ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಡಿ ಮಾಡಲಿಲ್ಲವೆಂಬ ಕೋಪ:ತಾಯಿ ಕೊಂದು ಪೊಲೀಸ್ ಠಾಣೆಗೆ ಕರೆ ಮಾಡಿದ 17 ವರ್ಷದ ಮಗ!

ತಿಂಡಿ ಮಾಡಲಿಲ್ಲವೆಂಬ ಕೋಪಕ್ಕೆ ಕೃತ್ಯ ಆರೋಪ: ಬಾಲಕ ವಶಕ್ಕೆ
Published 2 ಫೆಬ್ರುವರಿ 2024, 23:40 IST
Last Updated 2 ಫೆಬ್ರುವರಿ 2024, 23:40 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್. ಪುರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ನೇತ್ರಾವತಿ (40) ಅವರನ್ನು ರಾಡ್‌ನಿಂದ ಹೊಡೆದು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಅವರ 17 ವರ್ಷದ ಮಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ 8 ಗಂಟೆ ಅವಧಿಯಲ್ಲಿ ಕೊಲೆ ನಡೆದಿರುವ ಮಾಹಿತಿ ಇದೆ. ಕೃತ್ಯ ಎಸಗಿದ್ದ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ, ತಾಯಿಯನ್ನು ಕೊಂದಿರುವುದಾಗಿ ಹೇಳಿ ಠಾಣೆಗೆ ಕರೆ ಮಾಡಿದ್ದ. ಸಿಬ್ಬಂದಿ ಮನೆಗೆ ಹೋಗಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ತಿಂಡಿ ವಿಚಾರವಾಗಿ ತಾಯಿ– ಮಗನ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿರುವುದಾಗಿ ಗೊತ್ತಾಗಿದೆ. ಮಗನನ್ನು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಿ, ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ನೇತ್ರಾವತಿ ಹಾಗೂ ಅವರ ಮಗ, ಮುಳಬಾಗಿಲಿನವರು. 30 ವರ್ಷಗಳ ಹಿಂದೆಯೇ ನೇತ್ರಾವತಿ ಕುಟುಂಬ ಬೆಂಗಳೂರಿಗೆ ಬಂದಿತ್ತು. ಸ್ಥಳೀಯ ಜಸ್ಟಿಸ್ ಭೀಮಯ್ಯ ಬಡಾವಣೆಯ ಮನೆಯಲ್ಲಿ ವಾಸವಿತ್ತು. ನೇತ್ರಾವತಿ ಅವರೇ ಕೆಲಸ ಮಾಡಿ ಮಗನನ್ನು ಸಾಕುತ್ತಿದ್ದರು’ ಎಂದು ಹೇಳಿದರು.

ರಾತ್ರಿಯೂ ಗಲಾಟೆ

‘ಮಗ ಪದೇ ಪದೇ ತಾಯಿ ಮೇಲೆ ಸಿಟ್ಟು ಮಾಡಿಕೊಳ್ಳುತ್ತಿದ್ದ. ಇದೇ ಕಾರಣಕ್ಕೆ ನಿತ್ಯವೂ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆಯುತ್ತಿತ್ತು. ಗುರುವಾರ ರಾತ್ರಿಯೂ ಜಗಳ ಮಾಡಿದ್ದ ಮಗ, ಊಟ ಮಾಡದೇ ಮಲಗಿದ್ದ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ಶುಕ್ರವಾರ ಬೆಳಿಗ್ಗೆ ಎದ್ದಿದ್ದ ಮಗ, ‘ಹೊಟ್ಟೆ ಹಸಿದಿದ್ದು, ತಿಂಡಿ ಕೊಡು’ ಎಂದು ತಾಯಿಗೆ ತಾಕೀತು ಮಾಡಿದ್ದ. ‘ತಿಂಡಿ ಮಾಡಿಲ್ಲ. ಮನೆ ಕೆಲಸ ಹೆಚ್ಚಿದ್ದು, ಅದನ್ನು ಮುಗಿಸಿ ತಿಂಡಿ ತಯಾರಿಸುತ್ತೇನೆ’ ಎಂದು ತಾಯಿ ಹೇಳಿದ್ದರು. ಅಷ್ಟಕ್ಕೆ ಮಗ, ‘ತಿಂಡಿ ಏಕೆ ಮಾಡಿಲ್ಲ’ ಎಂದು ಜಗಳಕ್ಕೆ ಇಳಿದಿದ್ದ.’

‘ತಾಯಿ–ಮಗನ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಮಗ, ಕಬ್ಬಿಣದ ರಾಡ್‌ನಿಂದ ತಾಯಿಯ ತಲೆಗೆ ಹೊಡೆದಿದ್ದ. ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ನರಳಾಡಿ ತಾಯಿ ಮೃತಪಟ್ಟಿದ್ದರು. ಗಾಬರಿಗೊಂಡಿದ್ದ ಮಗ, ಠಾಣೆಗೆ ಕರೆ ಮಾಡಿ ಕೊಲೆ ಸಂಗತಿ ತಿಳಿಸಿದ್ದ. ಕೊಲೆ ಬಗ್ಗೆ ಅಕ್ಕ–ಪಕ್ಕದ ನಿವಾಸಿಗಳು ಹಾಗೂ ಸಂಬಂಧಿಕರಿಂದಲೂ ಹೇಳಿಕೆ ಪಡೆಯಲಾಗಿದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT