ಗುರುವಾರ , ಜನವರಿ 21, 2021
18 °C

‘ನಿರ್ಭಯಾ ನಿಧಿ’ ದೋಚಿದ್ದೀರಿ: ಎಎಪಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ ಮಹಿಳೆಯರ ಸುರಕ್ಷತೆಗೆ ಸ್ಥಾಪಿಸಿದ ‘ನಿರ್ಭಯಾ ನಿಧಿ’ಯ ಹಣವನ್ನು ದೋಚುವ ವ್ಯವಸ್ಥೆಯಿಂದ ರಾಜ್ಯದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಬಯಸಬಹುದೇ?’ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಕಿಡಿಕಾರಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಾನಗರಗಳ ಪ್ರಮುಖ ರಸ್ತೆಗಳು ಹಾಗೂ ಜನವಸತಿ ಪ್ರದೇಶಗಳಲ್ಲಿ ನಿಗಾ ವ್ಯವಸ್ಥೆ ರೂಪಿಸಲು, ನಿರ್ಭಯಾ ಹೆಸರಿನಲ್ಲಿ ಸ್ಥಾಪನೆಯಾದ ನಿಧಿಯನ್ನು ನುಂಗಿ, ಆ ಹೆಣ್ಣುಮಗಳಿಗೆ ಅವಮಾನ ಮಾಡಿದ್ದೀರಿ’ ಎಂದು ಆರೋಪಿಸಿದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರೇ.. ಕರ್ನಾಟಕವನ್ನು ಮತ್ತೊಂದು ಉತ್ತರಪ್ರದೇಶ ಮಾಡದಿರಿ. ಈ ಅವ್ಯವಹಾರದಲ್ಲಿ ಭಾಗಿಯಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಸಾಕೇ? ನಿರ್ಭಯಾ ಆತ್ಮಕ್ಕೆ ಅವಮಾನವಾಗುತ್ತಿದ್ದರೂ, ಗೃಹ ಸಚಿವ ಬೊಮ್ಮಾಯಿಯವರೇ ಎಲ್ಲಿದ್ದೀರಿ?’ ಎಂದು ಪ್ರಶ್ನಿಸಿದರು. 

ಪಕ್ಷದ ಬೆಂಗಳೂರು ನಗರ ಘಟಕ ಉಪಾಧ್ಯಕ್ಷ ಸುರೇಶ್ ರಾಥೋಡ್, ‘ಬೆಂಗಳೂರು ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮೆರಾ ನಿಗಾ ವ್ಯವಸ್ಥೆ ರೂಪಿಸಲು ನಾಲ್ಕು ವರ್ಷಗಳು ಬೇಕೇ? ಶಿಸ್ತುಪಾಲನೆ ದೃಷ್ಟಿಯಲ್ಲಿ ಹಿರಿಯ ಅಧಿಕಾರಿಗಳು ಕೆಳಹಂತದ ಸಿಬ್ಬಂದಿಗೆ ಮಾದರಿಯಾಗಬೇಕು. ಆದರೆ, ಇಲ್ಲಿ ಸೇಫ್ ಸಿಟಿ ಟೆಂಡರ್ ಪ್ರಕ್ರಿಯೆ ವಿಚಾರವಾಗಿ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಮತ್ತು ಡಿ.ರೂಪಾ ನಡುವಿನ ಜಟಾಪಟಿ ನೋಡಿದರೆ, ಆಡಳಿತ ವ್ಯವಸ್ಥೆಯಲ್ಲಿ ಅರಾಜಕತೆ ಉಂಟಾಗಿರುವ ಭಾವನೆ ಮೂಡುತ್ತಿದೆ’ ಎಂದರು.

‘ಈ ಯೋಜನೆಯನ್ನು ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚನೆ ಮಾಡಿ, ಅವರ ನಿಗಾವಣೆಯಲ್ಲಿ ಟೆಂಡರ್ ಪ್ರಕ್ರಿಯೆ ಹಾಗೂ ಯೋಜನೆಯ ಅನುಷ್ಠಾನ ಆಗಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು