ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೋ ಇಂಡಿಯಾ: ವಿಪತ್ತು ನಿರ್ವಹಣೆ ಯೋಜನೆ ಸಿದ್ಧ

ಭೌಗೋಳಿಕ ಮಾಹಿತಿ ವ್ಯವಸ್ಥೆ ಅಳವಡಿಕೆ: ಕೆಎಸ್‌ಡಿಎಂಎ
Last Updated 8 ಫೆಬ್ರುವರಿ 2023, 21:38 IST
ಅಕ್ಷರ ಗಾತ್ರ

ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ವಿಪತ್ತು ನಿರ್ವಹಣೆಗಾಗಿ ಇದೇ ಮೊದಲ ಬಾರಿ ‘ಕರ್ನಾಟಕ ಭೌಗೋಳಿಕ ತಂತ್ರಜ್ಞಾನ ವ್ಯವಸ್ಥೆ’ ಆಧಾರಿತ ವಿಪತ್ತು ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ.

ಫೆ.13ರಿಂದ 17ರವರೆಗೆ ನಡೆಯುವ ಪ್ರದರ್ಶನದಲ್ಲಿ ಉದ್ದಿಮೆದಾರರು, ಹೂಡಿಕೆದಾರರು, ಪ್ರದರ್ಶಕರು, ಅಧಿಕಾರಿಗಳು ಸೇರಿ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ.

ಈ ವೈಮಾನಿಕ ಪ್ರದರ್ಶನದ ಸ್ಥಳದಲ್ಲಿ ಆಕಸ್ಮಿಕವಾಗಿ ಸಂಭವಿಸುವ ವಿಮಾನ ಅಪಘಾತ, ಬಾಂಬ್‌ ಸ್ಫೋಟ, ಕಾಲ್ತುಳಿತ, ಅಗ್ನಿ ಅವಘಡ ಇತ್ಯಾದಿ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರವು (ಕೆಎಸ್‌ಡಿಎಂಎ) ಈ ಯೋಜನೆಯನ್ನು ಸಿದ್ಧಪಡಿಸಿದೆ. ಆಧುನಿಕ ತಂತ್ರಜ್ಞಾನ, ಭೌಗೋಳಿಕ ಮಾಹಿತಿ ವ್ಯವಸ್ಥೆ ಮತ್ತು ದೂರಸಂವೇದಿ ವಿಜ್ಞಾನ ಆಧರಿತ ವ್ಯವಸ್ಥೆಯನ್ನು ಬಳಸಿಕೊಂಡು ವಿಪತ್ತು ನಿರ್ವಹಣಾ ಯೋಜನೆಯನ್ನು ರೂಪಿಸಲಾಗಿದೆ.

ಏರೋ ಇಂಡಿಯಾ ಪ್ರದರ್ಶನಗಳಲ್ಲಿನ ಹಿಂದಿನ ಅನುಭವಗಳು ಮತ್ತು ಕಲಿತ ಪಾಠಗಳವನ್ನು ಈ ಬಾರಿ ಪರಿಗಣಿಸಲಾಗಿದೆ. ವೈಮಾನಿಕ ಪ್ರದರ್ಶನದ ಹೊರಾಂಗಣ ಮತ್ತು ಒಳಾಂಗಣದಲ್ಲಿ ಸಂಭವಿಸುವ ವಿಪತ್ತುಗಳನ್ನು ನಿರ್ವಹಿಸಲು ಹಾಗೂ ಅಗತ್ಯವಿರುವ ಸಂಪನ್ಮೂಲಗಳನ್ನು ಗುರುತಿಸಲು ‘ಕರ್ನಾಟಕ ಭೌಗೋಳಿಕ ಮಾಹಿತಿ
ವ್ಯವಸ್ಥೆ’ಯನ್ನು (ಕೆಜಿಐಎಸ್‌) ಬಳಸಲು ಉದ್ದೇಶಿಸಲಾಗಿದೆ.

ಯಲಹಂಕದ ವಾಯುನೆಲೆ ಸುತ್ತಲಿನ ಪ್ರದೇಶಗಳ ವಿಶ್ಲೇಷಣೆಯನ್ನು ಕೈಗೊಂಡು ಮೂಲ ನಕ್ಷೆಯನ್ನು ತಯಾರಿಸಲಾಗಿದೆ. ವೈಮಾನಿಕ ಪ್ರದರ್ಶನ ಪ್ರದೇಶದ ವ್ಯಾಪ್ತಿಯನ್ನು ಹೊರಾಂಗಣ ಮತ್ತು ಒಳಾಂಗಣ ಗ್ರಿಡ್‌ ಮತ್ತು ಉಪಗ್ರಿಡ್‌ಗಳ
ನ್ನಾಗಿ ಗುರುತಿಸಲಾಗಿದೆ. ಒಟ್ಟಾರೆ ಪ್ರದೇಶವನ್ನು ಒಂಬತ್ತು ಗ್ರಿಡ್‌ಗಳನ್ನಾಗಿ ಗುರುತಿಸಲಾಗಿದೆ.

ಜತೆಗೆ, ವೈಮಾನಿಕ ಪ್ರದರ್ಶನದ ’ಸಮಗ್ರ ಸಂವಹನ ನಿಯಂತ್ರಣ ಕೇಂದ್ರ’ವು ಹೊರಾಂಗಣ ಮತ್ತು ಒಳಾಂಗಣ ವಿಪತ್ತು ನಿರ್ವಹಣೆಗೆ ಅಗತ್ಯವಿರುವ ಸಮನ್ವಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ವಾಯು ನೆಲೆ ಆವರಣದ ಹೊರಗೆ ಸಂಭವಿಸಬಹುದಾದ ಯಾವುದೇ ರೀತಿಯ ತುರ್ತು ಪರಿಸ್ಥಿತಿ ಮತ್ತು ವಿಪತ್ತುಗಳನ್ನು ಎದುರಿಸಲು ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಯೋಜನೆಯನ್ನು ರೂಪಿಸಲಾಗಿದೆ. ವಿಪತ್ತುಗಳಿಂದ ಸಾರ್ವಜನಿಕರು ಮತ್ತು ಆಸ್ತಿಗಳಿಗೆ ಹಾನಿಯಾಗುವು
ದನ್ನು ತಡೆಗಟ್ಟುವುದು ಹಾಗೂ ತಕ್ಷಣದ ಚಿಕಿತ್ಸೆ ವ್ಯವಸ್ಥೆ ಕಲ್ಪಿಸುವುದು ಮತ್ತು ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಿ ಉಪಚರಿಸಲು ಯೋಜನೆ ರೂಪಿಸಲಾಗಿದೆ.

–––

ವಿಪತ್ತು ನಿರ್ವಹಣಾ ಕೋಶ ಸ್ಥಾಪನೆ

ವಿಪತ್ತು ನಿರ್ವಹಣಾ ಕೋಶವನ್ನು ಸಹ ಸ್ಥಾಪಿಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಅಗ್ನಿಶಾಮಕ, ಆರೋಗ್ಯ ಇಲಾಖೆಗಳ ನೋಡಲ್‌ ಅಧಿಕಾರಿಗಳು ಕಾರ್ಯಾಚರಣೆ ನಿಯಂತ್ರಣ ಕೇಂದ್ರಗಳಲ್ಲಿ ಭಾರತೀಯ ವಾಯುಸೇನೆ ಸಿಬ್ಬಂದಿ ಜತೆ ನೇರ ಸಂಪರ್ಕವನ್ನು ಈ ಕೋಶ ಹೊಂದಿರುತ್ತದೆ. ರಕ್ಷಣೆ ಮತ್ತು ತೆರವು ಕಾರ್ಯಾಚರಣೆಗೆ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಯು ವೈಮಾನಿಕ ಪ್ರದರ್ಶನದಲ್ಲಿ 10ರಿಂದ 20 ಟನ್‌ ಸಾಮರ್ಥ್ಯದ ಕ್ರೇನ್‌ಗಳನ್ನು ನಿಯೋಜಿಸಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 50 ಟನ್‌ ಸಾಮರ್ಥ್ಯದ ಕ್ರೇನ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.

ಬಿಕ್ಕಟ್ಟು ನಿರ್ವಹಣೆಗಾಗಿ ‘ಜಿಯೋಸ್ಪೇಷಿಯಲ್‌’ ತಂತ್ರಜ್ಞಾನ

‘ವಿವಿಧ ಇಲಾಖೆಗಳನ್ನು ಸೇರಿಸಿಕೊಂಡು ವಿಪತ್ತುಗಳನ್ನು ತ್ವರಿತಗತಿಯಲ್ಲಿ ನಿಯಂತ್ರಿಸುವ ಮೂಲಕ ಹಾನಿಯ ಪ್ರಮಾಣ ಕಡಿಮೆಗೊಳಿಸುವುದು ವಿಪತ್ತು ನಿರ್ವಹಣೆ ಯೋಜನೆಯ ಉದ್ದೇಶ. ಬಿಬಿಎಂಪಿ, ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳು ಕೈಗೊಳ್ಳಬೇಕಾದ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ(ಎಸ್‌ಒಪಿ) ರೂಪಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ ಮನೋಜ್‌ ರಾಜನ್‌ ತಿಳಿಸಿದ್ದಾರೆ.

‘ವಿಪತ್ತು ನಿರ್ವಹಣೆಯಲ್ಲಿ ಅತ್ಯಂತ ಪ್ರಮುಖವಾಗಿ ಕಾರ್ಯನಿರ್ವಹಿಸುವ ಸಮಗ್ರ ಸಂಪರ್ಕ ಕಮಾಂಡ್‌ ಸೆಂಟರ್‌ (ಐಸಿಸಿಸಿ) ಎಲ್ಲ ಚಟುವಟಿಕೆಗಳ ಬಗ್ಗೆ ನಿಗಾವಹಿಸಿ ಸಮನ್ವಯ ಸಾಧಿಸಲಿದೆ. ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ನಿರ್ಧಾರಗಳನ್ನು ಕೈಗೊಳ್ಳುವ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಬಿಕ್ಕಟ್ಟು ನಿರ್ವಹಣೆಗಾಗಿ ಇದೇ ಪ್ರಥಮ ಬಾರಿ ಏರೋ ಇಂಡಿಯಾ ಪ್ರದರ್ಶನ ನಡೆಯುವ ಸ್ಥಳದಲ್ಲಿ ಜಿಯೋಸ್ಪೇಷಿಯಲ್‌ ಪರಿಸರವನ್ನು ರಿಮೋಟ್‌ ಸೆನ್ಸಿಂಗ್‌ ಡೇಟಾದೊಂದಿಗೆ ಸಂಯೋಜಿಸಿದ್ದೇವೆ' ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT