ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ತೆಲಂಗಾಣದಿಂದ ಕಾರಿನಲ್ಲಿ ಬಂದು ವ್ಯಕ್ತಿ ಅಪಹರಣ

‌ ಇಬ್ಬರು ಆರೋಪಿಗಳನ್ನು ಬಂಧಿಸಿದ ಹಲಸೂರು ಠಾಣೆ ಪೊಲೀಸರು
Published 30 ಜೂನ್ 2024, 15:34 IST
Last Updated 30 ಜೂನ್ 2024, 15:34 IST
ಅಕ್ಷರ ಗಾತ್ರ

ಬೆಂಗಳೂರು: ತೆಲಂಗಾಣದಿಂದ ಕಾರಿನಲ್ಲಿ ಬಂದು ನಗರದ ಮಹಾತ್ಮ ಗಾಂಧಿ ರಸ್ತೆಯ ಹೋಟೆಲ್‌ವೊಂದರಲ್ಲಿ ತಂಗಿದ್ದ ವ್ಯಕ್ತಿಯನ್ನು ಸಿನಿಮೀಯ ಶೈಲಿಯಲ್ಲಿ ಅಪಹರಿಸಿದ್ದ ಆರೋಪಿಗಳ ಪೈಕಿ ಇಬ್ಬರನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ತೆಲಂಗಾಣದ ಶಿವಕೃಷ್ಣ ಹಾಗೂ ಜಾಯ್ ಸ್ವೀವನ್ ಎಂಬುವವರನ್ನು ಬಂಧಿಸಲಾಗಿದೆ. ಉಳಿದ 8 ಮಂದಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.‌

‘ತೆಲಂಗಾಣ ರಾಜು ಅಲಿಯಾಸ್ ಅಜ್ಮೀರಾ ಅವರು ಕಳೆದ ಆರು ತಿಂಗಳ ಹಿಂದೆ ನಗರಕ್ಕೆ ಬಂದು ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಿದ್ದರು. ಜೂನ್‌ 16ರಂದು ಎರಡು ಕಾರಿನಲ್ಲಿ ಬಂದಿದ್ದ 10 ಮಂದಿ ಹಲ್ಲೆ ನಡೆಸಿ ರಾಜು ಅವರನ್ನು ಅಪಹರಣ ಮಾಡಿ ತೆಲಂಗಾಣಕ್ಕೆ ಕರೆದೊಯ್ದಿದ್ದರು. ಅಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದರು. ಹಣಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

‘ರಾಜು ಅವರು ಷೇರು ವ್ಯವಹಾರ ನಡೆಸುತ್ತಿದ್ದರು. ಬಂದ ಹಣದಿಂದ ವಿಲಾಸಿ ಜೀವನ ನಡೆಸುತ್ತಿದ್ದರು. ಚಿತ್ರರಂಗದ ನಟರು ಹಾಗೂ ಕ್ರಿಕೆಟ್ ಆಟಗಾರರ ಜತೆಗೆ ಫೋಟೊ ತೆಗೆಸಿಕೊಳ್ಳುವ ಅಭ್ಯಾಸ ಅವರಿಗಿತ್ತು. ಅಲ್ಲದೇ ಅಪಹರಣ ಮಾಡಿದ್ದ ಆರೋಪಿಗಳಿಂದ ಸಾಲ ಪಡೆದುಕೊಂಡಿದ್ದರು. ಈ ಸಂಬಂಧ ತೆಲಂಗಾಣದಲ್ಲಿ ಪ್ರಕರಣ ದಾಖಲಾಗಿತ್ತು. ರಾಜು ಸಾಲ ತೀರಿಸಿರಲಿಲ್ಲ. ಇದರಿಂದ ಸಿಟ್ಟಿಗೆಟ್ಟಿದ್ದ ಆರೋಪಿಗಳು, ರಾಜು ಅವರಿಗಾಗಿ ಹುಡುಕಾಟ ನಡೆಸಿದ್ದರು. ಬೆಂಗಳೂರಿಗೆ ಬಂದಿರುವ ಮಾಹಿತಿ ತಿಳಿದು, ಅಪಹರಣಕ್ಕೆ ಸಂಚು ರೂಪಿಸಿದ್ದರು’ ಎಂದು ಪೊಲೀಸರು ಹೇಳಿದರು.

ಜೀವನ ಶೈಲಿ ಗಮನಿಸಿದ್ದ ಆರೋಪಿಗಳು:

‘ರಾಜು ಅವರ ಜೀವನ ಶೈಲಿಯನ್ನು ಗಮನಿಸಿದ್ದ ಆರೋಪಿಗಳು ಅಪಹರಣ ಮಾಡಿ ಹೆಚ್ಚಿನ ಹಣ ಪಡೆಯುವ ಪ್ರಯತ್ನದಲ್ಲಿದ್ದರು. ಜೂನ್‌ 16ರಂದು ಸ್ನೇಹಿತನ ಜತೆಗೆ ಊಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಪಹರಣ ಮಾಡಿದ್ದರು. ತೆಲಂಗಾಣಕ್ಕೆ ಕರೆದೊಯ್ದು ಅಲ್ಲಿನ ಫಾರ್ಮ್‌ ಹೌಸ್‍ವೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ₹5 ಕೋಟಿ ಹಣ, ಬಿಟ್ ಕಾಯಿನ್ ನೀಡುವಂತೆ ಬೆದರಿಸಿದ್ದರು. ರಾಜು ಸ್ನೇಹಿತ ನೀಡಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು. ಆರೋಪಿಗಳು ನ್ಯಾಯಾಂಗ ಬಂಧನಲ್ಲಿದ್ದಾರೆ’ ಎಂದು ಪೊಲೀಸರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT