ಮಂಗಳವಾರ, ಜೂನ್ 15, 2021
23 °C

ಬೆಂಗಳೂರು:‘ಐಸಿಯು ಬೆಡ್‌’ ಹೆಸರಿನಲ್ಲಿ ಹಣ ಪಡೆದು ವಂಚನೆ, ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿತರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಐಸಿಯು ಬೆಡ್‌ ಕೊಡಿಸುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಮನೀಶ್ ಸರ್ಕಾರ್ ಎಂಬಾತನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

‘ಪಶ್ಚಿಮ ಬಂಗಾಳದ ಮನೀಶ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಮಲ್ಲೇಶ್ವರದಲ್ಲಿ ನೆಲೆಸಿ, ಹೌಸ್ ಕೀಪಿಂಗ್ ಏಜೆನ್ಸಿ ಆರಂಭಿಸಿದ್ದ. ಸ್ಥಳೀಯ ನಿವಾಸಿಯೊಬ್ಬರು ನೀಡಿದ್ದ ವಂಚನೆ ಆರೋಪದ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದ್ದು, ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.

‘ಕೊರೊನಾ ಸೋಂಕಿತರಿಗೆ ಐಸಿಯು ಬೆಡ್‌ ಒದಗಿಸಲಾಗುವುದು’ ಎಂಬುದಾಗಿ ಹೇಳಿ ಮೊಬೈಲ್‌ ನಂಬರ್ ಸಹಿತ ಆರೋಪಿ ಸಂದೇಶ ಹರಿಬಿಟ್ಟಿದ್ದ. ಹಲವು ವಾಟ್ಸ್‌ಆ್ಯಪ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿದಾಡಿತ್ತು.’

‘ಸಂದೇಶ ನಂಬಿದ್ದ ದೂರುದಾರ, ತಮ್ಮ ತಾಯಿಗೆ ಬೆಡ್‌ ಕೊಡಿಸುವಂತೆ ಕೋರಿ ಆರೋಪಿಯನ್ನು ಸಂಪರ್ಕಿಸಿದ್ದರು. ‘ಬೆಡ್‌ ಕೊಡಿಸಲು ಹಣ ಖರ್ಚಾಗುತ್ತದೆ’ ಎಂದಿದ್ದ ಆರೋಪಿ, ದೂರುದಾರರಿಂದ ಗೂಗಲ್ ಪೇ ಮೂಲಕ ₹ 20,000 ಪಡೆದುಕೊಂಡಿದ್ದ. ಅದಾದ ನಂತರ, ದೂರುದಾರರ ಮೊಬೈಲ್ ನಂಬರ್ ಬ್ಲಾಕ್‌ ಮಾಡಿ ನಾಪತ್ತೆಯಾಗಿದ್ದ’ ಎಂದೂ ಹರೀಶ್ ಪಾಂಡೆ ಹೇಳಿದರು.

‘ದೂರುದಾರರ ತಂದೆ–ತಾಯಿ ಇಬ್ಬರಿಗೂ ಕೊರೊನಾ ಸೋಂಕು ತಗುಲಿತ್ತು. ತಾಯಿ ಆರೋಗ್ಯ ತೀವ್ರ ಹದಗೆಟ್ಟಿತ್ತು. ಅವರಿಗಾಗಿ ಐಸಿಯು ಬೆಡ್‌ ಹುಡುಕುತ್ತಿದ್ದರು. ಆದರೆ, ಏಪ್ರಿಲ್ 24ರಂದು ತಾಯಿ ತೀರಿಕೊಂಡಿದ್ದಾರೆ. ಅದಾದ ಮರುದಿನವೂ ತಂದೆ ಸಹ ಅಸುನೀಗಿದ್ದಾರೆ. ಅವರಿಬ್ಬರ ಅಂತ್ಯಕ್ರಿಯೆ ಮುಗಿಸಿದ ಬಳಿಕವೇ ದೂರುದಾರ ಠಾಣೆಗೆ ಬಂದು ದೂರು ನೀಡಿದ್ದರು’ ಎಂದೂ ಅವರು ವಿವರಿಸಿದರು.
‘ತಮಗಾದ ವಂಚನೆ ಬೇರೆ ಯಾರಿಗೂ ಆಗಬಾರದೆಂದು ದೂರುದಾರರು ಬಯಸಿದ್ದರು. ದೂರು ದಾಖಲಾಗುತ್ತಿದ್ದಂತೆ ಆರೋಪಿಯನ್ನು ಬಂಧಿಸಲಾಗಿದೆ. ಇಂಥ ಆರೋಪಿಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ಬೆಡ್‌ ಹಂಚಿಕೆ ಪ್ರಕ್ರಿಯೆ ಸಾಫ್ಟ್‌ವೇರ್‌ ಮೂಲಕ ಆಗುತ್ತಿದ್ದು, ಯಾವುದೇ ಹಣ ನೀಡಬೇಕಿಲ್ಲ. ಶ್ರೀಮಂತರು ಹಾಗೂ ಬಡವರೆಂಬ ತಾರತಮ್ಯವೂ ಇಲ್ಲ’ ಎಂದರು.

‘ಐಸಿಯು ಬೆಡ್‌, ಆಕ್ಸಿಜನ್ ಹಾಗೂ ಇತರೆ ಯಾವುದೇ ರೀತಿಯ ಸೇವೆ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟು ವಂಚಿಸಲು ಯತ್ನಿಸುವರ ಬಗ್ಗೆ ಸಾರ್ವಜನಿಕರು ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು’ ಎಂದೂ ಹರೀಶ್ ಪಾಂಡೆ ಕೋರಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು