ಶನಿವಾರ, ಅಕ್ಟೋಬರ್ 23, 2021
22 °C

ಎಲ್‌ಇಡಿ ಬಲ್ಬ್‌ ಅಳವಡಿಕೆ: ₹ 847 ಕೋಟಿ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಕಾರ್ಯಕ್ಕೆ ಸಚಿವರು ಹಾಗೂ ಜನಪ್ರತಿನಿಧಿಗಳು ಅಡ್ಡಗಾಲು ಹಾಕುತ್ತಿದ್ದಾರೆ. ಇದರಿಂದ ಮೂರು ವರ್ಷಗಳಲ್ಲಿ ₹ 847 ಕೋಟಿ ತೆರಿಗೆ ಹಣ ನಷ್ಟವಾಗಿದೆ’ ಎಂದು ಆಮ್‌ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್‌ ದಾಸರಿ ಆರೋಪಿಸಿದರು. 

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್‌ಇಡಿ ಬಲ್ಬ್‌ಗಳ ಅಳವಡಿಕೆಗೆ 2018ರಲ್ಲಿ ಶಾಪೂರ್ಜಿ ಪಲ್ಲೋಂಜಿ, ಎಸ್‌ಎಂಎಸ್‌ ಇನ್‌ಫ್ರಾಸ್ಟ್ರಕ್ಚರ್‌ ಮತ್ತು ಸಮುದ್ರ ಎಲೆಕ್ಟ್ರಾನಿಕ್‌ ಸಿಸ್ಟಮ್‌ ಪ್ರೈವೇಟ್‌ ಲಿಮಿಟೆಡ್‌ಗಳ ಒಕ್ಕೂಟಕ್ಕೆ (ಎಸ್ಕ್ರೊ) ಟೆಂಡರ್ ನೀಡಲಾಗಿತ್ತು. ಬೀದಿ ದೀಪಗಳ ವಿದ್ಯುತ್‌ ಬಳಕೆಯ ಬಗ್ಗೆ ಅಧ್ಯಯನ ಮಾಡುವ ಉದ್ದೇಶದಿಂದ ಪಿಡಬ್ಲ್ಯೂಸಿ ಸಂಸ್ಥೆಯನ್ನೂ ನೇಮಿಸಲಾಗಿತ್ತು. ಈ ಸಂಸ್ಥೆಯ ವತಿಯಿಂದ ನಡೆಸಲಾದ ಅಧ್ಯಯನದಲ್ಲಿ ಬಿಬಿಎಂಪಿ ಪ್ರತಿವರ್ಷ 4.85 ಲಕ್ಷ ಬೀದಿದೀಪಗಳ ನಿರ್ವಹಣೆಗೆ ₹ 240 ಕೋಟಿಯನ್ನು ವ್ಯಯಿಸುತ್ತಿದೆ. ಅದರಲ್ಲಿ ₹ 200 ಕೋಟಿಯನ್ನು ಬೆಸ್ಕಾಂಗೆ ನೀಡಲಾಗುತ್ತಿದೆ’ ಎಂದು ತಿಳಿಸಿದರು. 

‘ವರ್ಷಪೂರ್ತಿ ಬೀದಿದೀಪಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದಲ್ಲಿ ವೆಚ್ಚ ₹ 330 ಕೋಟಿಗಳಿಗೆ ತಲುಪುತ್ತದೆ. ಈ ಬಗ್ಗೆ ಸ್ಥಳೀಯ ಆಡಳಿತ ಅಂದಾಜು ಮಾಡಿದೆ. ಜಾಗತಿಕ ಟೆಂಡರ್‌ ಕರೆಯುವ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ವೆಚ್ಚವನ್ನು ₹ 233 ಕೋಟಿಗೆ ಇಳಿಸಬಹುದಾಗಿತ್ತು. ಎಲ್‌ಇಡಿ ವಿದ್ಯುತ್‌ ದೀಪಗಳ ಅಳವಡಿಕೆಯಿಂದ ವಿದ್ಯುತ್‌ ಬಳಕೆಯನ್ನೂ ಕಡಿತಗೊಳಿಸಲು ಸಾಧ್ಯವಾಗುತ್ತಿತ್ತು. ಇದರಿಂದ ವಿದ್ಯುತ್‌ ಬಳಕೆಯ ಪ್ರಮಾಣ ₹ 290 ಕೋಟಿಯಿಂದ ₹ 33 ಕೋಟಿಗೆ ಇಳಿಕೆಯಾಗುತ್ತಿತ್ತು’ ಎಂದು ಹೇಳಿದರು. 

‘ಉತ್ತಮ ಯೋಜನೆ ಕಾರ್ಯಗತಗೊಳಿಸುವಲ್ಲಿ ಅನಗತ್ಯ ವಿಳಂಬವಾಗುತ್ತಿದೆ. ಇದಕ್ಕೆ ನಮ್ಮ ರಾಜಕೀಯ ವ್ಯವಸ್ಥೆಯ ಲೋಪವೇ ಕಾರಣ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕೂಡಲೇ ಮಧ್ಯ ಪ್ರವೇಶಿಸಿ, ಎಲ್‌ಇಡಿ ಬೀದಿ ದೀಪಗಳ ಅಳವಡಿಕೆಗೆ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು