ಬೆಂಗಳೂರು: ಕಟ್ಟಡ ನಿರ್ಮಾಣ ಕಾಮಗಾರಿಗಳ ಬಿಲ್ ಪಾವತಿಗೆ ಪ್ರತಿ ತಿಂಗಳು ಲಭ್ಯವಿರುವ ಅನುದಾನದಲ್ಲಿ ಶೇ 5ರಷ್ಟು ಮೊತ್ತ ಕಾಯ್ದಿರಿಸಲು ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್. ಉಮಾಶಂಕರ್ ಸಮ್ಮತಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳ ಬಿಲ್‌ಗಳ ಪಾವತಿ ಸಹ ಸಾಮಾನ್ಯ ಬಿಲ್‌ಗಳ ಜ್ಯೇಷ್ಠತೆ ಅಡಿ 24 ತಿಂಗಳಷ್ಟು ವಿಳಂಬವಾಗು ತ್ತಿದೆ. ಕಟ್ಟಡ ನಿರ್ಮಾಣ ಕಾಮಗಾರಿಗಳ ಬಿಲ್‌ಗಳನ್ನು ‘ಅಗತ್ಯ’ ಎಂದು ಪರಿಗಣಿಸಿ, ತ್ವರಿತವಾಗಿ ಪಾವತಿ ಮಾಡಬೇಕು ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘ ಮೇ 7ರಂದು ಮನವಿ ಮಾಡಿತ್ತು.
ಇದನ್ನು ಪರಿಶೀಲಿಸಿದ ಮುಖ್ಯ ಆಯುಕ್ತರು, ಆಡಳಿತಾಧಿಕಾರಿಯವರ ಸಮ್ಮತಿ ಪಡೆಯಲು ಸೂಚಿಸಿದ್ದಾರೆ. ಅದರಂತೆ ಹಣಕಾಸು ವಿಭಾಗದ ವಿಶೇಷ ಆಯುಕ್ತರು, ಬಿಬಿಎಂಪಿ ಅನುದಾನದಲ್ಲಿ ಈ ಬಿಲ್ಲುಗಳನ್ನು ಜ್ಯೇಷ್ಠತಾ ಪಟ್ಟಿಯಲ್ಲಿ ಪಾವತಿಸಲು, ತಿಂಗಳಲ್ಲಿ ಶೇ 5ರಷ್ಟು ಮೊತ್ತ ಕಾಯ್ದಿರಿಸಲು ಆಡಳಿತಾಧಿಕಾರಿಯವರ ಸಮ್ಮತಿ ಕೇಳಿದ್ದರು.
ಈ ಟಿಪ್ಪಣಿಗೆ, ಆಡಳಿತಾಧಿಕಾರಿ ಇದೀಗ ಸಮ್ಮತಿ ನೀಡಿದ್ದಾರೆ.