ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ | ಬೆಂಕಿಯಲ್ಲಿ ಅರಳುವ ಹೂವುಗಳು

ವಿಮಾನ ನಿಲ್ದಾಣದಲ್ಲಿ ಮಹಿಳಾ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಅಣಕು ಪ್ರದರ್ಶನ
Last Updated 3 ಮಾರ್ಚ್ 2020, 18:49 IST
ಅಕ್ಷರ ಗಾತ್ರ

ಬೆಂಗಳೂರು:ಅಪಾಯದ ಸೂಚನೆ ಸಿಗುತ್ತಿದ್ದಂತೆ ಎಚ್ಚರಗೊಳ್ಳುವ ಮಿದುಳು. ಚುರುಕುಗೊಳ್ಳುವ ಕಾಲುಗಳು. ಕಮಾಂಡರ್‌ ಕಡೆಯಿಂದ ಆದೇಶ ಹೊರಡುತ್ತಿದ್ದಂತೆ ಕಾರ್ಯಾಚರಣೆಗೆ ಧುಮುಕುವ ಯುವತಿಯರು. ಮುಗಿಲೆತ್ತರಕ್ಕೆ ಹೊತ್ತಿದ್ದ ಬೆಂಕಿ ಕ್ಷಣಾರ್ಧದಲ್ಲಿಯೇ ಶಾಂತ!

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಮಹಿಳಾ ಅಗ್ನಿಶಾಮಕ ಸಿಬ್ಬಂದಿಯಿಂದ ನಡೆದ ಅಣಕು ಪ್ರದರ್ಶನದ ನೋಟವಿದು. ಏಷ್ಯಾದಲ್ಲಿಯೇ ಮೊದಲ ಬಾರಿಗೆ ಮಹಿಳಾ ತಂಡವೊಂದು ಇಂತಹ ಕಾರ್ಯಾಚರಣೆ ನಡೆಸಿತು.

ಅಗ್ನಿ ಅವಘಡ ಸಂಭವಿಸಿದಾಗ ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಬಗೆ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು, ಪ್ರಯಾಣಿಕರನ್ನು ರಕ್ಷಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನು ಯುವತಿಯರು ತೋರಿಸಿಕೊಟ್ಟರು.

ಕೋಲ್ಕತ್ತದಲ್ಲಿನ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಗ್ನಿಶಾಮಕ ತರಬೇತಿ ಕೇಂದ್ರದಲ್ಲಿ ಈ ತಂಡದ 14 ಯುವತಿಯರು ನಾಲ್ಕು ತಿಂಗಳ ತರಬೇತಿ ಪಡೆದಿದ್ದಾರೆ. ದೈಹಿಕ ಸಾಮರ್ಥ್ಯ ಮತ್ತು ಲಿಖಿತ ಪರೀಕ್ಷೆಯಲ್ಲಿ ಇವರು ಉತ್ತೀರ್ಣರಾಗಿದ್ದಾರೆ. ಎಂಜಿನಿಯರಿಂಗ್, ವಿಮಾನದ ಸಂರಚನೆ, ಅಗ್ನಿ ಸುರಕ್ಷತೆ ಕುರಿತು ತರಬೇತಿ ಪಡೆದಿದ್ದಾರೆ.

ಸದ್ಯ, ಈ ತಂಡ ವಿಮಾನ ರಕ್ಷಣೆ ಮತ್ತು ಅಗ್ನಿ ಅವಘಡ ವಿರುದ್ಧದ ಕಾರ್ಯಾಚರಣೆ (ಎಆರ್‌ಎಫ್‌ಎಫ್‌) ತಂಡದ ಭಾಗವಾಗಿದೆ. ಈ ತಂಡ ಉತ್ತರ ಮತ್ತು ದಕ್ಷಿಣದ ರನ್‍ವೇಗಳೆರಡನ್ನೂ ನಿಭಾಯಿಸುತ್ತದೆ.

ತರಬೇತಿ ಮತ್ತು ಎಆರ್‌ಎಫ್‌ಎಫ್‌ ಪಡೆಗೆ ಸೇರ್ಪಡೆಗೊಂಡ ಒಂದು ವರ್ಷದ ನಂತರ, ತುರ್ತು ರಕ್ಷಣೆಗೆ ತಾವು ಸಿದ್ಧರಿರುವುದಾಗಿ ಯುವತಿಯರು ಈ ಅಣಕು ಪ್ರದರ್ಶನದಲ್ಲಿ ತೋರಿಸಿಕೊಟ್ಟರು.ಕಲಬುರ್ಗಿ, ಬೀದರ್, ಹಾಸನ ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳ ಯುವತಿಯರು ಈ ತಂಡದಲ್ಲಿದ್ದಾರೆ.

‘ಹುಡುಗಿಯರು ಬೆಂಕಿ ಹಚ್ಚುತ್ತಾರೆಆರಿಸಲ್ಲಎಂದವರಿಗೆ ಉತ್ತರ’
‘ಹುಡುಗಿಯರಿಗೆ ಬೆಂಕಿ ಹಚ್ಚಿ ಮಾತ್ರ ಗೊತ್ತು. ಆರಿಸಿ ಗೊತ್ತಿಲ್ಲ. ಹಾಗಾಗಿ, ಅವರು ಅಗ್ನಿಶಾಮಕ ದಳದಲ್ಲಿ ಇರುವುದಿಲ್ಲ ಎಂದು ಹಲವರು ರೇಗಿಸುತ್ತಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿ, ಇಂದು ಈ ತಂಡದಲ್ಲಿದ್ದೇನೆ. ರೇಗಿಸಿದವರಿಗೆ ಇದೇ ನನ್ನ ಉತ್ತರ’ ಎಂದರು ಹಾಸನದ ವನಿತಾ.

‘ನಾಲ್ಕು ತಿಂಗಳ ತರಬೇತಿ ಕಠಿಣವಾಗಿತ್ತು. ಬೇರೆಯವರ ಪ್ರಾಣರಕ್ಷಣೆ ಮಾಡಬೇಕು ಎಂದಾಗ ನಾವು ಚುರುಕಾಗಿರಬೇಕು ಮತ್ತು ದೈಹಿಕವಾಗಿಯೂ ಸಮರ್ಥರಾಗಿರಬೇಕು. ತರಬೇತಿಯಲ್ಲಿ ಇದನ್ನು ಹೇಳಿಕೊಟ್ಟರು. ನಾನು ಈ ತಂಡದಲ್ಲಿರುವುದರಿಂದ ಪೋಷಕರಿಗೆ ನನ್ನ ಬಗ್ಗೆ ಹೆಮ್ಮೆ ಇದೆ’ ಎಂದು ಅವರು ಹೇಳಿದರು.

‘ವೈಮಾನಿಕ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿದ್ದೇನೆ. ಇದು ಒಳ್ಳೆಯ ಕ್ಷೇತ್ರ ಎಂದು ಎಲ್ಲರೂ ಹೇಳುತ್ತಾರೆ. ಮತ್ತೊಬ್ಬರಿಗೆ ಸ್ಫೂರ್ತಿಯಾಗಿರುವುದು ಸಣ್ಣ ವಿಷಯವಲ್ಲ. ನಮ್ಮ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿರುವ ಬಿಐಎಎಲ್‌ಗೆ ಧನ್ಯವಾದ ಹೇಳುತ್ತಾರೆ’ ಎನ್ನುತ್ತಾರೆ ಕಲಬುರ್ಗಿಯ ಪ್ರಿಯದರ್ಶಿನಿ ಬಿರಾದಾರ.

‘ಈ ಕ್ಷೇತ್ರ ಹೆಣ್ಣುಮಕ್ಕಳಿಗಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ಅದನ್ನು ಮೀರಬೇಕಿತ್ತು. ಯಾವುದೇ ದೊಡ್ಡ ನಿರೀಕ್ಷೆ ಇರಲಿಲ್ಲ. ಆದರೂ ಪ್ರಯತ್ನ ಬಿಟ್ಟಿರಲಿಲ್ಲ. ಈಗ ಈ ತಂಡದಲ್ಲಿರುವುದಕ್ಕೆ ಹೆಮ್ಮೆ ಎನಿಸುತ್ತದೆ’ ಎಂದು ಕಣ್ಣರಳಿಸಿದರು ದೇವನಹಳ್ಳಿಯ ಸುಮಾ.

ಕಾರ್ಯಾಚರಣೆ ಸಂದರ್ಭಗಳು
* ಪೂರ್ಣ ತುರ್ತು ಸಂದರ್ಭ
* ಸ್ಥಳೀಯ ತುರ್ತು ಸಂದರ್ಭ
* ಅಪಘಾತ ಸಂದರ್ಭ
* ಭದ್ರತಾ ಲೋಪ
* ಹವಾಮಾನ ವೈಪರೀತ್ಯ

ಸುರಕ್ಷತೆ ಸೌಲಭ್ಯಗಳು
* ಎರಡು ಅಗ್ನಿಶಾಮಕ ಠಾಣೆ
* ಮೂರು ಆಂಬುಲೆನ್ಸ್‌
* 25 ಅಗ್ನಿಶಾಮಕ ವಾಹನಗಳು
* 265 ಒಟ್ಟು ಸುರಕ್ಷತಾ ಸಿಬ್ಬಂದಿ
* 14 ಯುವತಿಯರು

**

ಪುರುಷ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಮಹಿಳೆಯರು ತಮ್ಮ ಸಾಮರ್ಥ್ಯ ಪ್ರದರ್ಶಿಸಬಹುದು ಎಂಬುದಕ್ಕೆ ಈ ಯುವತಿಯರೇ ನಿದರ್ಶನ. ಈ ಮೂಲಕ ಬಿಐಇಎಲ್ ಹೊಸ ಇತಿಹಾಸ ಸೃಷ್ಟಿಸಿದೆ.
-ವೆಂಕಟರಮಣ,ಬಿಐಎಎಲ್‌ ಕಂಪನಿ ವ್ಯವಹಾರ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT