ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಮಕ್ಕಳಿಗೆ ಸಮರ್ಪಕವಾಗಿ ಸಿಗದ ಪೌಷ್ಟಿಕ ಆಹಾರ: ಹೆಚ್ಚಿದ ಅಪೌಷ್ಟಿಕತೆ

ಕೋವಿಡ್‌-19
Last Updated 21 ಡಿಸೆಂಬರ್ 2020, 1:10 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಕೋವಿಡ್-19‌ ಕಾರಣ ಪೌಷ್ಟಿಕ ಆಹಾರ ಸಿಗದಿರುವುದರಿಂದ ಅಂಗನವಾಡಿ ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಏರಿಕೆಯಾಗಿದೆ. ರಾಜ್ಯದಲ್ಲಿ ಕೇವಲ ಐದು ತಿಂಗಳ ಅವಧಿಯಲ್ಲಿ 9,478 ಮಕ್ಕಳು ಅಪೌಷ್ಟಿಕತೆಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿ–ಅಂಶಗಳಿಂದ ಗೊತ್ತಾಗಿದೆ.

ಈ ವರ್ಷದ ಏಪ್ರಿಲ್‌ನಿಂದ ಆಗಸ್ಟ್‌ವರೆಗಿನ ಅಧ್ಯಯನದಲ್ಲಿ ಈ ಕಳವಳಕಾರಿ ಅಂಶ ಗಮನಕ್ಕೆ ಬಂದಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಆರು ವರ್ಷದೊಳಗಿನ ಮಕ್ಕಳಿಗೆ ಕಾಡುವ ಅಪೌಷ್ಟಿಕತೆ ನಿವಾರಣೆ ಮತ್ತು ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿವೆ. ಹೀಗಿದ್ದರೂ ಅಪೌಷ್ಟಿಕತೆ ನಿವಾರಣೆ ಸಾಧ್ಯವಾಗಿಲ್ಲ. ಕಳೆದ ವರ್ಷ ಒಟ್ಟು 9,544 ಮಕ್ಕಳು ಅಪೌಷ್ಟಿಕತೆಗೆ ಒಳಗಾಗಿದ್ದರು. ಈ ವರ್ಷ ಐದು ತಿಂಗಳಲ್ಲಿ 9,478 ಮಕ್ಕಳು ಅಪೌಷ್ಟಿಕತೆಗೆ ಒಳಗಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಅಪೌಷ್ಟಿಕತೆ ನಿವಾರಣೆಗೆ ರಾಜ್ಯದಾದ್ಯಂತ ‘ಪೋಷಣ್ ಅಭಿಯಾನ’ವನ್ನೂ ನಡೆಸಲಾಗುತ್ತಿದೆ.ಪೌಷ್ಟಿಕ ಪುನಶ್ಚೇತನ ಕೇಂದ್ರಗಳು ಕೂಡ ಕಾರ್ಯನಿರ್ವಹಿಸುತ್ತಿವೆ. ಇಷ್ಟಾಗಿಯೂ ಮಕ್ಕಳಲ್ಲಿನ ಅಪೌಷ್ಟಿಕತೆ ಸಮಸ್ಯೆ ನಿಯಂತ್ರಣಕ್ಕೆ ಬಂದಿಲ್ಲ ಎಂಬುದು ಇಲಾಖೆಯ ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ.

‘ಸಮಗ್ರ ಶಿಶು ಅಭಿವೃದ್ಧಿ ಕಾರ್ಯಕ್ರಮ’ದಡಿ ಅಂಗನವಾಡಿ ಕೇಂದ್ರಗಳಲ್ಲಿ 6 ವರ್ಷದೊಳಗಿನ ಮಕ್ಕಳಿಗೆ ಚಿತ್ರಾನ್ನ, ರವೆ ಲಾಡು, ಅಕ್ಕಿ ಕಿಚಡಿ, ಮೊಳಕೆ ಬರಿಸಿದ ಹೆಸರುಕಾಳು, ಊಟ ಸೇರಿದಂತೆ ಪೂರಕ ಪೌಷ್ಟಿಕ ಆಹಾರ ಒದಗಿಸಲಾಗುತ್ತಿತ್ತು. ಕ್ಷೀರ ಭಾಗ್ಯ ಯೋಜನೆಯಡಿ ವಾರದಲ್ಲಿ 5 ದಿನ 150 ಮಿ.ಲೀ ಹಾಲು ಹಾಗೂ 2 ದಿನ ಮೊಟ್ಟೆ ನೀಡಲಾಗುತ್ತಿತ್ತು. ಕೋವಿಡ್‌ ಕಾಣಿಸಿಕೊಂಡ ಬಳಿಕ ಅಂಗನವಾಡಿ ಕೇಂದ್ರಗಳಿಗೆ ಬೀಗ ಬಿದ್ದಿದೆ’ ಎಂದು ಇಲಾಖೆ ಮೂಲಗಳು ಹೇಳಿವೆ.

ಇದರಿಂದಾಗಿ ಮಕ್ಕಳ ಮನೆಗೆ ಆಹಾರ ಧಾನ್ಯ ವಿತರಿಸಲಾಗುತ್ತಿದ್ದು, ಅವುಗಳನ್ನು ಕುಟುಂಬದ ಸದಸ್ಯರು ಹಂಚಿಕೊಳ್ಳುತ್ತಿರುವ ಪರಿಣಾಮ ಮಕ್ಕಳ ಪೌಷ್ಟಿಕ ಆಹಾರ ಸೇವನೆಗೆ ಕತ್ತರಿ ಬಿದ್ದಿದೆ ಎಂದು ಇಲಾಖೆ ಮೂಲಗಳು ಹೇಳಿವೆ.

ಸಮಸ್ಯೆ ಹೆಚ್ಚಳ ಸಾಧ್ಯತೆ: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ತೂಕ, ಎತ್ತರವನ್ನು ಪ್ರತಿ ತಿಂಗಳು ಪರಿಶೀಲಿಸುವ ಜತೆಗೆ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಅಗತ್ಯ ಚಿಕಿತ್ಸೆ ಒದಗಿಸಲಾಗುತ್ತಿತ್ತು. ಆದರೆ, ಕೋವಿಡ್‌ ಕಾಣಿಸಿಕೊಂಡ ಬಳಿಕ ತೂಕ ಮತ್ತು ಎತ್ತರದ ಅಳತೆ ಹಾಗೂ ಆರೋಗ್ಯ ತಪಾಸಣೆ ನಡೆದಿಲ್ಲ. ಅಂಗನವಾಡಿಗಳು ಪ್ರಾರಂಭವಾದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಇಲಾಖೆಯ ಅಧಿಕಾರಿಗಳೇ ಆತಂಕ ವ್ಯಕ್ತಪಡಿಸಿದ್ದಾರೆ.

**

ಕೋವಿಡ್ ಕಾರಣದಿಂದ ಆಹಾರ ಧಾನ್ಯವನ್ನು ಮನೆಗೆ ಪೂರೈಕೆ ಮಾಡಲಾಗುತ್ತಿದೆ. ಅದನ್ನು ದೊಡ್ಡವರೂ ಸೇವಿಸುತ್ತಿರುವುದು ಮಕ್ಕಳಲ್ಲಿ ಅಪೌಷ್ಟಿಕತೆಗೆ ಕಾರಣವಾಗುತ್ತಿದೆ.
-ಪೆದ್ದಪ್ಪಯ್ಯ ಆರ್.ಎಸ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ

**

ಕೋವಿಡ್ ಕಾರಣ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಉತ್ತಮ ಆಹಾರ ಸೇವಿಸಬೇಕು. ಅಪೌಷ್ಟಿಕತೆಯಿಂದ ರಕ್ತಹೀನತೆ ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
-ಡಾ. ಶ್ರೀನಿವಾಸ್ ಎಸ್., ಕಿಮ್ಸ್‌ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT