ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಚಾರ ನಿಯಮ ಉಲ್ಲಂಘನೆ: 4 ತಿಂಗಳಲ್ಲಿ 30.61 ಲಕ್ಷ ಪ್ರಕರಣ; ₹18.61 ಕೋಟಿ ದಂಡ

* ಕ್ಯಾಮೆರಾ ದೃಶ್ಯ ಆಧರಿಸಿ ಕ್ರಮ * ಚುನಾವಣೆ ಪ್ರಚಾರ ತಿಂಗಳು ಕಡಿಮೆ ಪ್ರಕರಣ
Published 11 ಮೇ 2024, 0:30 IST
Last Updated 11 ಮೇ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ವರ್ಷದ ಜನವರಿಯಿಂದ ಏಪ್ರಿಲ್‌ವರೆಗಿನ ಅವಧಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಪಟ್ಟಂತೆ 30.61 ಲಕ್ಷ ಪ್ರಕರಣಗಳು ದಾಖಲಾಗಿದ್ದು, ವಿವಿಧ ಪ್ರಕಾರಗಳ ವಾಹನಗಳಿಗೆ ₹ 18.61 ಕೋಟಿ  ದಂಡ ವಿಧಿಸಲಾಗಿದೆ.

ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕೈಗೊಂಡ ಕ್ರಮದ ಅಂಕಿ–ಅಂಶವನ್ನು ಸಂಚಾರ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಮೂರು ತಿಂಗಳಿಗೆ (ಜನವರಿ–ಮಾರ್ಚ್‌) ಹೋಲಿಸಿದರೆ ಚುನಾವಣೆ ಪ್ರಚಾರ ಚುರುಕುಗೊಂಡಿದ್ದ ಏಪ್ರಿಲ್‌ ತಿಂಗಳಿನಲ್ಲಿ ಪ್ರಕರಣಗಳ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.

‘ಜನವರಿಯಲ್ಲಿ 8.47 ಲಕ್ಷ, ಫೆಬ್ರುವರಿಯಲ್ಲಿ 7.79 ಲಕ್ಷ ಹಾಗೂ ಮಾರ್ಚ್‌ನಲ್ಲಿ 7.43 ಲಕ್ಷ ಪ್ರಕರಣಗಳು ದಾಖಲಾಗಿವೆ. ಆದರೆ, ಏಪ್ರಿಲ್‌ನಲ್ಲಿ 6.90 ಲಕ್ಷ ಪ್ರಕರಣಗಳು ಮಾತ್ರ ದಾಖಲಾಗಿವೆ’ ಎಂಬುದು ಅಂಕಿ–ಅಂಶಗಳಿಂದ ಗೊತ್ತಾಗುತ್ತಿದೆ.

ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚುವುದಕ್ಕಾಗಿ ನಗರದ ಹಲವು ಕಡೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳು ಕ್ಲಿಕ್ಕಿಸುವ ಫೋಟೊ ಆಧರಿಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಹಲವರ ಮೊಬೈಲ್‌ಗೆ ಸಂದೇಶ ಕಳುಹಿಸಿ, ದಂಡ ಪಾವತಿಸುವಂತೆ ಪೊಲೀಸರು ಸೂಚನೆ ನೀಡುತ್ತಿದ್ದಾರೆ.

‘₹ 50 ಸಾವಿರಕ್ಕಿಂತ ಹೆಚ್ಚು ದಂಡ ಬಾಕಿ ಉಳಿಸಿಕೊಂಡಿರುವವರ ಪಟ್ಟಿ ಸಿದ್ಧಪಡಿಸಲಾಗಿದೆ. ಇಂಥವರ ವಿಳಾಸವನ್ನು ಪತ್ತೆ ಮಾಡಿ ಮನೆಗೆ ಹೋಗಿ ದಂಡ ವಸೂಲಿ ಮಾಡುವ ಪ್ರಕ್ರಿಯೆಯೂ ಆರಂಭವಾಗಿದೆ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ದಂಡ ಪಾವತಿ ಮೇಲೆ ಶೇ 50ರಷ್ಟು ರಿಯಾಯಿತಿ ನೀಡಲಾಗಿತ್ತು. ಅದರ ಅವಧಿ ಮುಗಿದಿದೆ. ಹಲವರು ಈ ಸಮಯದಲ್ಲಿ ದಂಡ ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

1633: 2024ರ ಜನವರಿ–ಏಪ್ರಿಲ್‌ವರೆಗಿನ ಅಪಘಾತ ಪ್ರಕರಣ

310: ಮೃತರು

1376: ಗಾಯಗೊಂಡವರು

‘ವಾಹನ ಮೇಲಿನ ದಂಡ ತಿಳಿಯಿರಿ’

ನಗರದ ಯಾವುದೇ ಸ್ಥಳದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದರೆ ಅಥವಾ ವಾಹನಗಳ ಮೇಲೆ ದಾಖಲಿಸಿರುವ ಪ್ರಕರಣಗಳ ಮಾಹಿತಿ ತಿಳಿಯಲು ಪೊಲೀಸರು ಆನ್‌ಲೈನ್‌ ವ್ಯವಸ್ಥೆ ಮಾಡಿದ್ದಾರೆ. ‘https://btp.gov.in/’ ಜಾಲತಾಣದಲ್ಲಿ ‘ನಿಮ್ಮ ದಂಡವನ್ನು ಪಾವತಿಸಿ’ ಬಾಕ್ಸ್‌ನಲ್ಲಿ ‘ವಾಹನ ಸಂಖ್ಯೆಯ ಮೂಲಕ ಹುಡುಕಾಟ ಮತ್ತು ಪಾವತಿಸುವ ಉಲ್ಲಂಘನೆ’ ಆಯ್ಕೆ ಇದೆ. ಅದನ್ನು ಕ್ಲಿಕ್ ಮಾಡಬೇಕು. ನಂತರ ಕರ್ನಾಟಕ ಒನ್ ಲಿಂಕ್ ತೆರೆದುಕೊಳ್ಳುತ್ತದೆ. ಅದರಲ್ಲಿ ವಾಹನಗಳ ನೋಂದಣಿ ಸಂಖ್ಯೆ ನಮೂದಿಸಿದರೆ ಪ್ರಕರಣ ಹಾಗೂ ದಂಡದ ವಿವರ ಫೋಟೊಗಳ ಸಮೇತ ಲಭ್ಯವಾಗುತ್ತದೆ. ನಂತರ ಆನ್‌ಲೈನ್ ಮೂಲಕವೇ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

‘ಆಟೊ ಚಾಲಕರ ವಿರುದ್ಧ 1287 ಪ್ರಕರಣ’

ನಗರದಲ್ಲಿರುವ ಹಲವು ಆಟೊ ಚಾಲಕರು ಹೆಚ್ಚು ಪ್ರಯಾಣ ದರ ಕೇಳುತ್ತಾರೆಂಬ ಆರೋಪಗಳಿವೆ. ಇದಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆಗಾಗ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು ಜನವರಿಯಿಂದ ಏಪ್ರಿಲ್‌ವರೆಗೆ ಆಟೊ ಚಾಲಕರ ವಿರುದ್ಧ 1287 ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತಿಸುವಂತೆ ಹಾಗೂ ಮೀಟರ್ ಆಧರಿಸಿ ಪ್ರಯಾಣ ದರ ಪಡೆಯುವಂತೆ ಆಟೊ ಚಾಲಕರಿಗೆ ಎಚ್ಚರಿಕೆ ನೀಡಲಾಗಿದೆ. ಯಾರಾದರೂ ಹೆಚ್ಚುವರಿ ದರ ಕೇಳಿದರೆ ಪ್ರಯಾಣಿಕರಿಗೆ ಸಮೀಪದ ಸಂಚಾರ ಠಾಣೆಗೆ ಅಥವಾ 080–22868444 22868550 ಕರೆ ಮಾಡಿ ದೂರು ನೀಡಬಹುದು’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT