ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೆಟ್ರೋಲ್‌, ಡಿಸೇಲ್‌ ದರ ಏರಿಕೆ: ಎಎಪಿ ಪ್ರತಿಭಟನೆ

ಕಾರ್ಯಕರ್ತರಿಂದ ಅಣುಕು ಶವಯಾತ್ರೆ: ಸರ್ಕಾರದ ವಿರುದ್ಧ ಘೋಷಣೆ
Published 18 ಜೂನ್ 2024, 14:31 IST
Last Updated 18 ಜೂನ್ 2024, 14:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರವು ಪೆಟ್ರೋಲ್‌ ಮತ್ತು ಡಿಸೇಲ್‌ ಮೇಲಿನ ಮಾರಾಟ ತೆರಿಗೆ ಏರಿಕೆ ಮಾಡಿರುವುದನ್ನು ವಿರೋಧಿಸಿ ಆಮ್‌ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕಾರ್ಯಕರ್ತರು ದ್ವಿಚಕ್ರ ವಾಹನಗಳಿಗೆ ಹೂವಿನ ಹಾರಗಳನ್ನು ಹಾಕಿ ಅಣುಕು ಶವಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು. ಸೈಕಲ್‌ಗಳನ್ನು ಏರಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.

ಎಎಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೋಹನ್‌ ದಾಸರಿ, ‘ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ರಾಜ್ಯ ಸರ್ಕಾರವು ಒಂದು ಕೈಯಲ್ಲಿ ಕೊಟ್ಟಂತೆ ನಟಿಸಿ ಇನ್ನೊಂದು ಕೈಯಲ್ಲಿ ಜನಸಾಮಾನ್ಯರ ಹಣವನ್ನು ತೆರಿಗೆ ರೂಪದಲ್ಲಿ ಕಿತ್ತುಕೊಳ್ಳುತ್ತಿದೆ. ಸಮರ್ಪಕವಾಗಿ ಸಂಪನ್ಮೂಲ ಕ್ರೋಡಿಕರಣ ಮಾಡಿದರೆ, ಭ್ರಷ್ಟಾಚಾರ ಮತ್ತು ಕಮಿಷನ್‌ ದಂಧೆಯನ್ನು ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಮಿಕ್ಕಿ ಇತರೆ ಎಲ್ಲ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಹಣ ಉಳಿಯಲಿದೆ ಎಂದು ಹೇಳಿದರು.

‘ಮೇ 2023ರಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇವಲ ಒಂದು ವರ್ಷದ ಅವಧಿಯೊಳಗೆ ಅಬಕಾರಿ ತೆರಿಗೆಯನ್ನು ಮೂರು ಬಾರಿ ಹೆಚ್ಚಿಸಿದ್ದಾರೆ. ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಗರಿಷ್ಠ ಶೇ 25ರವರೆಗೆ ಏರಿಕೆ ಮಾಡಿದ್ದಾರೆ. ನಾನಾ ಹಂತದ ವಾಹನಗಳಿಗೆ ವಿಧಿಸುವ ತೆರಿಗೆಯನ್ನು ಹೆಚ್ಚಳ ಮಾಡಿದ್ದಾರೆ’ ಎಂದು ದೂರಿದರು.

‘ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ನೇತೃತ್ವದಲ್ಲಿ ಅನುಷ್ಠಾನಕ್ಕೆ ತಂದಿರುವ ಉಚಿತ ಯೋಜನೆಗಳು ಭಾರಿ ಯಶಸ್ಸು ಕಂಡಿವೆ. ಕಾರಣ, ಸಮರ್ಪಕ ಸಂಪನ್ಮೂಲ ಕ್ರೋಡೀಕರಣ, ಭ್ರಷ್ಟಾಚಾರರಹಿತ ಆಡಳಿತ, ಅಧ್ಯಯನಶೀಲ ಉಚಿತ ಯೋಜನೆಗಳ ಅನುಷ್ಠಾನಗಳಾಗಿವೆ. ಆದರೆ, ಈ ಯೋಜನೆಗಳನ್ನು ನಕಲು ಮಾಡಿದ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಳ್ಳುವ ಸಲುವಾಗಿ ಉಚಿತ ಯೋಜನೆಗಳನ್ನು ತರಾತುರಿಯಲ್ಲಿ ಜಾರಿಗೊಳಿಸಿತು’ ಎಂದು ಟೀಕಿಸಿದರು.

ಎಎಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್‌ ಸೆಹ್ವಾನಿ, ರಾಜ್ಯ ಖಜಾಂಚಿ ಪ್ರಕಾಶ್‌ ನೆಡುಂಗಡಿ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ, ರಾಜ್ಯ ಕಾರ್ಯದರ್ಶಿ ಉಷಾ ಮೋಹನ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT