ಶುಕ್ರವಾರ, ಫೆಬ್ರವರಿ 21, 2020
16 °C
ಪಶುವೈದ್ಯಕೀಯ ಸಮ್ಮೇಳನದಲ್ಲಿ ಸಸೀಂದ್ರನಾಥ್ ಅಭಿಪ್ರಾಯ

ಆಧುನಿಕ ಡಯಾಗ್ನೋಸ್ಟಿಕ್ ಕೇಂದ್ರ ಅಗತ್ಯ: ಎಂ.ಆರ್‌.ಸಸೀಂದ್ರನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ದೇಶದ ಬಹುತೇಕ ಪಶು ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಆಧುನಿಕ ರೋಗನಿರ್ಣಯ (ಡಯಾಗ್ನೋಸ್ಟಿಕ್) ಕೇಂದ್ರಗಳ ಕೊರತೆ ಇದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಮನ ಹರಿಸಬೇಕು’ ಎಂದು ಕೇರಳದ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಎಂ.ಆರ್‌.ಸಸೀಂದ್ರನಾಥ್ ತಿಳಿಸಿದರು. 

ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಕೆವಿಎಎಫ್‌ಎಸ್‌ಯು) ಹಾಗೂ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜು ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಭಾರತೀಯ ಪಶು ಔಷಧ ಸಂಸ್ಥೆಯ ವಾರ್ಷಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಈಚೆಗೆ ಸಂಭವಿಸುತ್ತಿರುವ ಮಾರಕ ಕಾಯಿಲೆಗಳ ಹರಡುವಿಕೆಯಲ್ಲಿ ಪ್ರಾಣಿಗಳ ಪಾತ್ರವೂ ಇದೆ. ಜಾಗತಿಕ ತಾಪಮಾನ ಹೆಚ್ಚಳದಿಂದ ಹಾಲು, ಮಾಂಸ ಹಾಗೂ ಮೊಟ್ಟೆ ಉತ್ಪಾದನೆಯಲ್ಲಿ ಏರುಪೇರಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜನಸಂಖ್ಯೆ ಹೆಚ್ಚುತ್ತಿರುವಂತೆ ಪ್ರಾಣಿಗಳ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ. ಜನರ ಆರೋಗ್ಯ ಸುಧಾರಣೆಗೆ ಕೊಡುವ ಆದ್ಯತೆಯನ್ನು ಪ್ರಾಣಿಗಳಿಗೂ ನೀಡಬೇಕು. ಈ ನಿಟ್ಟಿನಲ್ಲಿ ದೇಶದ ಎಲ್ಲ ಪಶುವೈದ್ಯಕೀಯ ಸಂಸ್ಥೆಗಳು ಗಮನಹರಿಸಬೇಕು’ ಎಂದರು.

ಕೆವಿಎಎಫ್‌ಎಸ್‌ಯು ಕುಲಪತಿ ಎಚ್‌.ಡಿ.ನಾರಾಯಣಸ್ವಾಮಿ,‘ಇತ್ತೀಚೆಗೆ ದಿನಕ್ಕೊಂದು ರೋಗ ಹುಟ್ಟಿಕೊಳ್ಳುತ್ತಿದೆ. ಅವುಗಳನ್ನು ನಿಯಂತ್ರಿಸಲು ಪಶುವೈದ್ಯಕೀಯ ಸಂಸ್ಥೆಗಳು ಸನ್ನದ್ಧವಾಗಿರಬೇಕು. ಇದರಿಂದ ಪಶುವೈದ್ಯಕೀಯ ಸವಾಲಿನ ವೃತ್ತಿಯಾದರೆ, ಪಶುವೈದ್ಯರಿಗೆ ನಿತ್ಯವೂ ಸವಾಲಿನ ದಿನ’ ಎಂದು ಹೇಳಿದರು.

‘ದೇಶದಲ್ಲಿ ರೋಗನಿಯಂತ್ರಣಕ್ಕೆಪಶುವೈದ್ಯಕೀಯ ಕ್ಷೇತ್ರದ ಕೊಡುಗೆ ಅಗಾಧ. ರೋಗಗಳನ್ನು ತಡೆಯಲು ಜಾಗತಿಕವಾಗಿ ಆಧುನಿಕ ಚಿಕಿತ್ಸಾ ವಿಧಾನ ಹಾಗೂ ತಂತ್ರಜ್ಞಾನಗಳು ಬಳಕೆಯಲ್ಲಿವೆ. ಆದರೆ, ಅವುಗಳ ಬಗ್ಗೆ ಇಲ್ಲಿನ ವೈದ್ಯರಿಗೆ ಮಾಹಿತಿ ಕೊರತೆ ಇದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)