ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಬೆಂಗಳೂರು ನಗರದಿಂದ‌ ವಿಮಾನ ನಿಲ್ದಾಣಕ್ಕೆ 10 ರೂಪಾಯಿಯಲ್ಲಿ ಪ್ರಯಾಣಿಸಿ

ದಟ್ಟಣೆಯ ಅವಧಿಯಲ್ಲಿ ಸಂಚರಿಸಲಿವೆ ಉಪನಗರ ರೈಲುಗಳು
Last Updated 3 ಜನವರಿ 2021, 3:28 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೃದಯಭಾಗದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹಾಲ್‌ಸ್ಟೇಷನ್‌ವರೆಗೆ (ಕೆಐಎಡಿ) ಬಹುನಿರೀಕ್ಷಿತ ಉಪನಗರ ರೈಲು ಸೇವೆ ಸೋಮವಾರದಿಂದ (ಜ.4) ಆರಂಭಗೊಳ್ಳಲಿದೆ.

ನಗರದ ವಿವಿಧೆಡೆಯಿಂದ ಹಾಲ್‌ಸ್ಟೇಷನ್‌ವರೆಗೆ ಒಟ್ಟು ಹತ್ತು ರೈಲುಗಳು ಕಾರ್ಯಾಚರಿಸಲಿವೆ. ದೇವನಹಳ್ಳಿಯಿಂದ ಮೂರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲು ನಿಲ್ದಾಣ ಮತ್ತು ಬಂಗಾರಪೇಟೆಯಿಂದ (ಬಿಡಬ್ಲ್ಯುಟಿ) ತಲಾ ಎರಡು, ಯಲಹಂಕ (ವೈಎಲ್‌ಕೆ), ಯಶವಂತಪುರ (ವೈಪಿಆರ್‌) ಹಾಗೂ ಬೆಂಗಳೂರು ಕಂಟೋನ್ಮೆಂಟ್‌ನಿಂದ (ಬಿಎನ್‌ಸಿ) ತಲಾ ಒಂದು ರೈಲು ಈ ಮಾರ್ಗದಲ್ಲಿ ಸಂಚರಿಸಲಿವೆ.

‘ಪ್ರಾರಂಭಿಕ ಹಂತದಲ್ಲಿ ಹತ್ತು ರೈಲುಗಳು ಸಂಚಾರ ಆರಂಭಿಸಲಿವೆ. ಪ್ರಯಾಣಿಕರ ಸ್ಪಂದನೆ ನೋಡಿಕೊಂಡು ರೈಲುಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ. ಸೋಮವಾರ ಬೆಳಿಗ್ಗೆ 4.41ರಿಂದ ಮೊದಲ ರೈಲು ಕೆಎಸ್‌ಆರ್‌ನಿಂದ ಕೆಐಎಡಿಗೆ ಹೊರಡಲಿದೆ. ದಟ್ಟಣೆಯ ಸಂದರ್ಭದಲ್ಲಿ ಹೆಚ್ಚು ಸೇವೆ ನೀಡಲಾಗುತ್ತದೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಮಾನಿಲ್ದಾಣದಿಂದ ಯಾವ ಅವಧಿಯಲ್ಲಿ ಹೆಚ್ಚು ವಿಮಾನಗಳು ಬಂದಿಳಿಯುತ್ತವೆ ಹಾಗೂ ಹಾರಾಟ ನಡೆಸಲಿವೆ ಎಂಬ ಆಧಾರದ ಮೇಲೆ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಹೆಚ್ಚು ವಿಮಾನಗಳು ಸಂಚರಿಸುವ ಅವಧಿಗೂ ಮುಂಚೆ ರೈಲುಗಳು ಹಾಲ್‌ಸ್ಟೇಷನ್‌ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ಐದು, ಸಂಜೆ ಐದು ರೈಲುಗಳು ಸಂಚರಿಸಲಿವೆ’ ಎಂದರು.

‘ಪ್ರಾರಂಭದಲ್ಲಿ ಎಲ್ಲ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಲಾಗುತ್ತದೆ. ಕ್ರಾಂತಿವೀರ ಸಂಗೊಳ್ಳಿರಾಯಣ್ಣ (ಕೆಆರ್‌ಎಸ್‌) ನಗರ ರೈಲು ನಿಲ್ದಾಣದಿಂದ ಹಾಲ್‌ಸ್ಟೇಷನ್‌ಗೆ ತಲುಪಲು 50 ನಿಮಿಷ ಬೇಕಾಗುತ್ತದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ನಿಲುಗಡೆ ರಹಿತ ಸೇವೆ ಒದಗಿಸಲಾಗುತ್ತದೆ. ಆಗ ಪ್ರಯಾಣದ ಅವಧಿ ಸಾಕಷ್ಟು ಕಡಿಮೆಯಾಗಲಿದೆ’ ಎಂದು ಅವರು ಮಾಹಿತಿ ನೀಡಿದರು.

‘ಟಿಕೆಟ್‌ ದರ ಬಹಳ ಕಡಿಮೆ ಇರುವುದರಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ’ ಎಂದೂ ಅವರು ಹೇಳಿದರು.

ಬೆಂಗಳೂರು ನಗರ- ಕೆಐಎಡಿ ನಡುವೆ ವಿಶೇಷವಾಗಿ ಮೂರು ಜೋಡಿ ಡೆಮು ರೈಲುಗಳು ಸಂಚರಿಸಲಿವೆ. ವಾರದಲ್ಲಿ ಆರು ದಿನಗಳು (ಭಾನುವಾರ ಹೊರತುಪಡಿಸಿ) ಈ ಸೇವೆ ಇರಲಿದೆ. ಎರಡು ಮೋಟಾರು ಕಾರು ಸೇರಿ ಒಟ್ಟು ಎಂಟು ಬೋಗಿಗಳ ರೈಲುಗಳನ್ನು ಪರಿಚಯಿಸಲಾಗುತ್ತಿದೆ. ಇವು ಒಟ್ಟಾರೆ 2,402 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿವೆ. ರೈಲಿನ ಪ್ರತಿ ಬೋಗಿಯು 84 ಆಸನಗಳು ಸೇರಿ 325 ಪ್ರಯಾಣಿಕರ ಸಾಮರ್ಥ್ಯ ಹೊಂದಿರುತ್ತವೆ. ಮೋಟಾರು ಕಾರುಗಳ ಸಾಮರ್ಥ್ಯ 55 ಆಸನಗಳು ಸೇರಿ 226 ಆಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT