ್ತಿದೆ. ಇದರಲ್ಲಿ ಶೇ 20ರಷ್ಟನ್ನು ಕಡಿತಗೊಳಿಸಲಾಗುತ್ತದೆ. ಈ ಕಡಿತಗೊಳಿಸುವ ನೀರನ್ನು ಕೊಳೆಗೇರಿ, ಜನನಿಬಿಡ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

‘ಕಾವೇರಿ-5ನೇ ಹಂತದ ಯೋಜನೆಯಿಂದ ಮೇ 15ರೊಳಗೆ ನೀರು ಸರಬರಾಜು ಆಗಲಿದೆ. ಅಲ್ಲಿಯವರೆಗೆ ನಮ್ಮೊಂದಿಗೆ ಸಹಕರಿಸಿ. ಕುಡಿಯಲು ಹೊರತುಪಡಿಸಿದಂತೆ ಇತರೆ ಉದ್ದೇಶಗಳಿಗೆ ಸಂಸ್ಕರಿಸಿದ ನೀರನ್ನು ಬಳಸಿ’ ಎಂದು ಹೆಚ್ಚು ನೀರು ಬಳಸುವ ಗ್ರಾಹಕರಿಗೆ ಮನವಿ ಮಾಡಿದರು.

ಕೊಳವೆಬಾವಿ ಕೊರೆಯುವುದಕ್ಕೆ ಅನುಮತಿ ನೀಡಬೇಕೆಂದು ಕೆಲವರು ಕೋರಿದರು. ಅರ್ಜಿ ಸಲ್ಲಿಸಿದ ಕೂಡಲೇ ಅನುಮತಿ ನೀಡಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು.

ಈಜುಕೊಳಕ್ಕೆ ಕುಡಿಯುವ ನೀರು ನಿಷೇಧ

ನಗರದಲ್ಲಿರುವ ಈಜುಕೊಳಗಳಿಗೆ ಕುಡಿಯುವ ನೀರು ಬಳಸುವುದನ್ನು ನಿಷೇಧಿಸಿ ಜಲಮಂಡಳಿ ಆದೇಶ ಹೊರಡಿಸಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ– 1964ರ ಕಲಂ 33 ಮತ್ತು 34ರಂತೆ ಆದೇಶ ಹೊರಡಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದರೆ ಕಾಯ್ದೆಯ ಕಲಂ 109ರಂತೆ ₹5 ಸಾವಿರ ದಂಡ ವಿಧಿಸಲಾಗುವುದು. ಉಲ್ಲಂಘನೆ ಮರುಕಳಿಸಿದ್ದಲ್ಲಿ ಮತ್ತೆ ₹5 ಸಾವಿರ ದಂಡದ ಜೊತೆಗೆ ಹೆಚ್ಚುವರಿಯಾಗಿ ಪ್ರತಿದಿನ ₹500 ದಂಡ ವಿಧಿಸಲಾಗುತ್ತದೆ. ಈಜುಕೊಳದ ಮಾಲೀಕರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗುತ್ತದೆ.  ಈಜುಕೊಳಗಳಲ್ಲಿ ಕುಡಿಯುವ ನೀರು ಬಳಸುವುದನ್ನು ನಾಗರಿಕರು ಕಂಡರೆ 1916ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಜಲಮಂಡಳಿ ಅಧ್ಯಕ್ಷರು ಆದೇಶದಲ್ಲಿ ತಿಳಿಸಿದ್ದಾರೆ.

ಕಟ್ಟಡ ನಿರ್ಮಾಣ ಪ್ರದೇಶದ ಕೊಳವೆಬಾವಿ ಜಲಮಂಡಳಿ ಸುಪರ್ದಿಗೆ

ನಗರದಲ್ಲಿ 20 ಸಾವಿರ ಚದರ ಅಡಿ ಮೇಲ್ಪಟ್ಟು ಕಟ್ಟಡ ನಿರ್ಮಿಸುತ್ತಿರುವ ಕಟ್ಟಡ ಮಾಲೀಕರು ಗುತ್ತಿಗೆದಾರರೊಂದಿಗೆ ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಸಭೆ ನಡೆಸಿ ನಿರ್ಮಾಣಕ್ಕೆ ಕಡ್ಡಾಯವಾಗಿ ಸಂಸ್ಕರಿಸಿದ ನೀರು ಬಳಸಲು ಸೂಚನೆ ನೀಡಿದರು. ‘ಪಾಶ್ಚಿಮಾತ್ಯ ದೇಶಗಳಲ್ಲಿ ಶುದ್ಧೀಕರಿಸಿದ ಪರಿಸರ ಸ್ನೇಹಿ ನೀರನ್ನು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಬಳಸುತ್ತಿದ್ದು ನಮ್ಮಲ್ಲಿಯೂ ಇದನ್ನು ಬಳಸುವುದು ಒಳ್ಳೆಯದು’ ಎಂದು ಹೇಳಿದರು. ಸಂಸ್ಕರಿಸಿದ ನೀರು ಬಳಕೆಗೆ ಒಪ್ಪಿಗೆ ಸೂಚಿಸಿದ ಕಟ್ಟಡಗಳ ಮಾಲೀಕರು ಕಟ್ಟಡ ನಿರ್ಮಾಣ ಪ್ರದೇಶದಲ್ಲಿರುವ ಕೊಳವೆಬಾವಿಗಳನ್ನು ಜಲಮಂಡಳಿ ಸುಪರ್ದಿಗೆ ನೀಡಲೂ ಸಮ್ಮತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT