ಶುಕ್ರವಾರ, ಜನವರಿ 22, 2021
27 °C

ಎಟಿಎಂ ಯಂತ್ರ ಕತ್ತರಿಸಿ ₹ 23.55 ಲಕ್ಷ ದೋಚಿದ ಕಳ್ಳರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿರುವ ಕೆನರಾ ಬ್ಯಾಂಕ್‌ನ ಎಟಿಎಂ ಘಟಕವೊಂದಕ್ಕೆ ಕನ್ನ ಹಾಕಿರುವ ದುಷ್ಕರ್ಮಿಗಳು, ₹ 23.55 ಲಕ್ಷ ಕದ್ದೊಯ್ದಿದ್ದಾರೆ.

ಈ ಸಂಬಂಧ ಎಫ್‌ಎಸ್‌ಎಸ್ ಕಂಪನಿ ಪ್ರತಿನಿಧಿ ಕೆ. ವೇಣು ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

‘ನಾಗನಾಥಪುರ ಹೊಸ ರಸ್ತೆಯಲ್ಲಿರುವ ಎಟಿಎಂ ಘಟಕದ ಭದ್ರತೆ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ಎಫ್‌ಎಸ್‌ಎಸ್‌ ಕಂಪನಿಗೆ ವಹಿಸಲಾಗಿದೆ. ಇದೇ ಘಟಕಕ್ಕೆ ಡಿ. 28ರ ತಡರಾತ್ರಿ ನುಗ್ಗಿದ್ದ ದುಷ್ಕರ್ಮಿಗಳು ಗ್ಯಾಸ್‌ ಕಟರ್‌ನಿಂದ ಯಂತ್ರ ಕತ್ತರಿಸಿ, ಯಂತ್ರದಲ್ಲಿದ್ದ ಹಣವನ್ನೆಲ್ಲ ದೋಚಿ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಡಿ. 30ರಂದು ಬೆಳಿಗ್ಗೆ ಎಫ್‌ಎಸ್‌ಎಸ್ ಕಂಪನಿ ಸಿಬ್ಬಂದಿ ಘಟಕಕ್ಕೆ ಬಂದಿದ್ದರು. ಘಟಕದ ಶಟರ್ ಅರ್ಧಕ್ಕೆ ಮುಚ್ಚಿತ್ತು. ಅನುಮಾನಗೊಂಡ ಸಿಬ್ಬಂದಿ ಶಟರ್ ತೆರೆದು ನೋಡಿದಾಗ ವಿಷಯ ಗೊತ್ತಾಗಿದೆ. ನಂತರ ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ತಿಳಿಸಿದರು.

ಭದ್ರತಾ ವೈಫಲ್ಯ: ‘ಎಟಿಎಂ ಘಟಕದಲ್ಲಿ ಯಾವುದೇ ಭದ್ರತೆ ಇರಲಿಲ್ಲ. ಸಿಸಿಟಿವಿ ಕ್ಯಾಮೆರಾ ಹಾಗೂ ಸೈರನ್‌ ಕೂಡ ಕೆಲಸ ಮಾಡುತ್ತಿರಲಿಲ್ಲ. ಈ ನಿರ್ಲಕ್ಷ್ಯವೇ ಕಳ್ಳರಿಗೆ ಅನುಕೂಲ ಮಾಡಿಕೊಟ್ಟಿದೆ. ಈ  ಬಗ್ಗೆ ಗೂತ್ತಿರುವವರೇ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಸುತ್ತಮುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಕಂಪನಿ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು