ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಧಿಕಾರ ಸ್ವೀಕರಿಸಿದ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು

Published 13 ಜೂನ್ 2024, 15:50 IST
Last Updated 13 ಜೂನ್ 2024, 15:50 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 11 ಅಕಾಡೆಮಿ ಮತ್ತು 2 ಪ್ರಾಧಿಕಾರಗಳ ನೂತನ ಅಧ್ಯಕ್ಷರು ಗುರುವಾರ ಅಧಿಕಾರ ಸ್ವೀಕರಿಸಿದರು. ಸುಮಾರು ಒಂದೂವರೆ ವರ್ಷಗಳ ಬಳಿಕ ಕನ್ನಡ ಭವನಕ್ಕೆ ಜೀವಕಳೆ ಬಂದಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಎಲ್.ಎನ್. ಮುಕುಂದರಾಜ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಕೆ.ವಿ. ನಾಗರಾಜಮೂರ್ತಿ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಗೊಲ್ಲಹಳ್ಳಿ ಶಿವಪ್ರಸಾದ್, ಬಂಜಾರ ಭಾಷಾ ಸಂಸ್ಕೃತಿ ಅಕಾಡೆಮಿ ಅಧಕ್ಷರಾಗಿ ಎ.ಆರ್.ಗೋವಿಂದಸ್ವಾಮಿ ಅಧಿಕಾರ ಸ್ವೀಕರಿಸಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ತಲ್ಲೂರು ಶಿವರಾಮ ಶೆಟ್ಟಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಮೈಸೂರು ಮಾನಸ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರಾಗಿ ಎಂ.ಸಿ. ರಮೇಶ್ , ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಚನ್ನಪ್ಪಕಟ್ಟಿ ಅಧಿಕಾರ ವಹಿಸಿಕೊಂಡರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾಗಿ ಮೊದಲು ನೇಮಕಗೊಂಡಿದ್ದ ಕೃಪಾ ಫಡ್ಕೆ ಅವರನ್ನು ಸರ್ಕಾರ ಬುಧವಾರ ಬದಲಾಯಿಸಿ ಶುಭಾ ಧನಂಜಯ ಅವರನ್ನು ನೇಮಕ ಮಾಡಿತ್ತು. ಶುಭಾ ಅವರು ಕೂಡ ಗುರುವಾರ ಅಧಿಕಾರ ಸ್ವೀಕರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕಿರಣ್ ಸಿಂಗ್, ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರದ ರಿಜಿಸ್ಟ್ರಾರ್ ಭಾಗವಹಿಸಿದ್ದರು.

19ಕ್ಕೆ ಪ.ಸ. ಅಧಿಕಾರ ಸ್ವೀಕಾರ: ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರಾಗಿ ಪ.ಸ. ಕುಮಾರ್ ಅವರು ಜೂ.19ಕ್ಕೆ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಗುರುವಾರ ಲಲಿತ ಅಕಾಡೆಮಿಗೆ ಭೇಟಿ ನೀಡಿದ ಅವರು ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದರು. ಆದರೆ, ಅಧಿಕಾರ ಸ್ವೀಕರಿಸಲಿಲ್ಲ. 19ಕ್ಕೆ ದಿನ ನಿಗದಿ ಮಾಡಿದರು.

ಪುರುಷೋತ್ತಮ ಬಿಳಿಮಲೆ ಪದಗ್ರಹಣ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಾಹಿತಿ ಪುರುಷೋತ್ತಮ ಬಿಳಿಮಲೆ ಗುರುವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ‘ಕನ್ನಡ ನಾಡು ನುಡಿ ಸಂಸ್ಕೃತಿಯ ಅಭಿವೃದ್ಧಿಗಾಗಿ ಪ್ರಾಧಿಕಾರದ ಕಾರ್ಯ ಚಟುವಟಿಕೆಗಳನ್ನು ಅರ್ಥಪೂರ್ಣವಾಗಿ ಕಾರ್ಯರೂಪಕ್ಕೆ ತರಲಾಗುವುದು. ಕನ್ನಡದ ಅಸ್ಮಿತೆಗೆ ಧಕ್ಕೆಯಾಗುವ ಸಂದರ್ಭದಲ್ಲಿ ಪ್ರಾಧಿಕಾರ ಗಟ್ಟಿಯಾಗಿ ದನಿ ಎತ್ತಲಿದೆ. ಎಲ್ಲ ವಲಯಗಳಲ್ಲೂ ಕನ್ನಡ ಬಳಕೆ ಮತ್ತು ಅನುಷ್ಠಾನಕ್ಕಾಗಿ ಹಾಗೂ ಕನ್ನಡದ ಸಾರ್ವಭೌಮತೆಯನ್ನು ಎತ್ತಿಹಿಡಿಯಲು ಪ್ರಾಧಿಕಾರ ನಿರಂತರವಾಗಿ ಶ್ರಮಿಸಲಿದೆ’ ಎಂದು ಬಿಳಿಮಲೆ ತಿಳಿಸಿದರು.

ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನಾಚರಣೆ

ಕರ್ನಾಟಕ ಏಕೀಕರಣದ ರೂವಾರಿಗಳಲ್ಲಿ ಒಬ್ಬರಾಗಿರುವ ಕಯ್ಯಾರ ಕಿಞ್ಞಣ್ಣ ರೈ ಅವರ 109ನೇ ಜನ್ಮದಿನಾಚರಣೆ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೋಮಣ್ಣ ಬೇವಿನಮರದ ಅಧಿಕಾರ ಸ್ವೀಕಾರ ಕಾರ್ಯಕ್ರಮ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ ಧರಣೀದೇವಿ ಮಾಲಗತ್ತಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಪ್ರಾಧಿಕಾರದ ಸದಸ್ಯರಾದ ಜಾಣಗೆರೆ ವೆಂಕಟರಾಮಯ್ಯ ಅಶೋಕ ಚಂದರಗಿ ಭಗತ್‌ ರಾಜ್ ಎ.ಆರ್.‌ ಸುಬ್ಬಯ್ಯಕಟ್ಟೆ ಸಂಜೀವ ಕುಮಾರ ಅತಿವಾಳೆ ಎಂ.ಎಸ್. ಮದಭಾವಿ ಶಿವರೆಡ್ಡಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT