ಸೋಮವಾರ, ನವೆಂಬರ್ 18, 2019
25 °C
ಕಾಮಗಾರಿಗಳಲ್ಲಿ ಅಂದಾಜು ವೆಚ್ಚಕ್ಕಿಂತ ಶೇ 32ಕ್ಕೂ ಹೆಚ್ಚು ಮೊತ್ತಕ್ಕೆ ಟೆಂಡರ್‌: ಇನ್ನೊಂದು ತನಿಖೆಯೂ ಠುಸ್‌

ಅಧಿಕಾರಯುಕ್ತ ಸಮಿತಿ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ

Published:
Updated:

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಗರೋತ್ಥಾನ ಅನುದಾನದಡಿ ಬಹುತೇಕ ಕಾಮಗಾರಿಗಳನ್ನು ಅಂದಾಜು ಮೊತ್ತಕ್ಕಿಂತ ಶೇ 32ಕ್ಕೂ ಅಧಿಕ ಮೊತ್ತ ನಮೂದಿಸಿದವರಿಗೆ ಗುತ್ತಿಗೆ ನೀಡಲಾಗಿದೆ ಎಂಬ ಆರೋಪವನ್ನು ನಗರಾಭಿವೃದ್ಧಿ ಇಲಾಖೆ ಅಂಕಿಅಂಶಗಳ ಸಮೇತ ಸಾರಾಸಗಟಾಗಿ ತಳ್ಳಿಹಾಕಿದೆ.

‘2016ರ ನ.3ರಿಂದ 2019ರ ಜೂ.3ರ ನಡುವೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ನೇತೃತ್ವದ ಅಧಿಕಾರಯುಕ್ತ ಸಮಿತಿಯಿಂದ ಅನುಮೋದನೆ ದೊರೆತ ಬಹುತೇಕ ಕಾಮಗಾರಿಗಳನ್ನು ನಿರ್ವಹಿಸಲು ಶೇ 32ಕ್ಕೂ ಹೆಚ್ಚು ಮೊತ್ತ ನಮೂದಿಸಿದ ಗುತ್ತಿಗೆದಾರರಿಗೆ ನೀಡಲಾಗಿದೆ. ಈ ಅವ್ಯವಹಾರಗಳ ಕುರಿತು ಹಾಗೂ ಕಾಮಗಾರಿಗಳ ಪ್ರಗತಿ ಮತ್ತು ಗುಣಮಟ್ಟದ ಕುರಿತು ತನಿಖೆ ನಡೆಸಿ ಮೂರು ತಿಂಗಳ ಒಳಗೆ ವರದಿ ಸಲ್ಲಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯ ಕಾರ್ಯದರ್ಶಿಗೆ ಆ. 26ರಂದು ಆದೇಶ ಮಾಡಿದ್ದರು.

ಈಗಿನ ನಗರಾಭಿವೃದ್ಧಿ ಇಲಾಖೆ ಕೂಲಂಕಶ ತನಿಖೆ ನಡೆಸಿ ಮುಖ್ಯಮಂತ್ರಿಗೆ ವರದಿ ಸಲ್ಲಿಸಿದೆ. 2016ರ ನ.3ರಿಂದ 2019ರ ಜೂ.3ರ ನಡುವೆ ಹಿಂದಿನ ಅಧಿಕಾರಯುಕ್ತ ಸಮಿತಿ ಒಟ್ಟು 401 ಕಾಮಗಾರಿಗಳಿಗೆ ಅನುಮೋದನೆ ನೀಡಿತ್ತು. ಈ ಪೈಕಿ 160 ಟೆಂಡರ್‌ಗಳು (ಒಟ್ಟು ಮೊತ್ತ ₹ 1,358 ಕೋಟಿ) ಅಂದಾಜು ವೆಚ್ಚಕ್ಕಿಂತ ಕಡಿಮೆ ಮೊತ್ತದವು. ಮೂರು ಕಾಮಗಾರಿಗಳನ್ನು ಮಾತ್ರ ಅಂದಾಜು ವೆಚ್ಚಕ್ಕಿಂತ ಶೇ 30ಕ್ಕಿಂತ ಹೆಚ್ಚು ಮೊತ್ತ ನಮೂದಿಸಿದ ಗುತ್ತಿಗೆದಾರರಿಗೆ ನೀಡಲಾಗಿದೆ. ಶೇ 25ಕ್ಕಿಂತ ಹೆಚ್ಚು ಮೊತ್ತ ನಮೂದಿಸಿರುವ ಎಲ್ಲ 9 ಟೆಂಡರ್‌ಗಳಿಗೂ ಸಚಿವ ಸಂಪುಟವೇ ಅನುಮೋದನೆ ನೀಡಿದೆ ಎಂದು ಸಮಿತಿ ಸ್ಪಷ್ಟಪಡಿಸಿದೆ. 

ತಾಂತ್ರಿಕ ನೈಪುಣ್ಯ ಮತ್ತು ಅಧಿಕ ಪ್ರಾರಂಭಿಕ ಬಂಡವಾಳ ಹೂಡಿಕೆ ಅಗತ್ಯವಿರುವ ಟೆಂಡರ್‌ ಶ್ಯೂರ್‌ ಕಾಮಗಾರಿಗಳಲ್ಲಿ ಮೂಲಸೌಕರ್ಯ ಸ್ಥಳಾಂತರ ಮಾಡಬೇಕಾಗುತ್ತದೆ. ಕೆಲವೆಡೆ ರಾತ್ರಿ ಪಾಳಿಯಲ್ಲೇ ಕಾಮಗಾರಿ ನಡೆಸಬೇಕಾದ ಅಗತ್ಯವಿರುತ್ತದೆ. ಇನ್ನೂ ಕೆಲವೆಡೆ ಸಂಚಾರ ದಟ್ಟಣೆ ರಸ್ತೆಗಳಲ್ಲಿ ಎಡೆಬಿಡದೆ ಕಾಮಗಾರಿ ನಡೆಸಬೇಕಿರುತ್ತದೆ. ಇಂತಹ ಕ್ಲಿಷ್ಟ ಕಾಮಗಾರಿ ನಿರ್ವಹಿಸಲು 2–3 ಬಾರಿ ಟೆಂಡರ್‌ ಕರೆದರೂ ಗುತ್ತಿಗೆದಾರರು ಆಸಕ್ತಿ ತೋರಿರಲಿಲ್ಲ. ಈ ಕಾಮಗಾರಿಗಳ ಸಂಕೀರ್ಣತೆಯನ್ನು ಪರಿಗಣಿಸಿ ಸಚಿವ ಸಂಪುಟದ ಅನುಮೋದನೆ ಪಡೆದೇ 3 ಕಾಮಗಾರಿಗಳಿಗೆ ಮಾತ್ರ ಶೇ 30ಕ್ಕಿಂತ ಹೆಚ್ಚು ಮೊತ್ತದ ಬಿಡ್‌ಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ ಟೆಂಡರ್‌ ಶ್ಯೂರ್‌ ಕಾಮಗಾರಿಯೂ (ಶೇ 37.86ರಷ್ಟು ಹೆಚ್ಚು) ಸೇರಿದೆ ಎಂದು ಸಮಿತಿ ಹೇಳಿದೆ.

‘ಬಿಬಿಎಂಪಿ ನಗರೋತ್ಥಾನ ಕಾಮಗಾರಿಗಳ ಟೆಂಡರ್‌ ಅನುಮೋದನೆ ನೀಡುವ ಅಧಿಕಾರವನ್ನು ಪಾಲಿಕೆ ಸ್ಥಾಯಿಸಮಿತಿ, ಪಾಲಿಕೆ ಸಭೆ ಹಾಗೂ ಆಯುಕ್ತರಿಂದ ಹಿಂಪಡೆದು ಅಧಿಕಾರಯುಕ್ತ ಸಮಿತಿಗೆ ವಹಿಸಿತ್ತು. ₹ 5,300 ಕೋಟಿ ಮೊತ್ತದ ವಿವಿಧ ಯೋಜನೆಗಳ ಕಾಮಗಾರಿಗಳ ಸಂಬಂಧ ಗುತ್ತಿಗೆದಾರರು ನಮೂದಿಸಿದ್ದ  ಶೇ 34ರಷ್ಟು (ಸರಾಸರಿ) ಹೆಚ್ಚು ಮೊತ್ತಕ್ಕೆ ಹಿಂದೆ ಮುಂದೆ ಆಲೋಚಿಸದೆ ಅನುಮೋದನೆ ನೀಡಲಾಗಿದೆ. ಇದರ ಹಿಂದೆ ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆದಿದೆ’ ಎಂದು ಬಿಜೆಪಿ ನಗರ ಜಿಲ್ಲಾ ಘಟಕದ ವಕ್ತಾರ ಎನ್‌.ಆರ್‌.ರಮೇಶ್‌ ಆ.24ರಂದು ಆರೋಪ ಮಾಡಿದ್ದರು.

‘ನಾನು ಬಯಲಿಗೆಳೆದ ಪ್ರಕರಣವನ್ನು ಮುಖ್ಯಮಂತ್ರಿಗಳು ತನಿಖೆಗೆ ವಹಿಸಿದ್ದಾರೆ. ನನ್ನ ಪ್ರಾಮಾಣಿಕ ಹೋರಾಟಕ್ಕೆ ಜಯ ಸಿಕ್ಕಿದೆ’ ಎಂದೂ ಅವರು ಹೇಳಿಕೊಂಡಿದ್ದರು.

ಈ ಕುರಿತು ವರದಿಯಲ್ಲಿ ಪ್ರತಿಕ್ರಯಿಸಿರುವ ಈಗಿನ ಅಧಿಕಾರಯುಕ್ತ ಸಮಿತಿ, ‘ಈ ಆರೋಪ ತಪ್ಪುದಾರಿಗೆಳೆಯುವ ಮಾಹಿತಿ’ ಎಂದು ಸ್ಪಷ್ಟಪಡಿಸಿದೆ.

ತನಿಖಾ ವರದಿಯನ್ನು ಮುಖ್ಯಮಂತ್ರಿ ಅವರೇ ಅನುಮೋದಿಸಿದ್ದಾರೆ. ಇದರಿಂದಾಗಿ, ಅಧಿಕಾರಯುಕ್ತ ಸಮಿತಿಯ ವಿರುದ್ಧ ಎನ್‌.ಆರ್‌.ರಮೇಶ್‌ ನಿರಾಧಾರ ಆರೋಪ ಮಾಡಿರುವುದನ್ನು ಮುಖ್ಯಮಂತ್ರಿಗಳೇ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.]

‘ಕಾಲಹರಣ ತಪ್ಪಿದೆ– ಹಣ ಉಳಿದಿದೆ’
‘ಟೆಂಡರ್‌ ಅನುಮೋದನೆಯಲ್ಲಿ ಕಾಲಹರಣವಾಗುವುದು ಅಧಿಕಾರಯುಕ್ತ ಸಮಿತಿಯಿಂದಾಗಿ ತಪ್ಪಿದೆ. ಸಮಿತಿಯಿಯು ಸ್ವೀಕೃತವಾದ ಟೆಂಡರ್‌ಗಳ ಮೊತ್ತವನ್ನೂ ತಗ್ಗಿಸಿ ಅನುಮೋದನೆ ನೀಡಿದ್ದರಿಂದ ಸರ್ಕಾರದ ಬೊಕ್ಕಸದ ಹೊರೆ ತಗ್ಗಿಸಲು ಸಾಧ್ಯವಾಗಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿಸಲಿದೆ’
‘ಅಧಿಕಾರಿಯುಕ್ತ ಸಮಿತಿ ಬೇಕಾಬಿಟ್ಟಿ ಟೆಂಡರ್‌ ಮೊತ್ತಗಳಿಗೆ ಅನುಮೋದನೆ ನೀಡಿದೆ ಎಂಬ ಆರೋಪದಿಂದ ನಕಾರಾತ್ಮಕ ಸಂದೇಶ ರವಾನೆಯಾಗಿದೆ.  ಭವಿಷ್ಯದಲ್ಲಿ ಹಿರಿಯ ಅಧಿಕಾರಿಗಳು ಟೆಂಡರ್‌ ಅನುಮೋದನೆ ಬಗ್ಗೆ ತೀರ್ಮಾನ ಕೈಗೊಳ್ಳಲು ಹಿಂಜರಿಯುವ ಪ್ರವೃತ್ತಿಗೆ ಇದು ಕಾರಣವಾಗಲಿದೆ. ಇದು ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿಸುವುದಕ್ಕೆ ಕಾರಣವಾಗುತ್ತದೆ’ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶೇ 25ರಿಂದ ಶೇ 30ರಷ್ಟು ಹೆಚ್ಚು ಮೊತ್ತಕ್ಕೆ ಟೆಂಡರ್‌

ಕಾಮಗಾರಿ; ಸಂಖ್ಯೆ; ಮೊತ್ತ (₹ ಕೋಟಿ)

ವೈಟ್‌ಟಾಪಿಂಗ್‌; 2; 977.13

ರಾಜಕಾಲುವೆ; 5; 784.92

ಶೇ 30ಕ್ಕಿಂತ ಹೆಚ್ಚು ಮೊತ್ತಕ್ಕೆ ಟೆಂಡರ್‌

ಕಾಮಗಾರಿ; ಸಂಖ್ಯೆ; ಮೊತ್ತ (₹ ಕೋಟಿ)

ಟೆಂಡರ್‌ಶ್ಯೂರ್‌; 1; 130

ರಾಜಕಾಲುವೆ;1; 57.15

ಗ್ರೇಡ್‌ ಸಪರೇಟರ್‌; 1; 21.75

ಯಾವ ಕಾಮಗಾರಿ ಎಷ್ಟು ಹೆಚ್ಚು ಮೊತ್ತಕ್ಕೆ ಟೆಂಡರ್‌?

ಹೆಚ್ಚಳ ಪ್ರಮಾಣ; ಕಾಮಗಾರಿ ಸಂಖ್ಯೆ; ಟೆಂಡರ್‌ಗಳ ಮೊತ್ತ (₹ ಕೋಟಿ)

ಅಂದಾಜು ವೆಚ್ಚಕ್ಕಿಂತ ಕಡಿಮೆ; 160; 1,358

ಶೇ 1ರಷ್ಟು ಹೆಚ್ಚು ಮೊತ್ತಕ್ಕೆ; 11; 533.84

ಶೇ1ರಿಂದ ಶೇ 5ರಷ್ಟು ; 52; 578.9 

ಶೇ 5ರಿಂದ ಶೇ 10ರಷ್ಟು; 101;1,094

ಶೇ 10ರಿಂದ ಶೇ 15ರಷ್ಟು; 33; 524.24 

ಶೇ 15ರಿಂದ ಶೇ 20; 20; 1428

ಶೇ 20ರಿಂದ ಶೇ 25; 14; 689.52

ಪ್ರತಿಕ್ರಿಯಿಸಿ (+)