ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಐಎನಲ್ಲಿ ಇನ್ನುಮುಂದೆ ‘ಮುಖವೇ ಬೋರ್ಡಿಂಗ್ ಪಾಸ್’

‘ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್’ ವ್ಯವಸ್ಥೆಗೆ ಚಾಲನೆ
Last Updated 23 ಜುಲೈ 2019, 19:07 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣವನ್ನು (ಕೆಐಎ) ಪ್ರವೇಶಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ರೂಪಿಸಲಾಗಿರುವ ‘ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್’ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.

ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತರಲಾಗಿರುವ ಈ ವ್ಯವಸ್ಥೆಯಿಂದಾಗಿ ಪ್ರಯಾಣಿಕರು ಇನ್ನು ಮುಂದೆ ಬಹುಬೇಗನೇ ನಿಲ್ದಾಣದೊಳಗೆ ಪ್ರವೇಶಿಸಬಹುದಾಗಿದೆ. ತರಹೇವಾರಿ ತಪಾಸಣೆಗೆ ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲುವುದು ತಪ್ಪಲಿದೆ.

‘ಪೋರ್ಚುಗಲ್‌ನ ವಿಷನ್‍ ಬಾಕ್ಸ್‌ ಕಂಪನಿ ಸಹಯೋಗದಲ್ಲಿ ಈ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಪ್ರವೇಶ ದ್ವಾರದಲ್ಲಿ ಅಳವಡಿಸಿರುವ ಯಂತ್ರದ ಸ್ಕ್ರೀನ್‌ ಮುಂದೆ ತಮ್ಮ ಮುಖ ತೋರಿಸಿ ನೇರವಾಗಿ ವಿಮಾನವೇರಬಹುದು’ ಎಂದು ನಿಲ್ದಾಣದ ಸಿಇಒ ಹರಿ ಮರಾರ್ ತಿಳಿಸಿದರು.

‘ಬೆಂಗಳೂರು ನಿಲ್ದಾಣದಿಂದ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೋರ್ಡಿಂಗ್‌ ಪ್ರಕ್ರಿಯೆ ತಡವಾಗುತ್ತಿರುವ ಬಗ್ಗೆ ಪ್ರಯಾಣಿಕರಿಂದ ದೂರುಗಳು ಬರುತ್ತಿವೆ. ಅದಕ್ಕೆ ಪರಿಹಾರವಾಗಿ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ’ ಎಂದು ಹೇಳಿದರು.

‘ನಿಮ್ಮ ಮುಖವೇ ಬೋರ್ಡಿಂಗ್ ಪಾಸ್’ ಎಂಬ ಧ್ಯೇಯದೊಂದಿಗೆ ಕೇಂದ್ರ ಸರ್ಕಾರದ ‘ಡಿಜಿಯಾತ್ರಾ’ ಯೋಜನೆಗೆ ಬೆಂಬಲಾರ್ಥವಾಗಿ ಈ ವ್ಯವಸ್ಥೆ ರೂಪಿಸಲಾಗಿದೆ. ವಿಮಾನ ಪ್ರಯಾಣದ ಆರಂಭದಿಂದ ಅಂತ್ಯದವರೆಗಿನ ಪ್ರಕ್ರಿಯೆಗಳೆಲ್ಲವೂ ಕಾಗದರಹಿತ ಆಗಲಿವೆ. ಪ್ರಯಾಣಿಕರು ಮೊದಲಿಗೆ ನೋಂದಣಿ ಮಾಡಿಕೊಂಡು ಮುಖಚಹರೆ ದಾಖಲಿಸಬೇಕು. ನಂತರ, ಅವರು ಯಾವಾಗ ಬೇಕಾದರೂ ಮುಖ ತೋರಿಸಿ ನೇರವಾಗಿ ನಿಲ್ದಾಣ ಪ್ರವೇಶಿಸಬಹುದು. ಪದೇ ಪದೇ ದಾಖಲೆಗಳ ಪರಿಶೀಲನೆ ಇರುವುದಿಲ್ಲ’ ಎಂದು ತಿಳಿಸಿದರು.

‘ವಿಸ್ತಾರ್ ಏರ್‌ಲೈನ್ಸ್ ವಿಮಾನದಲ್ಲಿ (ಯುಕೆ864) ಬೆಂಗಳೂರಿನಿಂದ ಮುಂಬೈಗೆ ಹೊರಟ ಪ್ರಯಾಣಿಕರು, ಮೊದಲ ಬಾರಿಗೆ ಈ ಸೇವೆ ಬಳಕೆ ಮಾಡಿದರು. ಸದ್ಯ ಸೀಮಿತ ಪ್ರಯಾಣಿಕರಿಗೆ ಈ ಸೇವೆ ಲಭ್ಯವಾಗಲಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ವಿಮಾನಗಳ ಪ್ರಯಾಣಿಕರಿಗೆ ಈ ವ್ಯವಸ್ಥೆ ಲಭ್ಯವಾಗುವಂತೆ ವಿಸ್ತರಣೆ ಮಾಡಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT