ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನಾತನ ಧರ್ಮ ಗೊತ್ತಿಲ್ಲ, ಸಂತಾನ ಧರ್ಮ ಗೊತ್ತು: ಸಾಹಿತಿ ಜಿ. ರಾಮಕೃಷ್ಣ

ನಾಸ್ತಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಹಿತಿ ಜಿ. ರಾಮಕೃಷ್ಣ ಹೇಳಿಕೆ
Published 17 ಸೆಪ್ಟೆಂಬರ್ 2023, 14:13 IST
Last Updated 17 ಸೆಪ್ಟೆಂಬರ್ 2023, 14:13 IST
ಅಕ್ಷರ ಗಾತ್ರ

ಬೆಂಗಳೂರು: ‘ನಮಗೆ ಸನಾತನ ಧರ್ಮ ಅಂದರೆ ಏನು ಅನ್ನುವುದು ಗೊತ್ತಿಲ್ಲ. ಸಂತಾನ ಧರ್ಮ ಮಾತ್ರ ಗೊತ್ತಿದೆ’ ಎಂದು ಸಾಹಿತಿ ಜಿ. ರಾಮಕೃಷ್ಣ ಹೇಳಿದರು. 

ಮಿದುಳತ್ವ ಸಂಸ್ಥೆ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ನಾಸ್ತಿಕ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. 

‘ಸನಾತನ ಧರ್ಮ ಅಂದರೆ ಏನು ಅನ್ನುವುದನ್ನು ಹೇಳುತ್ತಿಲ್ಲ. ಬದಲಾಗಿ ಸನಾತನ ಧರ್ಮ ಹೀಯಾಳಿಸುವವರ ಕೈ, ನಾಲಿಗೆ ಕತ್ತರಿಸುವುದಾಗಿ ಹೇಳಲಾಗುತ್ತಿದೆ. ನಮ್ಮಲ್ಲಿ ಆಗುತ್ತಿರುವ ಚರ್ಚೆಗಳು ಅವೈಜ್ಞಾನಿಕ, ಅರ್ಥರಹಿತವಾಗಿವೆ ಎನ್ನುವುದಕ್ಕೆ ಇದೇ ಸಾಕ್ಷಿ. ಯಾವುದನ್ನು ಆಯುಧವಾಗಿ ಬಳಸಿಕೊಂಡು ಬರಲಾಗಿದೆಯೋ ಅದನ್ನು ಪ್ರಶ್ನೆ ಮಾಡುವುದೇ ವೈಚಾರಿಕತೆ. ಪುರಾವೆ ಇಲ್ಲದೆಯೇ ಜ್ಞಾನ ಇದೆ ಎಂದು ಮೆರೆಯುತ್ತಾ ಹೋಗುವುದು ಖಂಡನೀಯ’ ಎಂದು ಹೇಳಿದರು. ‌

‘ನಾಸ್ತಿಕನಾದರೂ ದೇವಾಲಯಗಳಿಗೆ ಹೋಗುವುದರಲ್ಲಿ ತಪ್ಪಿಲ್ಲ. ನಮ್ಮ ದೇಶದವರು, ನಮ್ಮ ಕೆಲಸಗಾರರು ಕೆತ್ತಿದ ಶಿಲ್ಪಕಲೆಗಳನ್ನು ನೋಡಲು ದೇವಾಲಯಗಳಿಗೆ ಹೋಗಬೇಕು. ನನ್ನಷ್ಟು ದೇವಸ್ಥಾನಗಳನ್ನು ಯಾರೂ ನೋಡಿಲ್ಲ. ಬದ್ರಿ, ಕೈಲಾಸ ಎಲ್ಲೆಡೆ ಹೋಗಿದ್ದೇನೆ. ನಾವು ಯಾವ ಕಾರಣಕ್ಕೆ ಹೋಗುತ್ತೇವೆ ಅನ್ನುವುದು ಮುಖ್ಯ. ನಮ್ಮ ಮನೆಗಳಲ್ಲಿಯೇ ಆಸ್ತಿಕರು ಇರುತ್ತಾರೆ. ಸಾಧ್ಯವಾದರೆ ಅವರೊಂದಿಗೆ ಚರ್ಚಿಸಿ, ಅಭಿಪ್ರಾಯಗಳನ್ನು ಬದಲಾಯಿಸಬೇಕು. ಆದರೆ, ಅವರಿಂದ ದೂರವಾಗಬಾರದು’ ಎಂದು ತಿಳಿಸಿದರು. 

ಸ್ತ್ರೀವಾದಿ ಚಿಂತಕಿ ಎನ್. ಗಾಯತ್ರಿ, ‘ಈ ಸಮಾಜವು ಸ್ತ್ರೀ–ಪುರುಷರ ಗುಣಗಳನ್ನು ವರ್ಗೀಕರಣ ಮಾಡಿ, ಪುರುಷರ ಗುಣ ಶ್ರೇಷ್ಠ, ಸ್ತ್ರೀಯರ ಗುಣ ಕನಿಷ್ಠವೆಂದು ತೀರ್ಮಾನಿಸಿದೆ. ಹೆಣ್ಣನ್ನು ದೇವರ ಜತೆಗೆ ದಬ್ಬಲಾಗಿದೆ. ಇದರಿಂದಾಗಿ ನಾಸ್ತಿಕ ಹೆಣ್ಣುಮಕ್ಕಳು ಸಹ ಮನೆ ಮಂದಿಯನ್ನು ಮೆಚ್ಚಿಸಲು ಪೂಜೆಗಳನ್ನು ಮಾಡಬೇಕಾಗಿದೆ. ಮಹಿಳೆಯರ ಸುತ್ತ ಮೂಢನಂಬಿಕೆಗಳಿದ್ದು, ಅವರೇ ಅವುಗಳ ಪೋಷಕರು ಹಾಗೂ ಪ್ರಚಾರಕರಾಗಿದ್ದಾರೆ. ನಮ್ಮ ಸಮಾಜ ಸಿದ್ಧ ಮಾದರಿ ಹಾಕಿಕೊಟ್ಟಿದೆ. ಇದನ್ನು ಒಡೆಯುವುದೇ ಸ್ತ್ರೀವಾದ’ ಎಂದರು. 

ಸಮಕಾಲೀನ ಸಾಂಸ್ಕೃತಿಕ ವೇದಿಕೆಯ ಬಿ.ಆರ್. ಮಂಜುನಾಥ್, ‘ವೈಚಾರಿಕ ಮನೋಭಾವವನ್ನು ಜಾಗೃತವಾಗಿ ಇಟ್ಟುಕೊಂಡವರಿಗೆ ಜೀವ ಬೆದರಿಕೆಗಳು ಬರುತ್ತಿವೆ. ಕೋಮುವಾದ, ಹಿಂದುತ್ವದ ಸವಾಲನ್ನು ಎದುರಿಸಬೇಕಾದರೆ ಈಗಿನ ತಲೆಮಾರಿನವರಲ್ಲಿ ಪ್ರಶ್ನಿಸುವ ಮನೋಭಾವ ಬೇರೂರಬೇಕು. ಪರಪ್ಪನ ಅಗ್ರಹಾರದಲ್ಲಿರುವ ಅಪರಾಧಿಗಳೆಲ್ಲ ಆಸ್ತಿಕರೇ ಆಗಿದ್ದಾರೆ’ ಎಂದು ಹೇಳಿದರು. 

ಜಯನಗರದ ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ನಗರಗೆರೆ ರಮೇಶ್, ‘ನಾನು ದೇವರನ್ನು ಬೈಯುವುದಿಲ್ಲ. ಒಂದು ವೇಳೆ ದೇವರಿಗೆ ಬೈದರೆ ಅವನು ಇದ್ದಾನೆ ಎಂದು ಒಪ್ಪಿಕೊಂಡಂತಾಗುತ್ತದೆ. ನಾನು ನಾಸ್ತಿಕನಾದರೂ ದೇವರ ಸ್ತುತಿಗಳನ್ನು ಕೇಳಿ, ಅಲ್ಲಿನ ಸಂಗೀತ ಆಸ್ವಾದಿಸುತ್ತೇನೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT