ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಿನಾಟಗಳ ‘ಝಲಕ್‌’ ಪ್ರದರ್ಶಿಸಿದ ಉಕ್ಕಿನ ಹಕ್ಕಿಗಳು

*ಸೂರ್ಯಕಿರಣ– ಸಾರಂಗಗಳ ಕೂಡಾಟಕ್ಕೆ ಗಗನರಂಗ ಸಜ್ಜು
Last Updated 2 ಫೆಬ್ರುವರಿ 2021, 18:10 IST
ಅಕ್ಷರ ಗಾತ್ರ

ಬೆಂಗಳೂರು: ಪರಸ್ಪರ ವಿರುದ್ಧ ದಿಕ್ಕಿನಿಂದ ಮಿಂಚಿನ ವೇಗದಲ್ಲಿ ತೂರಿಬಂದ ಸೂರ್ಯಕಿರಣ ತಂಡದ ನಾಲ್ಕು ವಿಮಾನಗಳು ಇನ್ನೇನು ಮುಖಾಮುಖಿ ಡಿಕ್ಕಿಯಾದವೋ ಏನೋ ಎಂದು ಪ್ರೇಕ್ಷಕರು ಉಸಿರು ಬಿಗಿಹಿಡಿದರು. ಈ ವಿಮಾನಗಳುಕೆಲವೇ ಇಂಚುಗಳ ಅಂತರದಲ್ಲಿ ಸಾಗಿ ಹೋದಾಗ ಅವರೆಲ್ಲ ನಿಟ್ಟುಸಿರು ಬಿಟ್ಟರು. ಈ ಉಕ್ಕಿನ ಹಕ್ಕಿಗಳು ಆಗಸದಲ್ಲಿ ಮೂಡಿಸಿದ ರಂಗವಲ್ಲಿ ಅಲ್ಲಿ ಸೇರಿದ್ದವರ ಮೊಗದಲ್ಲೂ ನಗು ಅರಳುವಂತೆ ಮಾಡಿತು.

ಏರೊ ಇಂಡಿಯಾ ವೈಮಾನಿಕ ಪ್ರದರ್ಶನ ಅಧಿಕೃತವಾಗಿ ಆರಂಭವಾಗುವುದಕ್ಕೆ ಇನ್ನೇನು ಒಂದು ದಿನ ಬಾಕಿ ಇರುವಾಗ ಯಲಹಂಕದ ವಾಯುನೆಲೆಯ ಮೇಲಿನ ನೀಲ ಆಗಸದಲ್ಲಿ ಮೂಡಿಬಂದ ಕಸರತ್ತಿನ ಒಂದು ಝಲಕ್‌ ಇದು. ಇಂತಹ ಅದೆಷ್ಟು ರೋಮಾಂಚನಕಾರಿ ಕಸರತ್ತುಗಳನ್ನು ‘ಏರೊ ಇಂಡಿಯಾ 2021’ ತನ್ನ ಬತ್ತಳಿಕೆಯಲ್ಲಿ ಬಚ್ಚಿಟ್ಟುಕೊಂಡಿದೆಯೋ ತಿಳಿಯದು. ಇನ್ನು ಮೂರು ದಿನಗಳ ಕಾಲ ಇಲ್ಲಿನ ‘ಗಗನ ರಂಗ’ದಲ್ಲಿ ನಡೆಯುವ ರುದ್ರರಮಣೀಯ ಕಸರತ್ತುಗಳು ಖಂಡಿತಾ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಲಿವೆ ಎಂಬುದನ್ನು ಮಂಗಳವಾರ ಪೂರ್ಣ ಪ್ರಮಾಣದ ತಾಲೀಮು ಮನದಟ್ಟು ಮಾಡಿತು.

ಆರ್ಭಟಿಸುತ್ತಾ ಬಂದ ರಫೇಲ್‌ ಯುದ್ಧ ವಿಮಾನದ ರುದ್ರ ನರ್ತನ, ಅಂಬರವನ್ನು ಚುಂಬಿಸುತ್ತಾ ಸಾಗಿದ ತೇಜಸ್‌ ಲಘು ಯುದ್ಧವಿಮಾನ ಭೋರ್ಗರೆಯುತ್ತಾ ನಡೆಸಿದ ಉರುಳು ಸೇವೆ, ಸೂರ್ಯಕಿರಣ– ಸಾರಂಗ ತಂಡಗಳು ಆಗಸದಲ್ಲಿ ಜೊತೆ ಜೊತೆಯಲ್ಲೇ ಪ್ರದರ್ಶಿಸಿದ ರಂಗಿನಾಟಗಳು, ಮುಗಿಲೆತ್ತರಕ್ಕೇರಿ, ಧೊಪ್ಪನೆ ಕೆಲಕ್ಕೆ ಬೀಳುತ್ತಾ, ನಡುವೆ ಥಟಕ್ಕನೆ ದಿಕ್ಕು ಬದಲಿಸಿ ಮಿಂಚಿನ ವೇಗದಲ್ಲಿ ಸಾಗಿದ ಸುಖೋಯ್‌ ವಿಮಾನ, ಹೆಲಿಕಾಪ್ಟರ್‌ಗಳ ನರ್ತನಗಳನ್ನು ಪ್ರೇಕ್ಷಕರು ಮೂಗಿನ ಮೇಲೆ ಬೆರಳಿಟ್ಟುಕೊಂಡು ಕಣ್ತುಂಬಿಕೊಂಡರು.

ಪೂರ್ಣ ಪ್ರಮಾಣದ ವೈಮಾನಿಕ ಪ್ರದರ್ಶನವಲ್ಲದಿದ್ದರೂ ಮಂಗಳವಾರ ನಡೆದ ತಾಲೀಮು ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು.

ಕ್ಷಣದ ಕಸರತ್ತಿನ ಹಿಂದಿದೆ ತಿಂಗಳ ಶ್ರಮ

ವೈಮಾನಿಕ ಪ್ರದರ್ಶನದಲ್ಲಿ ಯಾವುದೇ ವಿಮಾನ ಆಗಸದಲ್ಲಿ ಕಸರತ್ತುಗಳನ್ನು ಪ್ರದರ್ಶಿಸುವುದು ಕೆಲವೇ ನಿಮಿಷಗಳು ಮಾತ್ರ. ಆದರೆ, ಆ ‘ಕೆಲವೇ ಕ್ಷಣ’ಗಳ ಹಿಂದೆ ತಿಂಗಳುಗಟ್ಟಲೆ ಪರಿಶ್ರಮವಿದೆ.

ಉಕ್ಕಿನ ಹಕ್ಕಿಗಳ ತಾಲೀಮು ವೀಕ್ಷಣೆಗೆ ಈ ಬಾರಿ ಸೇನಾ ಸಿಬ್ಬಂದಿ, ಅಧಿಕಾರಿಗಳು ಹಾಗೂ ಅವರ ಬಂಧು–ಬಳಗದವರಿಗೆ ಅವಕಾಶ ಕಲ್ಪಿಸಲಾಗಿತ್ತು. ಖುದ್ದು ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸುವ ಅನೇಕ ಪೈಲಟ್‌ಗಳು ಬಂಧುಗಳೊಂದಿಗೆ ತಾಲೀಮು ವೀಕ್ಷಣೆಗೆ ಬಂದಿದ್ದರು. ಪ್ರದರ್ಶನದ ‘ಪೂರ್ವರಂಗ’ದ ಕುತೂಹಲಕಾರಿ ಅಂಶಗಳನ್ನು ತಮ್ಮ ಬಂಧು–ಬಳಗದವರ ಜೊತೆ ಅವರು ಹಂಚಿಕೊಂಡರು.

ತಲೆ ಕೆಳಗಾಗಿದ್ದೇ ತಿಳಿಯದು:

‘ಏಷ್ಟೋ ಬಾರಿ ವಿಮಾನದಲ್ಲಿ ಕಸರತ್ತು ಪ್ರದರ್ಶಿಸುವಾಗ ತಲೆ ಕೆಳಗಾಗಿ ಸಂಚರಿಸುವುದೇ ನಮ್ಮ ಗಮನಕ್ಕೆ ಬರುವುದಿಲ್ಲ. ನಾವು ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೇ ಅಪಾಯ’ ಎಂದು ಪೈಲೆಟ್‌ ಒಬ್ಬರು ತಮ್ಮ ಜೊತೆ ಬಂದಿದ್ದ ಗೆಳತಿ ಬಳಿ ಉಸುರಿದರು.

‘ನಮಗೆ ಗರಿಷ್ಠ 20 ನಿಮಿಷ ಹಾರಾಟ ನಡೆಸುವುದಕ್ಕೆ ಮಾತ್ರ ಅವಕಾಶ ಇರುತ್ತದೆ. ಅಷ್ಟು ಸಮಯಕ್ಕೆ ಬೇಕಾಗುವಷ್ಟು ಇಂಧನವನ್ನು ಮಾತ್ರ ತುಂಬಿರುತ್ತಾರೆ. ನಮಗೆ ನಿಗದಿಪಡಿಸಿದ ಕಾಲಾವಕಾಶ ಮುಗಿಯುತ್ತಾ ಬಂದಾಗ ಎದೆ ಢವಗುಟ್ಟಲು ಶುರುವಾಗುತ್ತದೆ’ ಎಂದು ಸೂರ್ಯಕಿರಣ್‌ ತಂಡದ ಪೈಲಟ್‌ ಆಗಿರುವ ಅವರು ತಮ್ಮ ಗೆಳತಿಗೆ ವಿವರಿಸಿದರು.

ಯಾವ ವಿಮಾನ ಹಾರಾಟ ನಡೆಸುತ್ತಿದೆ, ಅದರ ಮಹತ್ವ ಏನೆಂದು ಪೈಲಟ್‌ ವಿವರಿಸುತ್ತಿದ್ದಂತೆಯೇ ಅವರ ಗೆಳತಿ ಬಿಟ್ಟಕಂಗಳಿಂದ ಕಸರತ್ತುಗಳನ್ನು ಕಣ್ತುಂಬಿಕೊಂಡರು.

ನನ್ನವರ ಮೊದಲು ನೋಡಿದ್ದೇ ಇಲ್ಲಿ: ‘ನಾನು ಮದುವೆಯಾಗುವ ಮುನ್ನ ನನ್ನವರನ್ನು ಮೊದಲು ಭೇಟಿಯಾಗಿದ್ದೇ ಈ ವೈಮಾನಿಕ ಪ್ರದರ್ಶನದಲ್ಲಿ. 14 ವರ್ಷಗಳ ಹಿಂದೆ ಇಲ್ಲಿ ಮೈನವಿರೇಳಿಸುವ ಪ್ರದರ್ಶನ ನೋಡಿದ ಬಳಿಕ ಇವರ ಮೇಲೆ ಪ್ರೀತಿ ಅಭಿಮಾನ ಉಕ್ಕಿ ಬಂತು’ ಎಂದು ಶಿಲ್ಪಾ ರೇಖಾ ಪಾಟೀಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಅವರು ಪೈಲಟ್‌ ಆಗಿರುವ ಪತಿ ಆರ್‌.ಎಸ್‌.ಪಾಟೀಲ ಅವರೊಂದಿಗೆ ತಾಲೀಮು ವೀಕ್ಷಿಸಿದರು.

‘ನಾನು ವೈಮಾನಿಕ ಪ್ರದರ್ಶನವನ್ನು ನೋಡುತ್ತಿರುವುದು ಇದೇ ಮೊದಲು. ಇದನ್ನು ನೋಡಿದ ಬಳಿಕ ನಮ್ಮವರ ಕೆಲಸ ಎಷ್ಟು ರೋಮಾಂಚನಕಾರಿ ಹಾಗೂ ಅದರ ಹಿಂದಿರುವ ಅಪಾಯ ಎಷ್ಟು ಎಂಬುದರ ನಿಜರೂಪ ದರ್ಶನವಾಯಿತು’ ಎನ್ನುತ್ತಾರೆ ಪಿಂಕಿ. ಅವರ ಗಂಡ ಸುಧೀರ್‌ ಖತ್ರಿ ವಾಯುಸೇನೆಯ ಅಧಿಕಾರಿ.

‘ಕುಟುಂಬದವರ ಜೊತೆ ವೈಮಾನಿಕ ಪ್ರದರ್ಶನದ ಕಸರತ್ತನ್ನು ವೀಕ್ಷಿಸಲು ಅವಕಾಶ ಕಲ್ಪಿಸಿದ್ದು ನಿಜಕ್ಕೂ ಖುಷಿಕೊಟ್ಟಿತು. ನಾವು ಮಾಡುವ ಕೆಲಸದ ಅನುಭವಗಳನ್ನು ಅವರ ಜೊತೆ ಹಂಚಿಕೊಳ್ಳಲು ಸಾಧ್ಯವಾಗಿದೆ’ ಎಂದು ಖತ್ರಿ ತಿಳಿಸಿದರು. ಅವರು ತಾಯಿ ಸುಮಿತ್ರ ಹಾಗೂ ಪುತ್ರ ಶಿವಾಂಕ್ ಜೊತೆ ಪ್ರದರ್ಶನ ವೀಕ್ಷಣೆಗೆ ಬಂದಿದ್ದರು.

ಸಮಾರೋಪಕ್ಕೆ ರಾಷ್ಟ್ರಪತಿ

ಇದೇ ಶುಕ್ರವಾರ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭಾಗವಹಿಸಲಿದ್ದಾರೆ. ಭಾರತೀಯ ಸೇನಾಪಡೆಗಳ ಸುಪ್ರೀಂ ಕಮಾಂಡರ್‌ ಕೂಡಾ ಆಗಿರುವ ರಾಷ್ಟ್ರಪತಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು.

18 ವಿಚಾರಸಂಕಿರಣ

ರಕ್ಷಣೆ ಹಾಗೂ ವೈಮಾಂತರಿಕ್ಷ ಕ್ಷೇತ್ರದ ಬೆಳವಣಿಗೆಗೆ ಸಂಬಂಧಿಸಿದ 18 ಸೆಮಿನಾರ್‌ಗಳನ್ನು ಆಯೋಜಿಸಲಾಗಿದೆ. ಅಮೆರಿಕ, ಇಸ್ರೇಲ್‌ ಸೇರಿದಂತೆ ವಿವಿಧ ದೇಶಗಳ ತಜ್ಞರೂ ಭಾಗವಹಿಸಲಿದ್ದಾರೆ. ಖುದ್ದಾಗಿ ಹಾಜರಾಗಲು ಸಾಧ್ಯವಾಗದವರು ಆನ್‌ಲೈನ್ ಮೂಲಕ ಚರ್ಚೆಗಳಲ್ಲಿ ಭಾಗವಹಿಸಲಿದ್ದಾರೆ.

ಈ ಬಾರಿ ಸೀಮಿತ ಅವಕಾಶ

ಈ ಬಾರಿ ವೈಮಾನಿಕ ಪ್ರದರ್ಶನ ವೀಕ್ಷಣಾ ಪ್ರದೇಶದಲ್ಲಿ (ಅಡ್ವ) 3 ಸಾವಿರ ಮಂದಿಗೆ ಹಾಗೂ ಪ್ರದರ್ಶನ ಮಳಿಗೆಗಳ ಪ್ರದೇಶದಲ್ಲಿ 15 ಸಾವಿರ ಮಂದಿಯ ವೀಕ್ಷಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಳೆದ ಬಾರಿ ಒಟ್ಟು 40 ಸಾವಿರ ಮಂದಿಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು

ವಾಹನ ನಿಲುಗಡೆ ಎಲ್ಲೆಲ್ಲಿ?

ಪಿ–1; ಗಣ್ಯಾತಿಗಣ್ಯರಿಗೆ (ವಿವಿಐಪಿ)

ಪಿ–2; ಗಣ್ಯರಿಗೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವವರಿಗೆ

ಪಿ–3; ಪ್ರದರ್ಶಕರಿಗೆ

ಪಿ–4; ತುರ್ತುಸೇವೆ ಪೂರೈಸುವವರಿಗೆ

ಪಿ–5; ಗಣ್ಯರಿಗೆ/ ವಿದೇಶಿ ಪ್ರತಿನಿಧಿಗಳಿಗೆ

ಪಿ–6; ದೇಸಿ ಪ್ರೇಕ್ಷಕರಿಗೆ/ ಪ್ರವಾಸಿಗರಿಗೆ (ನಗರದಿಂದ ಸಾಗುವವರು ಯಲಹಂಕದ ಕೆಳಸೇತುವೆಯಲ್ಲಿ ಯೂ–ಟರ್ನ್‌ ಪಡೆದು ಇಲ್ಲಿಗೆ ಸಾಗಬೇಕು)

ಪಿ–7; ಅಡ್ವ ಪ್ರದೇಶಕ್ಕೆ ಹೋಗುವವರು

(ಪಿ–6 ಹೊರತಾಗಿ ಉಳಿದ ಪಾರ್ಕಿಂಗ್‌ ತಾಣಗಳು ವೈಮಾನಿಕ ಪ್ರದರ್ಶನ ನಡೆಯುವ ಸ್ಥಳಕ್ಕೆ ಹೊಂದಿಕೊಂಡಿವೆ)

ಯಾರಿಗೆ ಎಲ್ಲಿಂದ ಪ್ರವೇಶ?

ಗೇಟ್‌ 4; ತುರ್ತುಸೇವೆಗಳಿಗೆ

ಗೇಟ್‌ 3; ನಿರ್ಗಮನಕ್ಕೆ

ಗೇಟ್‌ 2ಬಿ; ಪ್ರತಿನಿಧಿಗಳು, ವಿಮಾನ ಸಿಬ್ಬಂದಿ, ಗಣ್ಯರು, ರಾಜತಾಂತ್ರಿಕ ಅಧಿಕಾರಿಗಳು, ಮಾಧ್ಯಮದವರು, ಪ್ರದರ್ಶಕರು, ಅಗತ್ಯ ಸೇವೆ ಪೂರೈಸುವವರು

ಗೇಟ್‌ 2ಎ; ಗಣ್ಯಾತಿಗಣ್ಯರು

ಗೇಟ್‌ 1; ಪ್ರದರ್ಶಕರು, ಸೇವಾ ಪೂರೈಕೆ ದಾರರು,

ಗೇಟ್‌ 8 ಎ– 11ರವರೆಗೆ; ಪ್ರೇಕ್ಷಕರು

ಕೋವಿಡ್‌ ನಿಯಂತ್ರಣ: ನಿಯಮ ಪಾಲನೆ ಕಟ್ಟುನಿಟ್ಟು

ಪ್ರದರ್ಶನಕ್ಕೆ ಭೇಟಿ ನೀಡುವವರು ಕೋವಿಡ್ ನಿಯಂತ್ರಣದ ಈ ನಿಯಮ ಪಾಲಿಸುವುದನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ಪ್ರದರ್ಶನದಲ್ಲಿ ಭಾಗಿಯಾಗುವ ಅಂತರರಾಷ್ಟ್ರೀಯ ಪ್ರತಿನಿಧಿಗಳಿಗೂ ಸೋಂಕು ಪರೀಕ್ಷೆ ಮತ್ತು ಕ್ವಾರಂಟೈನ್ ನಿಯಮಗಳನ್ನು ಪಾಲಿಸಲಾಗುತ್ತದೆ. ರೋಗಲಕ್ಷಣಗಳನ್ನು ಹೊಂದಿರುವ ಜನರನ್ನು ಪ್ರತ್ಯೇಕಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

* ಜ.31ರ ನಂತರ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು, ಸೋಂಕು ಇಲ್ಲ ಎಂಬುದು ದೃಢಪಟ್ಟಿರಬೇಕು

*ಮಾಸ್ಕ್ ಇಲ್ಲದಿದ್ದರೆ ಪ್ರವೇಶ ನಿಷಿದ್ಧ

*ಶೌಚಾಲಯ, ವಾಷ್‌ಬೇಸಿನ್‌ಗಳಲ್ಲಿ ಸೆನ್ಸರ್ ಬಳಕೆ

*ಕರಪತ್ರ ಮತ್ತು ಪುಸ್ತಕಗಳಿಗೆ ಡಿಜಿಟಲ್ ಸ್ವರೂಪ

*ನೋಂದಣಿ ಮತ್ತು ಬೂತ್‌ಗಳಲ್ಲಿ ಸಂಪರ್ಕರಹಿತ ಸೇವೆ. ಡೆಸ್ಕ್‌ಗಳಲ್ಲಿ ಪಾರದರ್ಶಕ ಪರದೆ ಬಳಕೆ

*ಕಾಲಿನಿಂದ ತಳ್ಳುವ ಬಾಗಿಲುಗಳ ಬಳಕೆ

* ಚೀಲಗಳ ಸ್ಕ್ಯಾನಿಂಗ್‌ಗೆ ನೇರಳಾತೀತ ಕಿರಣಗಳನ್ನು ಬಳಸಿ ಸೋಂಕುನಿವಾರಣೆ

*ಒಂದು ಬೇನಲ್ಲಿ ಸಾವಿರ ಜನರಿಗೆ ಮಾತ್ರ ಅವಕಾಶ

*ಸರತಿಯಲ್ಲಿ ನಿಂತಿರುವ ಪ್ರತಿ ವ್ಯಕ್ತಿಗಳ ನಡುವೆ 3.25 ಚದರ ಮೀಟರ್‌ ಅಂತರ ಕಾಯ್ದುಕೊಳ್ಳಬೇಕು/ಎರಡು ಗುಂಟೆ ಜಾಗದಲ್ಲಿ 15 ಜನರು ಮಾತ್ರ ಇರಲು ಅವಕಾಶ

* ಜನರ ದೈಹಿಕ ಅಂತರ ಕಾಪಾಡುವುದರ ಬಗ್ಗೆ ಸಿಸಿಟಿವಿ ಕ್ಯಾಮೆರಾಗಳಿಂದ ನಿಗಾ

-0-

ವೈಮಾನಿಕ ಪ್ರದರ್ಶನ ಅದ್ಭುತವಾಗಿದೆ. ಇಂತಹ ಪ್ರದರ್ಶನ ಬೆಂಗಳೂರಿನಲ್ಲೇ ನಡೆಯುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ
– ಶಿಲ್ಪ ರೇಖಾ ಪಾಟೀಲ

–0–

ವಿಮಾನಗಳ ಹಾರಾಟ ಕಂಡು ನಾನಂತೂ ಮೈಮರೆತುಬಿಟ್ಟೆ. ಇಂತಹ ಅಮೋಘ ಪ್ರದರ್ಶನವನ್ನು ಇಷ್ಟು ಹತ್ತಿರದಿಂದ ನೋಡುತ್ತೇನೆ ಎಂದು ಭಾವಿಸಿರಲಿಲ್ಲ
–ಪಿಂಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT