ಬೆಂಗಳೂರು: ಕಲಾಸಿಪಾಳ್ಯ ಸಮೀಪದ ಬ್ಯಾಂಕ್‌ವೊಂದರ ಬಳಿ ಎಟಿಎಂ ಖಾಲಿ ಬಾಕ್ಸ್‌ಗಳು ಪತ್ತೆಯಾಗಿದ್ದರಿಂದ, ಸ್ಥಳದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳಕ್ಕೆ ಬಂದಿದ್ದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿದ ನಂತರ ಜನರು ನಿಟ್ಟುಸಿರು ಬಿಟ್ಟರು.
‘ಎಟಿಎಂ ಯಂತ್ರದೊಳಗೆ ಇರಿಸುವ ನಗದು ಬಾಕ್ಸ್‌ಗಳನ್ನು ಯಾರೋ ರಸ್ತೆ ಪಕ್ಕದಲ್ಲಿ ಎಸೆದಿದ್ದರು. ಗುಜರಿ ಆಯುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಬಾಕ್ಸ್‌ಗಳನ್ನು ನೋಡಿದ್ದರು. ಅವುಗಳನ್ನು ಎತ್ತಿಕೊಂಡು ಬಂದು ಗುಜರಿ ಅಂಗಡಿಯವರಿಗೆ ನೀಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಬಾಕ್ಸ್ ಖರೀದಿಸಲು ಗುಜರಿ ಅಂಗಡಿ ಮಾಲೀಕ ನಿರಾಕರಿಸಿದ್ದರು. ಅವಾಗಲೇ ಆ ವ್ಯಕ್ತಿ, ಎಟಿಎಂ ನಗದು ಬಾಕ್ಸ್‌ಗಳನ್ನು ಕಲಾಸಿಪಾಳ್ಯ ಬಳಿ ಎಸೆದು ಹೋಗಿದ್ದಾರೆ. ಈ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ಆ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ’ ಎಂದು ತಿಳಿಸಿವೆ.
‘ಬಾಕ್ಸ್ ನೋಡಿದ್ದ ಸ್ಥಳೀಯರು, ಅನುಮಾನಾಸ್ಪದ ವಸ್ತು ಬಿದ್ದಿರುವುದಾಗಿ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ, ಖಾಲಿ ಬಾಕ್ಸ್‌ಗಳು ಪತ್ತೆಯಾದವು. ಇವು ಯಾವ ಬ್ಯಾಂಕ್‌ಗೆ ಸೇರಿದ್ದ ಬಾಕ್ಸ್‌ಗಳು ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಹೇಳಿವೆ.