ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿ ಮೇಲೆ ಆ್ಯಸಿಡ್ ದಾಳಿ: ಪ್ರೀತಿ ನಿರಾಕರಿಸಿದ್ದಕ್ಕೆ ಯುವಕನ ಕೃತ್ಯ

Last Updated 28 ಏಪ್ರಿಲ್ 2022, 19:36 IST
ಅಕ್ಷರ ಗಾತ್ರ

ಬೆಂಗಳೂರು: ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ 24 ವರ್ಷದ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆದಿದ್ದು, ತೀವ್ರ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಗುರುವಾರ ಬೆಳಿಗ್ಗೆ ಆ್ಯಸಿಡ್ ದಾಳಿ ನಡೆದಿದೆ. ಆರೋಪಿ ನಾಗರಾಜ್ (27) ಎಂಬಾತ ಪರಾರಿಯಾಗಿದ್ದು, ಆತನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

ಏಳು ವರ್ಷದಿಂದ ಪರಿಚಯ: ‘ಯುವತಿಯ ದೊಡ್ಡಮ್ಮ ಹೆಗ್ಗನಹಳ್ಳಿ ಬಳಿ ವಾಸವಿದ್ದಾರೆ. ಅವರ ಮನೆಯ ಕೊಠಡಿಯೊಂದರಲ್ಲಿ ಏಳು ವರ್ಷದ ಹಿಂದೆ ಆರೋಪಿ ನಾಗರಾಜ್ ಬಾಡಿಗೆಗಿದ್ದ. ಚಿಕ್ಕದೊಂದು ಗಾರ್ಮೆಂಟ್ಸ್ ಕಾರ್ಖಾನೆ ನಡೆಸುತ್ತಿದ್ದ ನಾಗರಾಜ್, ಯುವತಿಯನ್ನು ಪರಿಚ ಯಿಸಿಕೊಂಡು ಸ್ನೇಹ ಬೆಳೆಸಿದ್ದ’ ಎಂದು ಪೊಲೀಸರು ತಿಳಿಸಿದರು.

‘ಯುವತಿಯನ್ನು ಹಿಂಬಾಲಿಸಲಾರಂಭಿಸಿದ್ದ ಆರೋಪಿ, ಪ್ರೀತಿಸುವಂತೆ ಪೀಡಿಸಲಾರಂಭಿಸಿದ್ದ. ಅದಕ್ಕೆ ಒಪ್ಪದ ಯುವತಿ, ದೊಡ್ಡಮ್ಮ ಹಾಗೂ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದರು. ನಾಗರಾಜ್‌ನನ್ನು ತರಾಟೆಗೆ ತೆಗೆದುಕೊಂಡಿದ್ದ ಯುವತಿ ಪೋಷಕರು, ತಂಟೆಗೆ ಹೋಗದಂತೆ ತಾಕೀತು ಮಾಡಿದ್ದರು. ಇದೇ ವಿಚಾರವಾಗಿ ಪರಸ್ಪರ ಗಲಾಟೆ ಆಗಿತ್ತು. ಆತನನ್ನು ಕೊಠಡಿಯಿಂದ ಖಾಲಿ ಮಾಡಿಸಲಾಗಿತ್ತು’ ಎಂದೂ ಪೊಲೀಸರು ಹೇಳಿದರು.

ಕಚೇರಿ, ಮನೆ ಬಳಿ ಕೂಗಾಟ: ‘ಎಂ.ಕಾಂ ಪದವಿ ಮುಗಿಸಿದ್ದ ಯುವತಿ, ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಅವರು ಕೆಲಸಕ್ಕೆ ಹೋಗುವಾಗ ಬರುವಾಗಲೂ ಅಡ್ಡಗಟ್ಟಿ ಆರೋಪಿ ಕಿರುಕುಳ ನೀಡಲಾರಂಭಿಸಿದ್ದ’ ಎಂದು ಪೊಲೀಸರು ತಿಳಿಸಿದರು.

‘ಕಚೇರಿ ಹಾಗೂ ಮನೆ ಬಳಿ ಬುಧವಾರ ಹೋಗಿದ್ದ ಆರೋಪಿ, ಪ್ರೀತಿಸುವಂತೆ ಯುವತಿಯನ್ನು ಒತ್ತಾಯಿಸಿದ್ದ. ಅದಕ್ಕೆ ಒಪ್ಪದಿದ್ದಾಗ, ಕೂಗಾಡಿ ಯುವತಿಯನ್ನು ಎಳೆದಾಡಿದ್ದ. ಕಚೇರಿ ಸಿಬ್ಬಂದಿ, ಬುದ್ಧಿವಾದ ಹೇಳಿ ಕಳುಹಿಸಿದ್ದರು’ ಎಂದೂ ಹೇಳಿದರು.

‘ಯುವತಿ ಮುಖವನ್ನು ವಿಕಾರ ಮಾಡಿದರೆ, ಯಾರೂ ಮದುವೆಯಾಗುವುದಿಲ್ಲ’ ಎಂದು ತಿಳಿದ ಆರೋಪಿ, ಆ್ಯಸಿಡ್ ಎರಚಲುಸಂಚು ರೂಪಿಸಿದ್ದ. ಯುವತಿ ಗುರುವಾರ ಬೆಳಿಗ್ಗೆ ಕೆಲಸಕ್ಕೆಂದು ಕಚೇರಿಗೆ ಬಂದಿದ್ದರು. ಮೆಟ್ಟಿಲು ಬಳಿಯೇ ಯುವತಿಯನ್ನು ತಡೆದಿದ್ದ ಆರೋಪಿ, ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ಕಚೇರಿ ಸಿಬ್ಬಂದಿಹಾಗೂ ಸ್ಥಳೀಯರೇ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದೂ ತಿಳಿಸಿದರು.

‘ಆ್ಯಸಿಡ್ ದಾಳಿಯಿಂದ ಯುವತಿಯ ಎದೆ, ಕತ್ತು ಹಾಗೂ ಕಾಲಿಗೆ ಗಾಯವಾಗಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT