ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 40 ಕಮಿಷನ್‌: ಶೀಘ್ರ ತನಿಖೆ ಆರಂಭ: ನ್ಯಾ. ನಾಗಮೋಹನ್ ದಾಸ್ ಆಯೋಗ ತಯಾರಿ

Published 25 ಅಕ್ಟೋಬರ್ 2023, 0:19 IST
Last Updated 25 ಅಕ್ಟೋಬರ್ 2023, 0:19 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಐದು ಪ್ರಮುಖ ಇಲಾಖೆಗಳ ಕಾಮಗಾರಿಗಳಲ್ಲಿ ಶೇಕಡ 40ರಷ್ಟು ಕಮಿಷನ್‌ ಪಡೆಯಲಾಗುತ್ತಿತ್ತು ಎಂಬ ಆರೋಪ ಕುರಿತು ನವೆಂಬರ್‌ನಿಂದ ತನಿಖೆ ಆರಂಭಿಸಲು ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್ ನೇತೃತ್ವದ ಆಯೋಗ ಸಿದ್ಧತೆ ನಡೆಸಿದೆ.

ಲೋಕೋಪಯೋಗಿ, ಜಲ ಸಂಪನ್ಮೂಲ, ಸಣ್ಣ ನೀರಾವರಿ, ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳಲ್ಲಿ 2019ರ ಜುಲೈನಿಂದ 2023ರ ಮಾರ್ಚ್‌ವರೆಗೆ ಕೈಗೊಂಡಿರುವ ಕಾಮಗಾರಿಗಳ ಕುರಿತು ಆಯೋಗ ತನಿಖೆ ನಡೆಸಲಿದೆ. ಅಂದಾಜು 50,000ಕ್ಕೂ ಹೆಚ್ಚು ಕಾಮಗಾರಿಗಳು ತನಿಖಾ ವ್ಯಾಪ್ತಿಗೆ ಬರಲಿವೆ. ಈ ಪೈಕಿ ತನಿಖೆಗಾಗಿ ಕೆಲವು ಕಾಮಗಾರಿಗಳನ್ನು ಆಯ್ದುಕೊಳ್ಳಲು ಸೂತ್ರವೊಂದನ್ನು ರೂಪಿಸುವ ಪ್ರಕ್ರಿಯೆ ಆರಂಭವಾಗಿದೆ.

‘ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಒದಗಿಸುತ್ತಿರುವ ಅನುದಾನದ ಶೇಕಡ 40ರಷ್ಟು ಲಂಚದ ರೂಪದಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೇಬು ಸೇರುತ್ತಿದೆ’ ಎಂದು ಆರೋಪಿಸಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ 2021ರ ಜುಲೈ 7ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಆ ಪತ್ರದಲ್ಲಿ ಮಾಡಿದ್ದ ಆರೋಪಗಳನ್ನು ಆಧರಿಸಿಯೇ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವು 2023 ಅಕ್ಟೋಬರ್‌ 7ರಂದು ಆಯೋಗಕ್ಕೆ ನೀಡಿರುವ ಸ್ಪಷ್ಟೀಕರಣದಲ್ಲಿ ತಿಳಿಸಿದೆ.

ಕಾಮಗಾರಿಗಳನ್ನು ಕೈಗೊಳ್ಳುವುದರಲ್ಲಿ ನಿಯಮಗಳ ಉಲ್ಲಂಘನೆ, ಕಾಮಗಾರಿಗಳ ವೆಚ್ಚದಲ್ಲಿ ಏರಿಕೆ, ಕಾಮಗಾರಿಗಳನ್ನೇ ನಡೆಸದೆ ಬಿಲ್‌ ಪಾವತಿಸಿರುವುದು, ಬಿಲ್‌ ಪಾವತಿಯಲ್ಲಿ ಜ್ಯೇಷ್ಠತೆ ಉಲ್ಲಂಘನೆ, ಕಳಪೆ ಕಾಮಗಾರಿಗಳನ್ನು ಮಾಡಿರುವ ಆರೋಪಗಳ ಬಗ್ಗೆಯೂ ತನಿಖೆ ನಡೆಯಲಿದೆ. ಪ್ಯಾಕೇಜ್‌ ಟೆಂಡರ್‌ ಪದ್ಧತಿಯ ಸಾಧಕ– ಬಾಧಕಗಳು ಮತ್ತು ಅದನ್ನು ಮುಂದುವರಿಸಬೇಕೆ? ಬೇಡವೆ? ಎಂಬುದರ ಬಗ್ಗೆಯೂ ಆಯೋಗ ಅಧ್ಯಯನ ನಡೆಸಿ ಶಿಫಾರಸುಗಳನ್ನು ನೀಡಲಿದೆ.

ನಿವೃತ್ತ ಎಂಜಿನಿಯರ್‌ಗಳ ಬಳಕೆ: ತನಿಖೆಯಲ್ಲಿ ಸಹಕರಿಸಲು ವಿವಿಧ ಇಲಾಖೆಗಳ ನಿವೃತ್ತ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲು ಆಯೋಗದ ಅಧ್ಯಕ್ಷರು ನಿರ್ಧರಿಸಿದ್ದಾರೆ. ತನಿಖೆಯ ವ್ಯಾಪ್ತಿಯಲ್ಲಿರುವ ಐದು ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಕೆಲವರನ್ನು ಆಯೋಗಕ್ಕೆ ನೇಮಿಸಲು ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ.

‘ಸೇವೆಯಲ್ಲಿರುವ ಎಂಜಿನಿಯರ್‌ಗಳನ್ನು ತನಿಖೆಗೆ ನೇಮಿಸಿಕೊಂಡರೆ ಹಿತಾಸಕ್ತಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಕಳಂಕರಹಿತ, ಅನುಭವಿ ಎಂಜಿನಿಯರ್‌ಗಳನ್ನು ಆಯೋಗಕ್ಕೆ ನೇಮಿಸಿಕೊಳ್ಳುತ್ತೇವೆ’ ಎಂದು ನ್ಯಾ. ನಾಗಮೋಹನ್‌ ದಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಬಿಎಂಪಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಕುರಿತು ತನಿಖೆ ನಡೆಸಲು ಐದು ವಿಶೇಷ ತನಿಖಾ ತಂಡಗಳನ್ನು (ಎಸ್‌ಐಟಿ) ನೇಮಿಸಲಾಗಿದೆ. ಐದೂ ಎಸ್‌ಐಟಿಗಳ ಮುಖ್ಯಸ್ಥರ ಜತೆ ಸಭೆ ನಡೆಸಿರುವ ಆಯೋಗದ ಅಧ್ಯಕ್ಷರು, ಈಗ ನಡೆಯುತ್ತಿರುವ ತನಿಖೆಯಲ್ಲಿ ಅನುಸರಿಸುತ್ತಿರುವ ವಿಧಾನಗಳ ಕುರಿತು ಮಾಹಿತಿ ಪಡೆದಿದ್ದಾರೆ. ಒಂದೇ ಕಾಮಗಾರಿ ಕುರಿತು ಹಲವು ತನಿಖೆ ನಡೆಯುವುದನ್ನು ತಪ್ಪಿಸಲು ಸಮನ್ವಯದಿಂದ ಕೆಲಸ ಮಾಡಲು ಆಯೋಗ ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT