ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂ ಕಾರ್ಡ್‌ ಬದಲಿಸಿ ₹ 37 ಸಾವಿರಕ್ಕೆ ಕನ್ನ!

Last Updated 8 ಜುಲೈ 2019, 20:25 IST
ಅಕ್ಷರ ಗಾತ್ರ

ಬೆಂಗಳೂರು: ಎಟಿಎಂನಿಂದ ಹಣ ತೆಗೆಯಲು ಗೊತ್ತಿಲ್ಲದ ಮಹಿಳೆಯೊಬ್ಬರನ್ನು ನಂಬಿಸಿ, ಎಟಿಎಂ ಕಾರ್ಡ್‌ನ್ನೇ ಅದಲುಬದಲು ಮಾಡಿ ₹ 37 ಸಾವಿರ ಎಗರಿಸಿದ ಘಟನೆ ಮೆಜೆಸ್ಟಿಕ್‌ನಲ್ಲಿರುವ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ನಡೆದಿದೆ.

ದಾಸರಹಳ್ಳಿ ನಿವಾಸಿ ಉಮಾದೇವಿ ಹಣ ಕಳೆದುಕೊಂಡವರು. ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ಶನಿವಾರ ಮಧ್ಯಾಹ್ನ 1.45ಕ್ಕೆ ತೆರಳಿದ್ದ ಉಮಾದೇವಿ, ಹಣ ತೆಗೆಯಲು ಗೊತ್ತಿಲ್ಲದ ಕಾರಣಕ್ಕೆ ಅಲ್ಲೇ ಇದ್ದ ವ್ಯಕ್ತಿಯೊಬ್ಬನಿಗೆ ಎಟಿಎಂ ಕಾರ್ಡ್‌ ಕೊಟ್ಟು ₹ 2 ಸಾವಿರ ತೆಗೆದುಕೊಡುವಂತೆ ತಿಳಿಸಿದ್ದರು.

ಆ ವ್ಯಕ್ತಿ, ಎಟಿಎಂ ಕೇಂದ್ರದಲ್ಲಿ ವ್ಯವಹರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಇರುವುದರಿಂದ ಪಕ್ಕದಲ್ಲಿದ್ದ ಕರ್ನಾಟಕ ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ಉಮಾದೇವಿ ಅವರನ್ನು ಕರೆದುಕೊಂಡು ಹೋಗಿದ್ದ. ಅಲ್ಲಿ ಎಟಿಎಂ ಕಾರ್ಡ್‌ ಪಡೆದುಕೊಂಡು, ಹಣ ತೆಗೆದುಕೊಡುವುದಾಗಿ ನಂಬಿಸಿ ಪಿನ್‌ ನಂಬರ್‌ ಪಡೆದುಕೊಂಡ ಆ ವ್ಯಕ್ತಿ, ಹಣ ತೆಗೆಯುವಂತೆ ನಟಿಸಿದ್ದ. ಆದರೆ, ಹಣದ ಬದಲು ಬ್ಯಾಲೆನ್ಸ್ ಸ್ಲಿಪ್‌ ಸಹಿತ ಎಸ್‌ಬಿಐ ಬ್ಯಾಂಕಿನ ಎಟಿಎಂ ಕಾರ್ಡ್‌ ಕೊಟ್ಟು, ‘ಹಣ ಬರಲಿದೆ. ಸ್ವಲ್ಪ ಕಾಯುವಂತೆ’ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದ್ದ.

ಆದರೆ, ಕೆಲಹೊತ್ತಿನ ಬಳಿಕ ಕಾರ್ಡ್‌ ಬದಲಾಗಿರುವುದು ಗೊತ್ತಾಗುತ್ತಲೇ ಉಮಾದೇವಿ ಅವರು ಬಸವೇಶ್ವರ ನಗರದಲ್ಲಿರುವ ಕೆನರಾ ಬ್ಯಾಂಕಿನ ವ್ಯವಸ್ಥಾಪಕರಿಗೆ ಕರೆ ಮಾಡಿ ಕಾರ್ಡ್‌ ಸ್ಥಗಿತಗೊಳಿಸುವಂತೆ ತಿಳಿಸಿದ್ದರು. ಅಷ್ಟೇ ಅಲ್ಲ, ಖಾತೆಯಲ್ಲಿರುವ ಹಣದ ಬಗ್ಗೆಯೂ ವಿಚಾರಿಸಿದ್ದರು.

ಆದರೆ, ಮಧ್ಯಾಹ್ನ 2.22ರ ಸುಮಾರಿಗೆ ಸುದರ್ಶನ ಲಾಡ್ಜ್‌ನ ಬಳಿಯ ಎಸ್‌ಬಿಐ ಎಟಿಎಂ ಕೇಂದ್ರದಲ್ಲಿ ಉಮಾದೇವಿ ಅವರ ಕೆನರಾ ಬ್ಯಾಂಕಿನ ಕಾರ್ಡ್‌ ಬಳಸಿ ₹ 37 ಸಾವಿರ ಹಣ ತೆಗೆದಿರುವುದು ಗೊತ್ತಾಗಿದೆ.

ಈ ಕುರಿತಂತೆ,ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಉಮಾದೇವಿ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT