ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಕ್ರಾಂತಿ: 3ಡಿ ಕಾಂಕ್ರೀಟ್ ಪ್ರಿಂಟಿಂಗ್ ಕಟ್ಟಡ

ನಗರದಲ್ಲಿ ಕ್ರಾಂತಿ l ಅಂಚೆ ಕಚೇರಿ ನಿರ್ಮಾಣ; ಶೇ 30ರಿಂದ 40ರಷ್ಟು ವೆಚ್ಚ ಉಳಿತಾಯ
Last Updated 12 ಏಪ್ರಿಲ್ 2023, 5:14 IST
ಅಕ್ಷರ ಗಾತ್ರ

ಬೆಂಗಳೂರು: 3‘ಡಿ’ ಕಾಂಕ್ರೀಟ್ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿಕೊಂಡು ದೇಶದ ಮೊದಲ ಅಂಚೆ ಕಚೇರಿ ಕಟ್ಟಡವನ್ನು ರಾಜಧಾನಿಯಲ್ಲಿ ನಿರ್ಮಿಸಲಾಗುತ್ತಿದೆ.

ಅಂದಾಜು 1,000 ಚದರ ಅಡಿ ವಿಸ್ತೀರ್ಣದಲ್ಲಿ ಹಲಸೂರು ಅಂಚೆ ಕಚೇರಿ ಕಟ್ಟಡವನ್ನು 3‘ಡಿ’ ವಿನ್ಯಾಸದಲ್ಲಿ ರೂಪಿಸಿ ನಿರ್ಮಿಸಲಾಗುತ್ತಿದೆ. ಎಲ್‌ ಅಂಡ್‌ ಟಿ ಕನ್‌ಸ್ಟ್ರಕ್ಷನ್‌ ಕಂಪನಿ ಕಟ್ಟಡ ನಿರ್ಮಾಣ ಜವಾಬ್ದಾರಿ ಹೊತ್ತುಕೊಂಡಿದೆ. ಕಟ್ಟಡದ ಕಾಮಗಾರಿಯೂ ಪ್ರಗತಿಯಲ್ಲಿದೆ.

ಸಾಮಾನ್ಯವಾಗಿ ಅಂಚೆ ಕಚೇರಿಯ ಕಟ್ಟಡವೊಂದಕ್ಕೆ ನಿರ್ಮಾಣವಾಗುತ್ತಿದ್ದ ವೆಚ್ಚಕ್ಕಿಂತ ಕಡಿಮೆ ವೆಚ್ಚವಾಗಲಿದೆ. ಶೇ 30ರಿಂದ 40ರಷ್ಟು ವೆಚ್ಚ ಉಳಿತಾಯವೂ ಆಗಲಿದೆ ಎಂದು ಗುತ್ತಿಗೆ ಕಂಪನಿ ತಿಳಿಸಿದೆ.

ಮಾರ್ಚ್‌ 20ರಂದು ಕಾಮಗಾರಿ ಆರಂಭವಾಗಿದೆ. ಕಡಿಮೆ ಸಂಖ್ಯೆ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ನಿರ್ಮಾಣದ ಕಾಮಗಾರಿ ಸಂದರ್ಭದಲ್ಲಿ ಶಬ್ದವೂ ಕಡಿಮೆ.

ಸಾಮಾನ್ಯವಾಗಿ ಕಟ್ಟಡ ನಿರ್ಮಾಣವೆಂದರೆ ಸಿಮೆಂಟ್‌, ಯಂತ್ರಗಳು, ಕಾರ್ಮಿಕರ ಗುಂಪು, ಗದ್ದಲ, ಮರಳು, ಇಟ್ಟಿಗೆಯನ್ನು ಕಾಣುತ್ತೇವೆ. ಆದರೆ, ಇಲ್ಲಿ ಸಂಪೂರ್ಣ ಸ್ವಯಂ ಚಾಲಿತ (ರೋಬೊಟಿಕ್) ಪ್ರಿಂಟರ್ ಬಳಸಿಕೊಂಡು, 3‘ಡಿ’ ಮುದ್ರಣ ತಂತ್ರಜ್ಞಾನಕ್ಕೆ ಅನುಗುಣವಾಗಿ ಕಾಂಕ್ರೀಟ್ ಅನ್ನು ಪದರು ಪದರು ವಿಧಾನದಲ್ಲಿ ಭರ್ತಿ ಮಾಡಲಾಗುತ್ತದೆ. ಸ್ವಯಂ ಚಾಲಿತ 3‘ಡಿ’ ಪ್ರಿಂಟರ್‌ ಬಳಸಿಕೊಂಡು ಎರಕ ಹೊಯ್ಯಲಾಗುತ್ತಿದೆ ಎಂದು ಕಾರ್ಮಿಕರು ಹೇಳುತ್ತಾರೆ.

‘ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡರೆ, ಕಟ್ಟಡವು ಬೆಂಗಳೂರಿನ ಹೆಗ್ಗುರುತಾಗಲಿದೆ. ಈ ತಂತ್ರಜ್ಞಾನ ಬಳಸಿಕೊಂಡು ನಾವು ಕೈಗೆಟುಕುವ ಬೆಲೆಗೆ ವಸತಿ ಸೌಲಭ್ಯವನ್ನು ಜಿ+3 ಮಹಡಿಗಳು, ವಿಲ್ಲಾಗಳು, ಮಿಲಿಟರಿ ಬ್ಯಾರಕ್‌ಗಳು ಮತ್ತು ಏಕಮಹಡಿ ಶಾಲೆಗಳು, ಅಂಚೆ ಕಚೇರಿಗಳು ಮತ್ತು ಕಾರ್ಖಾನೆಗಳನ್ನು ನಿರ್ಮಿಸಲು ಸಶಕ್ತವಾಗಿದ್ದೇವೆ. ಈ ತಂತ್ರಜ್ಞಾನದ ಮೂಲಕ ಯಾವುದೇ ಶೈಲಿಯಲ್ಲೂ ಕಟ್ಟಡ ನಿರ್ಮಿಸಬಹುದು. ಈ ಅಂಚೆ ಕಚೇರಿಗೆ ಅಂದಾಜು ₹ 23 ಲಕ್ಷ ವೆಚ್ಚವಾಗಲಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಎಲ್‌ ಅಂಡ್‌ ಟಿ ಕನ್‌ಸ್ಟ್ರಕ್ಷನ್‌ನ ನಿರ್ದೇಶಕ ಎಂ.ವಿ.ಸತೀಶ್ ಹೇಳುತ್ತಾರೆ.

‘ಈ ತಂತ್ರಜ್ಞಾನದ ಕಾಮಗಾರಿಗೆ ಕಡಿಮೆ ಸಾಮಗ್ರಿ ಬಳಕೆಯಾಗಲಿದೆ. ಜತೆಗೆ, ವಿದ್ಯುತ್ ಶಕ್ತಿ ಬಳಕೆಯೂ ಕಡಿಮೆ
ಇರಲಿದೆ. ಈ ಅಂಚೆ ಕಚೇರಿ ಕಟ್ಟಡವು 3ಡಿ ತಂತ್ರಜ್ಞಾನ ಬಳಸಿಕೊಂಡು ನಿರ್ಮಿಸಲಾಗುತ್ತಿರುವ ಕರ್ನಾಟಕದ ಮೊದಲ ಸರ್ಕಾರಿ ಕಟ್ಟಡವಾಗಿದೆ’ ಎಂದು ಹೇಳುತ್ತಾರೆ.

ಈ ಪ್ರಾಯೋಗಿಕ ಕಟ್ಟಡದ ಯಶಸ್ಸು ಆಧರಿಸಿ ಅಂಚೆ ಇಲಾಖೆಯು ಮತ್ತಷ್ಟು ಕಟ್ಟಡಗಳನ್ನು ಇದೇ ಮಾದರಿಯಲ್ಲಿ ನಿರ್ಮಿಸಲು ಆಲೋಚಿಸಿದೆ.

‘ಅಂಚೆ ಇಲಾಖೆಗೆ ಸಂಬಂಧಿಸಿದ 400 ಖಾಲಿ ನಿವೇಶನಗಳಿವೆ. ಆ ಸ್ಥಳದಲ್ಲೂ ಅಂಚೆ ಕಚೇರಿ ಕಟ್ಟಡ ನಿರ್ಮಿಸಬೇಕಿದೆ. ಕಾಮಗಾರಿ ಮುಕ್ತಾಯವಾದ ಬಳಿಕ ವರದಿಯನ್ನು ಇಲಾಖೆಗೆಸಲ್ಲಿಸಲಾಗುವುದು. ಇಲಾಖೆ ಒಪ್ಪಿದರೆ ಇದೇ ಮಾದರಿಯ ಮತ್ತಷ್ಟು ಕಟ್ಟಡಗಳು ನಗರದಲ್ಲಿ ನಿರ್ಮಾಣವಾಗುವ ಸಾಧ್ಯತೆ ಯಿದೆ’ ಎಂದು ಕರ್ನಾಟಕ ವೃತ್ತದ ಚೀಫ್‌ ಪೋಸ್ಟ್ ಮಾಸ್ಟರ್ ಜನರಲ್ ಎಸ್‌.ರಾಜೇಂದ್ರಕುಮಾರ್‌ ಹೇಳುತ್ತಾರೆ. ಹಲಸೂರಿನ ಕೇಂಬ್ರಿಡ್ಜ್‌ ಲೇಔಟ್‌ನಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಅಲ್ಲಿನ ನಿವಾಸಿ
ಯೊಬ್ಬರು ಮೊಬೈಲ್‌ನಲ್ಲಿ ಕಾಮಗಾರಿಯ ವಿಡಿಯೊ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದು ಬೆಂಗಳೂರಿನ ಹೆಮ್ಮೆ ಎಂದು ಬಣ್ಣಿಸಿದ್ದರು.

ಈ ಹೊಸ ತಂತ್ರಜ್ಞಾನವನ್ನು ಕಟ್ಟಡ ನಿರ್ಮಾಣ ಸಾಮಗ್ರಿಗಳು ಮತ್ತು ತಂತ್ರಜ್ಞಾನ ಉತ್ತೇಜನಾ ಮಂಡಳಿ (ಬಿಎಂಟಿಪಿಸಿ) ಅನುಮೋದಿಸಿದೆ ಹಾಗೂ ಅಂಚೆ ಕಚೇರಿ ಕಟ್ಟಡ ಸ್ವರೂಪದ ವಿನ್ಯಾಸವನ್ನು ಐಐಟಿ ಮದ್ರಾಸ್ ಮಾನ್ಯ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT