ಸೋಮವಾರ, ಜನವರಿ 17, 2022
18 °C

ಚಿಂತನಾ ಶಕ್ತಿ ಕುಗ್ಗಿಸುವ ಬಹುಮಾಧ್ಯಮಗಳು: ಪತ್ರಕರ್ತ ನಾಗೇಶ ಹೆಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಚಿಂತನಾ ಶಕ್ತಿ ಕುಗ್ಗಿಸುತ್ತಿರುವ ಇಂದಿನ ಬಹುಮಾಧ್ಯಮಗಳು ನಮ್ಮ ಗಮನವನ್ನು ಸದಾ ಬೇರೆಡೆ ಸೆಳೆಯುತ್ತಿವೆ. ನಮ್ಮತನವನ್ನು ಕಾಯ್ದುಕೊಳ್ಳಲು ಆಂತರಿಕ ಶಕ್ತಿಯನ್ನು ಹೆಚ್ಚಿಸುವ ಅಗತ್ಯವಿದೆ’ ಎಂದು ಪತ್ರಕರ್ತ ನಾಗೇಶ ಹೆಗಡೆ ಪ್ರತಿಪಾದಿಸಿದರು.

ಅಂಕಿತ ಪ್ರಕಾಶನ ಪ್ರಕಟಿಸಿರುವ ಸಾಹಿತಿ ಬೋಳುವಾರು ಮಹಮ್ಮದ್ ಕುಂಞ ಅವರ ಕಥಾ ಸಂಕಲನ ’ಆಕಾಶಕ್ಕೆ ನೀಲಿ ಪರದೆ’ ಮತ್ತು ಲೇಖಕ ಎ.ಎನ್. ಪ್ರಸನ್ನ ಅವರ ಕಥಾ ಸಂಕಲನ ’ಬಿಡುಗಡೆ’ ಹಾಗೂ ‘ಪ್ರಜಾವಾಣಿ’ಯ ಉಪಸಂಪಾದಕ ಪದ್ಮನಾಭ ಭಟ್ ಶೆವ್ಕಾರ ಅವರ ‘ದೇವ್ರು’ ಕಾದಂಬರಿಯನ್ನು ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ನಮ್ಮ ಗಮನವನ್ನು ವಿವಿಧ ರೀತಿಯಲ್ಲಿ ದೋಚುವ ಪ್ರಯತ್ನ ಮಾಡಲಾಗುತ್ತದೆ. ಇದರಿಂದ, ಪುಸ್ತಕ ಓದುವ ಸಂಸ್ಕೃತಿ ಮಸುಕಾಗುತ್ತಿದೆ. ಸಾಹಿತ್ಯ ಸೇರಿದಂತೆ ಸೃಜನಶೀಲ ಚಟುವಟಿಕೆಗಳಿಗೆ ಧಕ್ಕೆಯಾಗುತ್ತಿದೆ’ ಎಂದರು.

ವಿಮರ್ಶಕಿ ಎಂ.ಎಸ್. ಆಶಾದೇವಿ, ‘ಭಾರತೀಯ ಸನ್ನಿವೇಶಗಳು ತಮ್ಮ ಸಾಂಪ್ರದಾಯಿಕತೆಯನ್ನು ತೊರೆದು ಆಧುನಿಕತೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ. ಆಧುನಿಕತೆಯು ಈಗ ಆಯ್ಕೆಯಾಗಿ ಉಳಿದಿಲ್ಲ. ಅದು ಅನಿವಾರ್ಯವಾಗಿದೆ ಎಂಬ ಸಂದೇಶವನ್ನು ಈ ದೇವ್ರು ಕಾದಂಬರಿ ನೀಡುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಬಿಡುಗಡೆ’ ಹಾಗೂ ‘ಆಕಾಶಕ್ಕೆ ನೀಲಿ ಪರದೆ’ ಕುರಿತು ಮಾತನಾಡಿದ ವಿಮರ್ಶಕ ಎಚ್.ಎಸ್. ಸತ್ಯನಾರಾಯಣ, ‘ಈ ಎರಡೂ ಕಥಾ ಸಂಕಲನದ ಬಹುತೇಕ ಕಥೆಗಳು ಮನುಷ್ಯ ಸಂಬಂಧಗಳ ಸ್ವರೂಪ-ಸ್ವಭಾವಗಳನ್ನು ತಿಳಿಸುತ್ತವೆ. ಇಲ್ಲಿ ಸಂಯಮದ ಕಥೆಗಳಿದ್ದು, ಮನಸ್ಸಿನ ಸೂಕ್ಷ್ಮ ಪದರುಗಳನ್ನು ವಿಶ್ಲೇಷಿಸುತ್ತವೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು