ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಐದನೇ ಹಂತದ ಯೋಜನೆ: 9 ಪ್ಯಾಕೇಜ್‌ ಕಾಮಗಾರಿ ನವೆಂಬರ್‌ನಲ್ಲಿ?

110 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ
Last Updated 13 ಆಗಸ್ಟ್ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕಾವೇರಿ ಐದನೇ ಹಂತದ ಯೋಜನೆಯ ಒಂಬತ್ತು ಪ್ಯಾಕೇಜ್‌ಗಳ ಪೈಕಿ ಏಳರ ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಿದೆ. ಇನ್ನೆರಡು ತಿಂಗಳಲ್ಲಿ ಗುತ್ತಿಗೆದಾರರ ಆಯ್ಕೆ ಮುಗಿಯಲಿದ್ದು, ನವೆಂಬರ್‌ನಿಂದ ಕಾಮಗಾರಿ ಪ್ರಾರಂಭವಾಗುವ ನಿರೀಕ್ಷೆ ಇದೆ.

‘ಒಟ್ಟು 14 ಪ್ಯಾಕೇಜ್‌ಗಳನ್ನು ಒಳಗೊಂಡ ಯೋಜನೆಯಿದು. ಈ ಪೈಕಿ, ಒಂಬತ್ತು ಪ್ಯಾಕೇಜ್‌ಗಳು ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸುವುದಕ್ಕೆ ಸಂಬಂಧಿಸಿದವು. ಮೂರು ಪ್ಯಾಕೇಜ್‌ಗಳು ಒಳಚರಂಡಿ ನಿರ್ಮಾಣಕ್ಕೆ ಸಂಬಂಧಿಸಿದ್ದು. ಉಳಿದ ಪ್ಯಾಕೇಜ್‌ಗಳು ಸಣ್ಣ ನೀರಾವರಿ ವ್ಯವಸ್ಥೆಗೆ ಸಂಬಂಧಿಸಿದ್ದು’ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಏಳು ಪ್ಯಾಕೇಜ್‌ಗಳಿಗೆ ಟೆಂಡರ್‌ ಕರೆಯಲಾಗಿದೆ. ಈವರೆಗೆ ಯಾವ ಟೆಂಡರ್‌ ಪ್ರಕ್ರಿಯೆಯೂ ಪೂರ್ಣಗೊಂಡಿಲ್ಲ. ಈ ಪ್ರಕ್ರಿಯೆ ಮುಗಿದ ಮೇಲೆ ಕಾಮಗಾರಿ ಮೂರು ವರ್ಷ ಕಾಮಗಾರಿ ನಡೆಯಲಿದ್ದು, 2023ರ ವೇಳೆಗೆಈ ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆಯಾಗಲಿದೆ’ ಎಂದು ಅವರು ಹೇಳಿದರು.

‘ಸರ್ಕಾರ ಬದಲಾಗಿರುವುದರಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ನೀರು ಪೂರೈಕೆಗೆ ಸಂಬಂಧಪಟ್ಟ ಪ್ಯಾಕೇಜ್‌ಗಳ ಟೆಂಡರ್‌ ಪ್ರಕ್ರಿಯೆ ನಡೆಯತ್ತಿದೆ. ಈ ಕಾಮಗಾರಿ ಮುಗಿದ ನಂತರವೇ ಒಳಚರಂಡಿ ನಿರ್ಮಾಣಕ್ಕೆ ಸಂಬಂಧಿಸಿದ ಪ್ಯಾಕೇಜ್‌ಗಳ ಟೆಂಡರ್‌ ಕರೆಯಲಾಗುವುದು’ ಎಂದು ಅವರು ಹೇಳಿದರು.

‘ಈ ಯೋಜನೆಗೆ ಸಾಲ ನೀಡುತ್ತಿರುವುದು ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ). ಹೀಗಾಗಿ, ಪ್ರತಿ ಟೆಂಡರ್‌ ವಿವರ ಹಾಗೂ ಪ್ರಗತಿಯ ವಿವರವನ್ನು ಸಂಸ್ಥೆಗೆ ಕಳುಹಿಸಬೇಕು. ಅದನ್ನು ಅವರು ಪರಿಶೀಲಿಸುತ್ತಾರೆ ಮತ್ತು ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಇದಕ್ಕೆ ನಾವು ನೀಡುವ ಉತ್ತರ ಸಮಂಜಸವಾಗಿದ್ದರೆ ಮಾತ್ರ ಅನುಮೋದನೆ ಕೊಡುತ್ತಾರೆ. ನಂತರವೇ ಪ್ರಕ್ರಿಯೆ ಪ್ರಾರಂಭವಾ
ಗುತ್ತದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT