ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ತೆರವು: ₹250 ಕೋಟಿ ಮೌಲ್ಯದ ಆಸ್ತಿ ವಶ

ಅನಧಿಕೃತ ಬಡಾವಣೆ ತೆರವು
Last Updated 12 ಸೆಪ್ಟೆಂಬರ್ 2020, 2:45 IST
ಅಕ್ಷರ ಗಾತ್ರ

ಯಲಹಂಕ:ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಶೆಟ್ಟಿಗೆರೆ ಗ್ರಾಮದ ಬಳಿ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಮೀನನ್ನು ತೆರವುಗೊಳಿಸಿದ ಜಿಲ್ಲಾಡಳಿತ, ₹250 ಕೋಟಿ ಮೌಲ್ಯದ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆಯಿತು.

ಜಾಲ ಹೋಬಳಿ ಶೆಟ್ಟಿಗೆರೆ ಗ್ರಾಮದಲ್ಲಿನ 20 ಎಕರೆ 13 ಗುಂಟೆ ಸರ್ಕಾರಿ ಭೂಮಿಯನ್ನುಆನಂದ್‌ ಇನ್ವೆಸ್ಟ್‌ಮೆಂಟ್‌ ಕಂಪನಿಯವರು ನಕಲಿ ದಾಖಲೆ ಸೃಷ್ಟಿಸಿಕೊಂಡು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು. ಇದರಲ್ಲಿ ಭೂಸುಧಾರಣೆ ಕಾಯಿದೆ ಉಲ್ಲಂಘನೆಯಾಗಿದ್ದ ಹಿನ್ನೆಲೆಯಲ್ಲಿ ಜಮೀನು ಸರ್ಕಾರದ ಸುಪರ್ದಿಗೆ ಪಡೆಯಲಾಯಿತು ಎಂದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ತಿಳಿಸಿದರು.

‘ಸರ್ಕಾರ ಜಮೀನು ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಕಂಪನಿಯು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ನಂತರ ವಾರಸುದಾರರಿಗೆ ಜಮೀನು ಮಂಜೂರಾಗಿತ್ತು. ಇದನ್ನು ಕಂದಾಯ ಇಲಾಖೆ ಪ್ರಾಧಿಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ, ದ್ವಿಸದಸ್ಯ ಪೀಠದ ಮುಂದೆ ವಾದ ಮಂಡಿಸಿತ್ತು. ಅಂತಿಮವಾಗಿ ಸರ್ಕಾರದ ಪರವಾಗಿ ಆದೇಶ ಬಂದಿದ್ದರಿಂದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ’ ಎಂದು ಅವರು ಹೇಳಿದರು.

ಅನಧಿಕೃತ ಬಡಾವಣೆ ತೆರವು:ನಂತರ ಜಾಲಾ ಹೋಬಳಿ ಎಂ.ಹೊಸಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ 3 ಎಕರೆ 34 ಗುಂಟೆ ಜಮೀನನ್ನು ತೆರವುಗೊಳಿಸಿ, ಸರ್ಕಾರದ ವಶಕ್ಕೆ ಪಡೆಯಲಾಯಿತು.

ಮೂರ್ತಿ ಎನ್‌. ಬಿನ್‌ ನಾರಾಯಣಪ್ಪ ಎಂಬುವವರು ಈ ಜಾಗದಲ್ಲಿ ಬಡಾವಣೆ ನಿರ್ಮಿಸುವ ಉದ್ದೇಶದಿಂದ ನಿವೇಶನಗಳನ್ನು ವಿಂಗಡಿಸಿದ್ದರು.

ಕೃಷಿ ಉದ್ದೇಶಕ್ಕೆ ಮಂಜೂರಾಗಿದ್ದ ಈ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಉಪಯೋಗಿಸುತ್ತಿರುವುದು ಪರಿಶೀಲನೆ ವೇಳೆಯಲ್ಲಿ ಕಂಡು ಬಂದಿದ್ದರಿಂದ ಒತ್ತುವರಿದಾರರಿಗೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ನಿಗದಿತ ಅವಧಿಯಲ್ಲಿ ದಾಖಲೆಗಳನ್ನು ಸಲ್ಲಿಸದ ಕಾರಣ ಅನಧಿಕೃತ ಬಡಾವಣೆ ಜಾಗವನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದರು.

ಮಧ್ಯವರ್ತಿಗಳು ಸ್ವಾಧೀನ ಕಾರ್ಯಾಚರಣೆಗೆಅಡ್ಡಿಪಡಿಸಲು ಯತ್ನಿಸಿದರಾದರೂ ಪೊಲೀಸ್ ಸಿಬ್ಬಂದಿಯ ನೆರವಿನೊಂದಿಗೆ ಕಂದಾಯ ಇಲಾಖೆ ಹಾಗೂ ಜಾರಿದಳದ ಸಿಬ್ಬಂದಿ ಒತ್ತುವರಿ ತೆರವುಗೊಳಿಸಿದರು.

ಜಿಲ್ಲಾ ಜಾಗೃತ ದಳದ ಸಹಾಯಕ ಆಯುಕ್ತೆ ಪ್ರಜ್ಞಾ ಅಂಬಾಳ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT