ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

9 ಹೈ ಟ್ರಾಫಿಕ್‌ ಡೆನ್ಸಿಟಿ ಕಾರಿಡಾರ್‌ಗೆ ಚಾಲನೆ

ಬಿಬಿಎಂಪಿ: ತಡೆಹಿಡಿಯಲಾದ ಯೋಜನೆಗೆ ಸರ್ಕಾರದಿಂದ ಹಸಿರು ನಿಶಾನೆ
Published 1 ಡಿಸೆಂಬರ್ 2023, 0:30 IST
Last Updated 1 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಅನುಮೋದನೆ ನೀಡಿ, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದ 9 ಹೈ ಟ್ರಾಫಿಕ್‌ ಡೆನ್ಸಿಟಿ ಕಾರಿಡಾರ್‌ಗಳ ಕಾಮಗಾರಿ ಆರಂಭಿಸಲು ಕಾಂಗ್ರೆಸ್‌ ಸರ್ಕಾರ ಹಸಿರು ನಿಶಾನೆ ತೋರಿದೆ.

ಹಿಂದಿನ ಬಿಜೆಪಿ ಸರ್ಕಾರ ಅನುಮೋದಿಸಿ, ಆರಂಭವಾಗದ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಬಿಬಿಎಂಪಿಗೆ ಸೂಚಿಸಿದ್ದರು. ಇದೀಗ, ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಹೈ ಟ್ರಾಫಿಕ್‌ ಡೆನ್ಸಿಟಿ ಕಾರಿಡಾರ್‌ ಯೋಜನೆಗೆ ಸಮ್ಮತಿ ಸೂಚಿಸಿರುವುದರಿಂದ ಡಿಸೆಂಬರ್‌ ಮೊದಲ ವಾರದಲ್ಲೇ ಕಾಮಗಾರಿ ಆರಂಭವಾಗಲಿದೆ.

ನಗರದಲ್ಲಿ 12 ಹೈ ಟ್ರಾಫಿಕ್‌ ಡೆನ್ಸಿಟಿ ಕಾರಿಡಾರ್‌ಗಳ ಅಭಿವೃದ್ಧಿಗೆ ಹಿಂದಿನ ಸರ್ಕಾರ ಸಮ್ಮತಿಸಿತ್ತು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ (ಕೆಆರ್‌ಡಿಸಿಎಲ್‌) ಮೂಲಕ ನಡೆಸಲಾಗುವ ಈ ಕಾಮಗಾರಿಗಳಿಗೆ ₹400 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿತ್ತು. ನಂತರ ಅದನ್ನು ರದ್ದುಪಡಿಸಿ, 9 ಹೈ ಟ್ರಾಫಿಕ್‌ ಡೆನ್ಸಿಟಿ ಕಾರಿಡಾರ್‌ಗಳನ್ನು ಬಿಬಿಎಂಪಿಯಿಂದಲೇ ನಿರ್ವಹಣೆ ಮಾಡಲು ₹273 ಕೋಟಿಗೆ 2022ರ ಡಿ.17ರಂದು ಅನುಮೋದಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ಎಲ್ಲ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಕಾರ್ಯಾದೇಶವನ್ನೂ ನೀಡಲಾಗಿತ್ತು.

ಹೈ ಟ್ರಾಫಿಕ್‌ ಡೆನ್ಸಿಟಿ ಕಾರಿಡಾರ್‌ಗಳ ಅಭಿವೃದ್ಧಿ ಕಾಮಗಾರಿಯೊಂದಿಗೆ ಮೂರು ವರ್ಷಗಳ ಅವಧಿಗೆ ಸುಸ್ಥಿತಿಯಲ್ಲಿ ಮತ್ತು ಪರಿಣಾಮಕಾರಿಯಾಗಿ (ಡಿಫೆಕ್ಟ್‌ ಲಿಯಾಬಿಲಿಟಿ ಪಿರಿಯಡ್‌) ನಿರ್ವಹಿಸುವ ಜವಾಬ್ದಾರಿಯೂ ಗುತ್ತಿಗೆದಾರರದ್ದಾಗಿರುತ್ತದೆ. ನಿರ್ವಹಣೆಗೆ ಅಥವಾ ಇತರೆ ಕಾಮಗಾರಿಗೆ ಹೆಚ್ಚಿನ ಅನುದಾನ ನೀಡಲಾಗುವುದಿಲ್ಲ ಎಂದು ಸರ್ಕಾರ ಆದೇಶದಲ್ಲಿ ಸ್ಪಷ್ಟಪಡಿಸಿದೆ. 2022ರ ಆದೇಶಕ್ಕೆ ನಗರಾಭಿವೃದ್ಧಿ ಇಲಾಖೆ ನ.17ರಂದು ಅನುಮೋದನೆ ನೀಡಿದೆ.

‘9 ಹೈ ಟ್ರಾಫಿಕ್‌ ಡೆನ್ಸಿಟಿ ಕಾರಿಡಾರ್‌ಗಳ ಅಭಿವೃದ್ಧಿಗೆ ಕಾರ್ಯಾದೇಶ ನೀಡಲಾಗಿದ್ದು, ಪ್ರಾಥಮಿಕ ಕಾಮಗಾರಿಗಳು ಆರಂಭವಾಗಿವೆ. ಪೂರ್ಣಪ್ರಮಾಣದ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ. ಮುಂದಿನ ಮಳೆಗಾಲದೊಳಗೆ ಅಂದರೆ ಜೂನ್‌ ಒಳಗೆ ಈ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌ ತಿಳಿಸಿದರು.

‘ರಸ್ತೆ ಡಾಂಬರೀಕರಣ, ಒಂದೇ ರೀತಿಯ ವಿಸ್ತೀರ್ಣ, ಪಾದಚಾರಿ ಮಾರ್ಗ, ಸೇವಾ ರಸ್ತೆ ಅಭಿವೃದ್ಧಿ, ಕ್ಯಾರಿಯೇಜ್‌ ವೇಗಳ ಅಭಿವೃದ್ಧಿ ಕಾಮಗಾರಿಗಳನ್ನು ಈ ಹೈ ಟ್ರಾಫಿಕ್‌ ಡೆನ್ಸಿಟಿ ಕಾರಿಡಾರ್‌ಗಳಲ್ಲಿ ಕೈಗೊಳ್ಳಲಾಗುತ್ತದೆ. ಟೆಂಡರ್‌ ಶ್ಯೂರ್‌ ಮಾದರಿಯನ್ನು ಹೋಲುವಂತಿದ್ದರೂ, ಹೈ ಟ್ರಾಫಿಕ್‌ ಡೆನ್ಸಿಟಿ ಕಾರಿಡಾರ್‌ಗಳಿಗೆ ಪ್ರತ್ಯೇಕ ನಿಯಮಗಳನ್ನು ಅನುಸರಿಸಕೊಂಡು ಅಭಿವೃದ್ಧಿ ಮಾಡಲಾಗುತ್ತದೆ. ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಲಾಗಿದೆ’ ಎಂದು ಮಾಹಿತಿ ನೀಡಿದರು.

Pavitra Bhat
Pavitra Bhat

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT