ಬುಧವಾರ, ಸೆಪ್ಟೆಂಬರ್ 22, 2021
29 °C

ಫೀನಿಕ್ಸ್ ರಿಕ್ರಿಯೇಷನ್ ಕ್ಲಬ್‌ ಮೇಲೆ ದಾಳಿ; ಕಟ್ಟಡದಿಂದ ಹಣ ಎಸೆದ ಆರೋಪಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಂದಿರಾನಗರದ ಫೀನಿಕ್ಸ್ ರಿಕ್ರಿಯೇಷನ್ ಕ್ಲಬ್‌ ಮೇಲೆ ಪೊಲೀಸರು ದಿಢೀರ್ ದಾಳಿ ಮಾಡಿದ್ದು, ಕೆಲ ಆರೋಪಿಗಳು ಕಟ್ಟಡದಿಂದ ಹೊರಗೆ ಹಣದ ಕಂತೆಗಳನ್ನು ಎಸೆದು ಪರಾರಿಯಾಗಿದ್ದಾರೆ.

‘ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಿದೆ. ಕೆ.ಟಿ.ರಸ್ತೆಯಲ್ಲಿರುವ ಕ್ಲಬ್‌ನಲ್ಲಿ ಗುಂಪು ಸೇರುತ್ತಿದ್ದ ಜನ, ನಿಯಮ ಉಲ್ಲಂಘಿಸಿದ್ದರು. ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಶನಿವಾರ ದಾಳಿ ಮಾಡಲಾಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

’ಜೂಜಾಟದಲ್ಲಿ ತೊಡಗಿದ್ದ ಆರೋಪದಡಿ 57 ಮಂದಿಯನ್ನು ಬಂಧಿಸಲಾಗಿದೆ. ₹ 2.34 ಲಕ್ಷ ನಗದು ಹಾಗೂ 3 ಸ್ವೈಪಿಂಗ್ ಉಪಕರಣ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.

‘ವ್ಯವಸ್ಥಿತವಾಗಿ ಜೂಜು ಆಡಿಸುತ್ತಿದ್ದ ಆರೋಪಿಗಳು, ಸ್ವೈಪಿಂಗ್ ಉಪಕರಣದ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಈ ಕೃತ್ಯ ಹಲವು ದಿನಗಳಿಂದ ನಡೆಯುತ್ತಿದ್ದ ಬಗ್ಗೆ ಮಾಹಿತಿ ಇದೆ’ ಎಂದೂ ತಿಳಿಸಿದರು.

ವಿಡಿಯೊ ಸೆರೆ: ಪೊಲೀಸರ ದಾಳಿ ನಡೆಯುತ್ತಿದ್ದಂತೆ ಕೆಲ ಆರೋಪಿಗಳು ಕ್ಲಬ್‌ನ ಬಹುಮಹಡಿ ಕಟ್ಟಡದಿಂದ ಪೈಪ್ ಮೂಲಕ ಇಳಿದು ಪರಾರಿಯಾಗಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಪ್ರಮುಖ ಆರೋಪಿ ಎನ್ನಲಾದ ವ್ಯಕ್ತಿ ಕಟ್ಟಡದಿಂದ ಮೊದಲಿಗೆ ಹೊರಗೆ ಬಂದಿದ್ದ. ಕಟ್ಟಡದ ಮಹಡಿ ಹಾಗೂ ಕಿಟಕಿ ಬಳಿ ನಿಂತಿದ್ದ ಕೆಲವರು, ಹಣದ ಕಂತೆಗಳನ್ನು ಆತನಿಗೆ ಎಸೆದಿದ್ದರು. ಹಣದ ಕಂತೆಗಳ ಸಮೇತ ಆರೋಪಿ ಪರಾರಿಯಾಗಿದ್ದಾನೆ. ನಂತರ, ಉಳಿದ ಆರೋಪಿಗಳು ಕಟ್ಟಡದಿಂದ ಇಳಿದು ಓಡಿಹೋಗಿದ್ದಾರೆ. ಈ ದೃಶ್ಯ ವಿಡಿಯೊದಲ್ಲಿದೆ.

ಪೊಲೀಸರ ವೈಫಲ್ಯ: ಸ್ಥಳೀಯರ ಆರೋಪ

‘ದಾಳಿ ನಡೆದಾಗಲೇ ಆರೋಪಿಗಳು ಕಟ್ಟಡದಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಇದಕ್ಕೆ ಪೊಲೀಸರ ವೈಫಲ್ಯ ಕಾರಣ. ತಪ್ಪಿತಸ್ಥ ಪೊಲೀಸರ ವಿರುದ್ಧ ಕಮಿಷನರ್ ಅವರು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು