ಮಂಗಳವಾರ, ಅಕ್ಟೋಬರ್ 19, 2021
22 °C

ಕುಂದುಕೊರತೆ-ಜನದನಿ: ಬಡಾವಣೆಗೆ ನೀರು ನುಗ್ಗದಂತೆ ತಡೆಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಳೆಯಿಂದ ವೃಷಭಾವತಿ ನದಿ ಹರಿವಿನ ತಡೆಗೋಡೆಗಳು ಒಡೆದು, ನಾಯಂಡಹಳ್ಳಿ ಪಕ್ಕದ ಪ್ರಮೋದ್ ಬಡಾವಣೆಯ ಮನೆಗಳಿಗೆ ನೀರು ನುಗ್ಗುತ್ತದೆ. ಮಳೆ ಬಂದಾಗ ಇಲ್ಲಿನ ನಿವಾಸಿಗಳು ಅಭದ್ರತೆ ಎದುರಿಸುತ್ತಾರೆ. ಮನೆಗಳಲ್ಲಿನ ಟಿವಿ, ಫ್ರಿಡ್ಜ್, ಕಂಪ್ಯೂಟರ್ ಸೇರಿದಂತೆ ಅನೇಕ ಬೆಲೆ ಬಾಳುವ ವಸ್ತುಗಳಿಗೆ ಹಾನಿಯಾಗುತ್ತದೆ.

ಇಷ್ಟೆಲ್ಲ ನಡೆದರೂ ಇಲ್ಲಿ ಮುಖಂಡರು ಬಡಾವಣೆಯತ್ತ ಮುಖ ಮಾಡುವುದಿಲ್ಲ. ಸಮಸ್ಯೆ ಹೇಳಿಕೊಳ್ಳಲು ತೆರಳಿದರೆ, ನೀವು ಬೇರೆ ಪಕ್ಷಕ್ಕೆ ಮತ ಹಾಕಿದ್ದೀರಿ ಎಂದು ಅದರಲ್ಲೂ ರಾಜಕೀಯದ ಮಾತುಗಳನ್ನಾಡುತ್ತಾರೆ. ಸ್ಥಳೀಯ ಶಾಸಕರು ಬಡಾವಣೆ ಅಭಿವೃದ್ಧಿಗೆ ಯಾವ ಕೆಲಸವನ್ನೂ ಮಾಡುತ್ತಿಲ್ಲ. ಈ ಬಡಾವಣೆಯನ್ನು ಬೇರೆ ಕ್ಷೇತ್ರಕ್ಕಾದರೂ ಸೇರ್ಪಡೆ ಮಾಡಿ. ಅದಕ್ಕೂ ಬಡಾವಣೆಯ ಮನೆಗಳಿಗೆ ಮಳೆ ನೀರು ನುಗ್ಗದಂತೆ ಕ್ರಮ ಜರುಗಿಸಬೇಕು.

- ಚಿಕ್ಕವೀರೇಗೌಡ, ಬಡಾವಣೆ ನಿವಾಸಿ

ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಿ

ಬನಶಂಕರಿ ಎರಡನೇ ಹಂತದ ಕನಕ ಬಡಾವಣೆಯಲ್ಲಿ ಬೇರೆ ಬಡಾವಣೆಗಳ ನಿವಾಸಿಗಳು ಪ್ರತಿದಿನ ವಾಹನಗಳಲ್ಲಿ ಬಂದು ಕಸ ಬಿಸಾಡಿ ಹೋಗುತ್ತಾರೆ. ನನ್ನ ಕಣ್ಣಿಗೆ ಕಂಡವರನ್ನು ದಬಾಯಿಸುತ್ತೇನೆ. ಮರುದಿನ ಬಂದು ನೋಡಿದಾಗ ಅಲ್ಲಿ ಮತ್ತೆ ಕಸದ ರಾಶಿ ಬಿದ್ದಿರುತ್ತದೆ.

ಸಾರ್ವಜನಿಕರು ಸಂಚರಿಸುವ ರಸ್ತೆಯಲ್ಲೇ ಈ ಸ್ಥಿತಿ ಎದುರಾಗಿದೆ. ವಿಲೇವಾರಿಯಾಗದ ಕಸದ ರಾಶಿಯಿಂದ ಈ ರಸ್ತೆಯಲ್ಲಿ ಮೂಗು ಮುಚ್ಚಿ ಸಂಚರಿಸಬೇಕಾಗಿದೆ. ಈಗ ರಸ್ತೆಯವರೆಗೆ ರಾಶಿ ಬೀಳುತ್ತಿದ್ದು, ಇಲ್ಲಿ ಕಸ ಹಾಕದಂತೆ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕಸ ಹಾಕುವವರ ವಿರುದ್ಧ ದಂಡ ವಿಧಿಸಬೇಕು.

- ವಿ.ವಿಜಯೇಂದ್ರ ರಾವ್, ಕನಕ ಬಡಾವಣೆ

ರಸ್ತೆ ವಿಭಜಕಗಳಿಗೆ ಬೇಲಿ ನಿರ್ಮಿಸಿ

ನಗರದ ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ವಿಭಜಕಗಳನ್ನು ನಿರ್ಮಿಸಿರುವುದು ಸ್ವಾಗತಾರ್ಹ. ಆದರೆ, ಪಾದಚಾರಿಗಳು ಕಿರಿದಾದ ವಿಭಜಕಗಳನ್ನು ಹಾರಿ ರಸ್ತೆಗಳನ್ನು ದಾಟುತ್ತಿರುವುದು ಅಪಾಯಕಾರಿ ಬೆಳವಣಿಗೆ. ಕೆಲವು ವಿಭಜಕಗಳಿಗೆ ಈಗಾಗಲೇ ತಂತಿ ಬೇಲಿಗಳನ್ನು ಅಳವಡಿಸಿರುವುದರಿಂದ ಇಂತಹ ಜಾಗಗಳಲ್ಲಿ ಜನರು ವಿಭಜಕ ದಾಟುವುದು ನಿಯಂತ್ರಣಕ್ಕೆ ಬಂದಿದೆ.

ಇದೇ ರೀತಿಯಲ್ಲಿ ವಿಭಜಕಗಳಿಲ್ಲದ ರಸ್ತೆಗಳನ್ನು ಪರಿಶೀಲಿಸಿ, ಅಲ್ಲಿ ತಂತಿ ಬೇಲಿಗಳನ್ನು ಅಡ್ಡಲಾಗಿ ನಿರ್ಮಿಸುವ ಕೆಲಸಕ್ಕೆ ಪಾಲಿಕೆ ಮುಂದಾಗಬೇಕು. ಇದರಿಂದ ಅಪಘಾತಗಳನ್ನು ತಪ್ಪಿಸಬಹುದು ಹಾಗೂ ಜನರ ಪ್ರಾಣ ರಕ್ಷಿಸಬಹುದು.

- ಬಸವರಾಜ ಹುಡೇದಗಡ್ಡಿ, ರಾಜಾಜಿನಗರ

ಬೈರತಿ ರಸ್ತೆಗಳಿಗೆ ಡಾಂಬರು ಭಾಗ್ಯ ಯಾವಾಗ?

ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯಲ್ಲಿರುವ ಬೈರತಿ, ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ ಹಾಗೂ ಹೆಬ್ಬಾಳ ಶಾಸಕ ಬಿ.ಎಸ್‌. ಸುರೇಶ್ ಅವರ ತವರೂರು. ಇಷ್ಟೆಲ್ಲ ರಾಜಕೀಯ ಹಿನ್ನೆಲೆಯುಳ್ಳ ಬೈರತಿ ಗ್ರಾಮವು ಮೂಲಸೌಕರ್ಯಗಳಿಂದ ವಂಚಿತವಾಗಿರುವುದು ಶೋಚನೀಯ.

ಕಾಮಗಾರಿಗಳ ಹೆಸರಲ್ಲಿ ಇಲ್ಲಿನ ರಸ್ತೆಗಳನ್ನೆಲ್ಲ ಅಗೆಯಲಾಗಿದೆ. ಮಳೆಗಾಲದಲ್ಲಿ ರಸ್ತೆಗಳೆಲ್ಲ ಕೆಸರುಮಯ. ವಾಹನಗಳು ಮತ್ತು ಜನರು ಸಂಚರಿಸಲಾಗದ ಸ್ಥಿತಿಗೆ ರಸ್ತೆಗಳು ತಲುಪಿವೆ. ಇದರಿಂದ ಬೈರತಿ ರಸ್ತೆಗಳಿಗೆ ಬರಲು ಆಟೊ ಮತ್ತು ಕ್ಯಾಬ್ ಚಾಲಕರು ಹಿಂದೇಟು ಹಾಕುತ್ತಾರೆ. ವಿದ್ಯಾರ್ಥಿಗಳು, ಹಿರಿಯರು ಹಾಗೂ ಮಕ್ಕಳು ಬಸ್‌ ನಿಲ್ದಾಣದವರೆಗೆ ಈ ಕೆಸರು ರಸ್ತೆಗಳಲ್ಲೇ ನಡೆಯುವುದು ಅನಿವಾರ್ಯವಾಗಿದೆ.

ಬೈರತಿ–ಗೆದ್ದಲಹಳ್ಳಿ ಸಂಪರ್ಕ ರಸ್ತೆಗೆ ಡಾಂಬರು ಹಾಕಿಸಿ, ಎರಡು ತಿಂಗಳೂ ಕಳೆದಿಲ್ಲ. ಕಳಪೆ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಈ ಕುರಿತು ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಲಕ್ಷದಲ್ಲಿ ಇದೂ ಒಂದು ಸಮಸ್ಯೆ ಎಂಬಂತೆ ಪಾಲಿಕೆಯಿಂದ ಸ್ಪಂದನೆ ಸಿಗುವುದಿಲ್ಲ. ಬೈರತಿ ರಸ್ತೆಗಳಿಗೆ ಶೀಘ್ರವಾಗಿ ಡಾಂಬರು ಕಲ್ಪಿಸಿದರೆ, ನಿವಾಸಿಗಳು ನಿಟ್ಟುಸಿರು ಬಿಡುತ್ತಾರೆ.

- ಅಜಯ್ ರಾಜ್, ಬೈರತಿ

ದಂಡ ಕಟ್ಟಲೇಬೇಕೇ?

ನಾನು ಕೃಷ್ಣರಾಜಪುರದ ದೇವಸಂದ್ರದ ಗೋಕುಲ ಬಡಾವಣೆಯಲ್ಲಿ ಮನೆಯೊಂದನ್ನು ಕಟ್ಟಿಕೊಂಡಿದ್ದೇನೆ. ಅಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಜಲಮಂಡಳಿಯವರು ನನ್ನಿಂದ ಒಂದು ವರ್ಷದಿಂದ ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ. ಪ್ರತಿ ತಿಂಗಳು ನೀರಿನ ಬಳಕೆಯ ಶುಲ್ಕದೊಂದಿಗೆ ₹326 ದಂಡ ಕಟ್ಟುತ್ತಿದ್ದೇನೆ.

ಈ ಬಗ್ಗೆ ಕೇಳಿದರೆ,‘ಈಗ ಎಲ್ಲರೂ ದಂಡ ಕಟ್ಟಬೇಕು.. ಬೇಕಾದರೆ ಕಚೇರಿಯಲ್ಲಿ ಕೇಳ್ಕೊಳ್ಳಿ’ ಎಂದು ದಬಾಯಿಸುತ್ತಾರೆ. ಆದರೆ, ಈ ನಿಯಮ ಜಾರಿಗೂ ಮುನ್ನವೇ ಮನೆ ಕಟ್ಟಲಾಗಿದೆ. ಆದರೂ ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ. ದಂಡ ವಸೂಲಾತಿಯ ಬಗ್ಗೆ ಸೂಕ್ತ ಮಾಹಿತಿ ಪ್ರಕಟಿಸಬೇಕು.

- ಲಕ್ಷ್ಮೀನಾರಾಯಣ ರಾವ್, ಗೋಕುಲ ಬಡಾವಣೆ

ಮಳೆಗಾಲದಲ್ಲಿ ಕೆರೆಯಾಗುವ ಅಂಡರ್‌ಪಾಸ್

ಕೊಡಿಗೇಹಳ್ಳಿಯ ರೈಲ್ವೆ ಅಂಡರ್ ಪಾಸ್ ಮಳೆ ಬಂತೆಂದರೆ, ಅಕ್ಷರಶಃ ಸಣ್ಣ ಕೆರೆಯಂತೆ ನೀರಿನಿಂದ ಕೂಡಿರುತ್ತದೆ. ಇದು, ಶಾಸಕ ಕೃಷ್ಣಬೈರೇಗೌಡ ಹಾಗೂ ಸಂಸದ ಸದಾನಂದಗೌಡರ ಕ್ಷೇತ್ರವೂ ಹೌದು. ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ, ತಿಂಡ್ಲು, ಧನಲಕ್ಷ್ಮಿ ಬಡಾವಣೆ, ಬಳ್ಳಾರಿ ರಸ್ತೆ, ಟೆಲಿಕಾಂ ಬಡಾವಣೆ, ಕೆಂಪೇಗೌಡ ನಗರ ಸೇರಿದಂತೆ ವಿವಿಧ ರಸ್ತೆಗಳನ್ನು ಸಂಪರ್ಕಿಸಲು ಈ ಅಂಡರ್‌ಪಾಸ್‌ ಮೂಲಕ ಸಂಚರಿಸಬೇಕು.

ಸಾಮಾನ್ಯ ದಿನಗಳಲ್ಲಿ ವಾಹನ ಸಂಚಾರ ಎಂದಿನಂತೆ ಇರುತ್ತದೆ. ಆದರೆ, ಮಳೆಗಾಲದಲ್ಲಿ ಈ ಅಂಡರ್‌ಪಾಸ್‌ ಇದ್ದೂ ಇಲ್ಲದಂತೆ ಜಲಾವೃತಗೊಳ್ಳುತ್ತದೆ. ಈ ಸಮಸ್ಯೆ ಎದುರಾದಾಗ ಹತ್ತಿರದಲ್ಲೇ ಇರುವ ನಿವಾಸಗಳಿಗೆ ತಲುಪಲು ಸುತ್ತಿಬಳಸಿ ಬೇರೆ ರಸ್ತೆಗಳನ್ನು ಬಳಸಬೇಕಾಗಿದೆ.

ವರ್ಷದಲ್ಲಿ ಆರು ತಿಂಗಳು ಮಾತ್ರ ಬಳಸಲು ಯೋಗ್ಯವಾದ ಈ ಅಂಡರ್‌ಪಾಸ್‌ ನಿರ್ಮಿಸಿರುವುದು ಅವೈಜ್ಞಾನಿಕ. ಪೆಟ್ರೋಲ್ ದರ ಏರಿಕೆ ವಿರುದ್ಧ ಪ್ರತಿಭಟಿಸುವ ಇಲ್ಲಿನ ನಾಯಕರಿಗೆ ಅಂಡರ್‌ಪಾಸ್ ಬಳಸಲಾಗದೆ, ಸುತ್ತಿಕೊಂಡು ಸಂಚರಿಸುವ ಜನರ ಸಮಸ್ಯೆಯ ಅರಿವೂ ಇರಲಿ.

- ಶೀಲಾ ನಟರಾಜ್

ರಾಜಕಾಲುವೆಯಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯಿರಿ

ಮಲ್ಲತ್ತಹಳ್ಳಿ ಸಮೀಪದ ಕೆಂಗುಂಟೆ ಗ್ರಾಮದಲ್ಲಿರುವ ರಾಜಕಾಲುವೆಯಲ್ಲಿ ಹೂಳು ತುಂಬಿಕೊಂಡಿರುವ ಕಾರಣ ಕೊಳಚೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ, ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.

ರಾಜಕಾಲುವೆ ಸಮೀಪದಲ್ಲೇ ಸೂರು ಕಟ್ಟಿಕೊಂಡಿರುವ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರಿಗೂ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಳೆ ಬಿದ್ದರಂತೂ ರಾಜಕಾಲುವೆ ಅಕ್ಕಪಕ್ಕದ ಮನೆಗಳು ಮಳೆ ನೀರಿನಿಂದ ಜಲಾವೃತಗೊಳ್ಳುತ್ತವೆ. ಈ ವೇಳೆ ಹಾವು, ಚೇಳಿನಂತಹ ಜೀವಿಗಳೂ ಪ್ರತ್ಯಕ್ಷವಾಗುತ್ತವೆ. ಇದರಿಂದ ಇಲ್ಲಿನ ಜನ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ.

ಇದೇ ಜಾಗದಲ್ಲಿ ಪಾಲಿಕೆಯವರು ಕಸ ಸುರಿಯುತ್ತಾರೆ. ಚಿಕ್ಕ ಮಕ್ಕಳು, ವೃದ್ಧರು ಸಮೀಪದ ರಸ್ತೆಗಳಲ್ಲಿ ಓಡಾಡಲು ಹೆಣಗಾಡಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ರಾಜಕಾಲುವೆ ಸಮಸ್ಯೆ ಬಗೆಹರಿಸಬೇಕು ಹಾಗೂ ಇಲ್ಲಿ ಕಸ ಹಾಕುವುದನ್ನು ನಿಯಂತ್ರಿಸಬೇಕು.

- ಎಚ್.ತುಕಾರಾಂ, ಮಲ್ಲತ್ತಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು