ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಮಧ್ಯೆ ‘ಏರೊ ಇಂಡಿಯಾ 2021’ ಕುತೂಹಲ

ವೈಮಾನಿಕ ಶಕ್ತಿ ಪ್ರದರ್ಶನದ 13ನೇ ಆವೃತ್ತಿಗೆ ಕ್ಷಣನಗಣನೆ
Last Updated 2 ಫೆಬ್ರುವರಿ 2021, 18:37 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಭಟಿಸುತ್ತಾ ಶರವೇಗದಲ್ಲಿ ಸಾಗಿಬಂದು ಮುಗಿಲೆತ್ತರಕ್ಕೇರಿ ಕಣ್ಣಳತೆಯಿಂದ ಮರೆಯಾಗುವ ಯುದ್ಧವಿಮಾನಗಳು, ನೀಲಿಯ ಬಾನಲಿ ಓಲಾಡಿ–ತೇಲಾಡಿ ಸಾಗುತ್ತಾ, ವ್ಯೋಮದಲ್ಲಿ ಧೂಮದ ಚಿತ್ತಾರ ಬಿಡಿಸುತ್ತಾ ಪುಳಕಗೊಳಿಸುವ ಲೋಹದ ಹಕ್ಕಿಗಳು... ಒಂದೇ, ಎರಡೇ... ಇಂತಹ ಹತ್ತಾರು ರೋಮಾಂಚನಕಾರಿ ಅನುಭವಗಳ ಮೂಟೆ ಹೊತ್ತು ತಂದಿದೆ ‘ಏರೊ ಇಂಡಿಯಾ 2021’ ವೈಮಾನಿಕ ಪ್ರದರ್ಶನ.

ಯಲಹಂಕದ ವಾಯುನೆಲೆಯಲ್ಲಿ ಏರ್ಪಡಿಸಲಾಗಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನದ 13ನ ಆವೃತ್ತಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಬುಧವಾರ ಬೆಳಿಗ್ಗೆ 9.30ಕ್ಕೆ ಚಾಲನೆ ನೀಡಲಿದ್ದಾರೆ. ಕೋವಿಡ್‌ ಕಾಣಿಸಿಕೊಂಡ ಬಳಿಕ ನಡೆಯುತ್ತಿರುವಜಗತ್ತಿನಲ್ಲಿ ಮೊದಲ ವೈಮಾನಿಕ ಪ್ರದರ್ಶನವಿದು.

2019ರಲ್ಲಿ ಐದು ದಿನ ನಡೆದಿದ್ದ ಪ್ರದರ್ಶನ ಈ ಬಾರಿ ಮೂರು ದಿನಗಳಿಗೆ (ಫೆ.5ರವರೆಗೆ) ಸೀಮಿತ. ಭಾರತ ಹೊರತುಪಡಿಸಿದರೆ ಅಮೆರಿಕ ಮತ್ತು ಉಕ್ರೇನ್‌ನ ವಿಮಾನಗಳು ಮಾತ್ರ ಕಸರತ್ತುಗಳ ಪ್ರದರ್ಶನದಲ್ಲಿ ಭಾಗವಹಿಸಲಿವೆ.

ವಾಯುಪಡೆಯ ‘ಸೂರ್ಯಕಿರಣ್‌’ ಹಾಗೂ ‘ಸಾರಂಗ್‌’ ತಂಡಗಳು ಜಂಟಿ ಪ್ರದರ್ಶನ ನೀಡಲಿರುವುದು ಹಾಗೂ ಅಮೆರಿಕದ ಬಿ 1ಐಬಿ ಲ್ಯಾನ್ಸರ್‌ ಸೂಪರ್‌ಸಾನಿಕ್‌ ಬಾಂಬರ್‌ ವಿಮಾನ ಈ ಬಾರಿಯ ಪ್ರಮುಖ ಆಕರ್ಷಣೆಗಳು.

ಭಾರತೀಯ ವಾಯುಪಡೆಗೆ ಕಳೆದ ವರ್ಷ ಸೇರ್ಪಡೆಯಾದ ರಫೇಲ್‌, ದೇಸೀಯವಾಗಿ ಅಭಿವೃದ್ಧಿಪಡಿಸಿದ ತೇಜಸ್‌ ಹಾಗೂ ಸುಖೋಯ್‌–30 ವಿಮಾನಗಳ ಮೈನವಿರೇಳಿಸುವ ಕಸರತ್ತುಗಳು ಈ ಬಾರಿಯೂ ಮುಂದುವರಿಯಲಿವೆ. ಸಂಪೂರ್ಣ ದೇಸಿಯಾಗಿ ಅಭಿವೃದ್ಧಿ ಪಡಿಸಲಾದ ವಿಮಾನಗಳ ವಿಶೇಷ ಪ್ರದರ್ಶನದಲ್ಲಿ ಎಚ್‌ಎಎಲ್‌ ನಿರ್ಮಿಸಿರುವ ಸುಖೊಯ್‌ ಎಸ್‌ಯು–3ಒ ಎಂಕೆಐ, ಸುಧಾರಿತ ಲಘು ಹೆಲಿಕಾಪ್ಟರ್‌ (ಎಎಲ್‌ಎಚ್‌) ಧ್ರುವ, ಲಘು ಯುದ್ಧ ಹೆಲಿಕಾಪ್ಟರ್‌ಗಳು ಲಘು ಹೆಲಿಕಾಪ್ಟರ್‌ಗಳು (ಎಲ್‌ಯುಎಚ್‌) ಭಾಗವಹಿಸಲಿವೆ. ವಾಯುಜನ್ಯ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ (ಎಇಡಬ್ಲ್ಯು ಆ್ಯಂಡ್ ಸಿ) ವ್ಯವಸ್ಥೆ ಅಳವಡಿಸಿರುವ ವಿಮಾನ, ಡಕೋಟಾ ಎಕ್ಸ್‌ಪ್ರೆಸ್‌ಗಳೂ ಪ್ರದರ್ಶನದಲ್ಲಿ ಭಾಗವಹಿಸಲಿವೆ. 63 ವಿಮಾನಗಳ ಸ್ಥಿರ ಪ್ರದರ್ಶನವಿರಲಿದೆ.

ಇಂಡಿಯಾ ಪೆವಿಲಿಯನ್‌ ಪ್ರದರ್ಶನ ಮಳಿಗೆ ದೇಶದ ರಕ್ಷಣಾ ಪರಿಕರಗಳ ಉತ್ಪಾದನಾ ಸಾಮರ್ಥ್ಯವನ್ನು ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಪ್ರಗತಿಯನ್ನು ಜಗದೆದುರು ತೆರೆದಿಡಲಿದೆ. 2019ರಲ್ಲಿ 165 ವಿದೇಶಿ ಪ್ರದರ್ಶಕರು ಭಾಗವಹಿಸಿದ್ದು. ಅವರ ಸಂಖ್ಯೆ ಈ ಬಾರಿ 78ಕ್ಕೆ ಇಳಿಕೆಯಾಗಿದೆ.

ಹಿಂದೂ ಮಹಾಸಾಗರ ಪ್ರದೇಶದ ದೇಶಗಳ ರಕ್ಷಣಾ ಸಚಿವರ ಸಮ್ಮೇಳನ ಈ ಬಾರಿಯ ಇನ್ನೊಂದು ಪ್ರಮುಖ ಆಕರ್ಷಣೆ. 27 ರಾಷ್ಟ್ರಗಳು ಇದರಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿವೆ. ಕೆಲವರು ವರ್ಚುವಲ್‌ ರೂಪದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

-0-

‘ವಿಶ್ವದ ಮೊದಲ ಹೈಬ್ರಿಡ್‌ ಪ್ರದರ್ಶನ’

ಕೋವಿಡ್‌ ಹರಡುತ್ತಿರುವುದರಿಂದ ವೈಮಾನಿಕ ಪ್ರದರ್ಶನಕ್ಕೆ ಹೈಬ್ರೀಡ್‌ ಮಾದರಿ ಅನುಸರಿಸಲಾಗಿದೆ. ಪ್ರದರ್ಶನವು ಭೌತಿಕವಾಗಿ ಮತ್ತು ವರ್ಚುವಲ್‌ ಆಗಿಯೂ ನಡೆಯುತ್ತದೆ. ವ್ಯಾವಹಾರಿಕ ಚಟುವಟಿಕೆಗಳನ್ನೂ ವರ್ಚುವಲ್ ರೂಪದಲ್ಲಿ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ಪ್ರದರ್ಶನವೊಂದು ಈ ಮಾದರಿಯಲ್ಲಿ ನಡೆಯುತ್ತಿರುವುದು ವಿಶ್ವದಲ್ಲಿ ಇದೇ ಮೊದಲು. ಈ ಬಾರಿ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಒಟ್ಟು 2,200 ಒಪ್ಪಂದಗಳು ನಡೆಯುವ ನಿರೀಕ್ಷೆ ಇದೆ.

ಉಚಿತ ವೀಕ್ಷಣೆ

‘ಏರೊ ಇಂಡಿಯಾ 2021’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ನೋಂದಣಿ ಮಾಡಿಕೊಂಡವರು ಉಚಿತವಾಗಿ ಪ್ರದರ್ಶನವನ್ನು ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT