ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕಟಗೊಂಡ ವರ್ಷವೇ ಪುಸ್ತಕ ಖರೀದಿಸಿ: ಗ್ರಂಥಾಲಯ ಇಲಾಖೆ ನಿರ್ದೇಶಕರಿಗೆ ಮನವಿ

ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರಿಗೆ ಪ್ರಕಾಶಕರ ಮನವಿ
Published 15 ಮಾರ್ಚ್ 2024, 14:28 IST
Last Updated 15 ಮಾರ್ಚ್ 2024, 14:28 IST
ಅಕ್ಷರ ಗಾತ್ರ

ಬೆಂಗಳೂರು: ‘ಪುಸ್ತಕಗಳು ಪ್ರಕಟವಾಗುವ ವರ್ಷವೇ ಆರ್ಥಿಕ ಲಭ್ಯತೆಗೆ ಅನುಗುಣವಾಗಿ ಪುಸ್ತಕಗಳನ್ನು ಖರೀದಿಸಿ, ಓದುಗರಿಗೆ ತಲುಪಿಸಬೇಕು’ ಎಂದು ಪ್ರಕಾಶಕರು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರಿಗೆ ಮನವಿ ಮಾಡಿಕೊಂಡಿದ್ದಾರೆ. 

ಇಲಾಖೆಯ ನೂತನ ನಿರ್ದೇಶಕರಾದ ಎಂ. ಕನಗವಲ್ಲಿ ಅವರನ್ನು ಕರ್ನಾಟಕ ಪ್ರಕಾಶಕರ ಸಂಘದ ನೇತೃತ್ವದಲ್ಲಿ ಪ್ರಕಾಶಕರು ನಗರದಲ್ಲಿ ಶುಕ್ರವಾರ ಭೇಟಿ ಮಾಡಿ, ಶುಭಹಾರೈಸಿದರು. ಈ ವೇಳೆ ಪುಸ್ತಕೋದ್ಯಮದ ವಿವಿಧ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದು, ಬಗೆಹರಿಸುವಂತೆ ಮನವಿ ಮಾಡಿಕೊಂಡರು. 

‘ಇಲಾಖೆಯ ಏಕಗವಾಕ್ಷಿ ಯೋಜನೆಯಡಿ 2021ರ ಪುಸ್ತಕ ಆಯ್ಕೆ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಕೂಡಲೇ ಪಟ್ಟಿ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಯೋಜನೆಯಡಿ 2020ರ ಪುಸ್ತಕ ಖರೀದಿ ಪ್ರಕ್ರಿಯೆ ಮುಗಿದಿದ್ದು, ಈಗಾಗಲೇ ಅರ್ಧದಷ್ಟು ಹಣ ಪಾವತಿಸಲಾಗಿದೆ. ಬಾಕಿ ಇರುವ ಬಿಲ್ ಪಾವತಿಗೆ ಕ್ರಮಕೈಗೊಳ್ಳಬೇಕು’ ಎಂದು ಪ್ರಕಾಶಕರು ವಿನಂತಿಸಿಕೊಂಡರು.

‘ಗ್ರಂಥಾಲಯ ಇಲಾಖೆಯ ಹಲವು ಚಟುವಟಿಕೆಗಳು ವರ್ಷಾಂತ್ಯದವರೆಗೂ ನಡೆಯದೆ, ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಮಾತ್ರ ನಡೆಯುತ್ತಿರುವುದಕ್ಕೆ ಬಜೆಟ್ ಅನುಮೋದನೆಗೊಳ್ಳದಿರುವುದು ಕಾರಣ. ಗ್ರಂಥಾಲಯ ಅಧಿನಿಯಮದ ಪ್ರಕಾರ ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ಎಲ್ಲ ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯಗಳ ಬಜೆಟ್ ಅನುಮೋದನೆಗೆ ಕ್ರಮ ಕೈಗೊಳ್ಳಬೇಕು’ ಎಂದರು.

‘ಪುಸ್ತಕಗಳ ಪುಟವಾರು ಬೆಲೆ ನಿಗದಿ ಮಾಡಿ ಏಳು ವರ್ಷಗಳಾಗಿದ್ದು, ಕಾಗದ ಮತ್ತು ಮುದ್ರಣ ವೆಚ್ಚ ಈಗ ದುಪ್ಪಟ್ಟಾಗಿದೆ. ಹೀಗಾಗಿ, ಬೆಲೆ ಪರಿಷ್ಕರಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿಕೊಂಡರು.

ಪುಸ್ತಕ ಖರೀದಿ ಯೋಜನೆಯಲ್ಲಿ ಆಗಿರುವ ಲೋಪ ದೋಷಗಳನ್ನು ಸರಿಪಡಿಸುವ ಭರವಸೆಯನ್ನು ಕನಗವಲ್ಲಿ ನೀಡಿದರು. ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ, ಕಾರ್ಯದರ್ಶಿ ಅಭಿನವ ರವಿಕುಮಾರ್, ಜಂಟಿ ಕಾರ್ಯದರ್ಶಿ ಸೃಷ್ಟಿ ನಾಗೇಶ್ ಮತ್ತು ನವ ಕರ್ನಾಟಕದ ಜನಾರ್ದನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT